ಕಾಮನ್‌ವೆಲ್ತ್ ಗೇಮ್ಸ್‌ | ಪದಕ ಪಟ್ಟಿಯಲ್ಲಿ ಶತಕದತ್ತ ಭಾರತದ ಚಿತ್ತ

72 ರಾಷ್ಟ್ರಗಳ 5000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿರುವ 22ನೇ ಆವೃತ್ತಿಯ ಕ್ರೀಡಾ ಹಬ್ಬಕ್ಕೆ ಜುಲೈ 28ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಚಾಲನೆ ದೊರೆಯಲಿದೆ.
Commonwealth Games

ಕಾಮನ್‌ವೆಲ್ತ್ ಗೇಮ್ಸ್ 2022ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. 72 ರಾಷ್ಟ್ರಗಳ 5000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿರುವ 22ನೇ ಆವೃತ್ತಿಯ ಕ್ರೀಡಾ ಹಬ್ಬಕ್ಕೆ ಜುಲೈ 28ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಚಾಲನೆ ದೊರೆಯಲಿದೆ. 215 ಭಾರತೀಯ ಸ್ಪರ್ಧಿಗಳು ಈ ಬಾರಿಯ ಗೇಮ್ಸ್‌ನಲ್ಲಿ 15 ವಿಭಾಗಗಳಲ್ಲಿ, ಪದಕ ಬೇಟೆಯಲ್ಲಿ ತಮ್ಮ ಪ್ರದರ್ಶನ ಪಣಕ್ಕಿಡಲು ಸಜ್ಜಾಗಿದ್ದಾರೆ.

ಆಸ್ಟ್ರೇಲಿಯದ ಗೋಲ್‌ಕೋಸ್ಟ್‌ನಲ್ಲಿ ಆಯೋಜನೆಯಾಗಿದ್ದ 2018ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತೀಯರ ತಂಡ 26 ಚಿನ್ನ ಸೇರಿದಂತೆ ಒಟ್ಟು 66 ಪದಕಗಳನ್ನು ಗೆದ್ದು ಸಂಭ್ರಮಿಸಿತ್ತು. ಈ ಬಾರಿ ಪದಕಗಳ ಸಂಖ್ಯೆ ಶತಕ ದಾಟುವ ನಿರೀಕ್ಷೆಯಿದೆ. 2010ರಲ್ಲಿ ದೆಹಲಿಯಲ್ಲಿ ಆಯೋಜನೆಯಾಗಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ, ಇತಿಹಾಸದಲ್ಲಿಯೇ ಅತಿಹೆಚ್ಚು ಪದಕಗಳನ್ನು (101) ಗೆದ್ದಿತ್ತು.

1930ರಲ್ಲಿ ಮೊತ್ತ ಮೊದಲ ಬಾರಿಗೆ ಆಯೋಜನೆಯಾಗಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟ, ಇದೀಗ 22ನೇ ಆವೃತ್ತಿಗೆ ಕಾಲಿಡುತ್ತಿದೆ. ಇಂಗ್ಲೆಂಡ್ ದೇಶ ಮೂರನೇ ಬಾರಿಗೆ ಪ್ರತಿಷ್ಠಿತ ಕಾಮನ್‌ವೆಲ್ತ್‌ ಆಯೋಜನೆಗೆ ಸಿದ್ಧವಾಗಿದೆ. ಇದಕ್ಕೂ ಮೊದಲು 1934ರಲ್ಲಿ ಲಂಡನ್ ಮತ್ತು 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಕಾಮನ್‌ವೆಲ್ತ್‌ ಯಶಸ್ವಿಯಾಗಿ ನಡೆದಿತ್ತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕೂಟದಲ್ಲಿ, 1934ರಿಂದ ಭಾರತ ನಿರಂತರವಾಗಿ ಭಾಗವಹಿಸುತ್ತಿದೆ. ಈ ಬಾರಿ 19 ವಿಭಾಗಗಳಲ್ಲಿ 283 ಸ್ಪರ್ಧೆಗಳು ನಡೆಯಲಿದ್ದು, ಕ್ರೀಡಾಪಟುಗಳಿಗೆ 1,875 ಪದಕ ಗೆಲ್ಲಲು ಅವಕಾಶವಿದೆ. 15 ಕಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಬ್ರಿಟನ್‌ನಿಂದ ಅತೀ ಹೆಚ್ಚು ಅಂದರೆ 440 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

24 ವರ್ಷಗಳ ಬಳಿಕ ಕ್ರಿಕೆಟ್‌ ಸೇರ್ಪಡೆ

24 ವರ್ಷಗಳ ಬಳಿಕ ಕಾಮನ್‌ವೆಲ್ತ್‌ ಕೂಟಕ್ಕೆ ಕ್ರಿಕೆಟ್‌ ಮರಳಿ ಸೇರ್ಪಡೆಯಾಗಿದೆ. ಭಾರತ, ಶ್ರೀಲಂಕಾ, ಆಸ್ಟ್ರೇಲಿಯ, ಬಾರ್ಬಡೋಸ್, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕ ಸೇರಿದಂತೆ ಒಟ್ಟು 8 ಮಹಿಳಾ ತಂಡಗಳು ಭಾಗವಹಿಸುತ್ತಿವೆ.  ಇದಕ್ಕೂ ಮೊದಲು 1998ರಲ್ಲಿ ಪುರುಷರ ಕ್ರಿಕೆಟ್‌ ತಂಡಗಳು ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿದ್ದವು. ಪದಕ ಸುತ್ತಿನಲ್ಲಿ ಶಾನ್ ಪೊಲಾಕ್ ನೇತೃತ್ವದ ದಕ್ಷಿಣ ಆಫ್ರಿಕ ತಂಡ ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಚಿನ್ನ ಗೆದ್ದಿತ್ತು. ಮಹಿಳಾ ಕ್ರಿಕೆಟ್‌ ಜೊತೆಗೆ 3X3 ಬಾಸ್ಕೆಟ್‌ಬಾಲ್‌, ವ್ಹೀಲ್‌ ಚೇರ್‌ ಬಾಸ್ಕೆಟ್‌ಬಾಲ್‌ ಹಾಗೂ ಪ್ಯಾರಾ ಟೇಬಲ್‌ ಟೆನಿಸ್‌ ಸ್ಪರ್ಧೆಗಳು ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ಗೆ ಪ್ರವೇಶ ಗಿಟ್ಟಿಸಿದೆ. 

ಕಾಡಲಿದೆ ನೀರಜ್‌ ಚೋಪ್ರಾ ಅಭಾವ

Image
Commonwealth Games

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ, ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕದ ಜೊತೆಗೆ ರಾಷ್ಟ್ರೀಯ ದಾಖಲೆಯನ್ನೂ ಹೊಂದಿರುವ ನೀರಜ್‌ ಚೋಪ್ರಾ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿದಿರುವುದು ಭಾರತದ ಪಾಳಯಕ್ಕೆ ತೀವ್ರ ಹಿನ್ನಡೆಯಾಗಿದೆ. ಅಮೆರಿಕದ ಓರೆಗಾನ್‌ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಕೂಟದ ವೇಳೆ ಚೋಪ್ರಾಗೆ ತೊಡೆಸಂದುವಿನಲ್ಲಿ ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಸುಮಾರು ಒಂದು ತಿಂಗಳುಗಳ ಕಾಲ ಅಭ್ಯಾಸದಿಂದ ದೂರ ಉಳಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚೋಪ್ರಾ, ಬರ್ಮಿಂಗ್‌ಹ್ಯಾಮ್‌ಗೆ ತೆರಳದಿರಲು ನಿರ್ಧರಿಸಿದ್ದಾರೆ. ಇದರಿಂದಾಗಿ ಭಾರತಕ್ಕೆ ದೊಡ್ಡ ಪದಕವೊಂದು ಕೈ ತಪ್ಪಿದಂತಾಗಿದೆ. ಗೋಲ್‌ಕೋಸ್ಟ್‌ನಲ್ಲಿ ನಡೆದ ಕಳೆದ ಕಾಮನ್‌ವೆಲ್ತ್ ಗೇಮ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಚಾಂಪಿಯನ್ ಆಗಿದ್ದರು. ಆದರೆ ಈ ಪಟ್ಟವನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗದಿರುವುದು ದೇಶದ ಕ್ರೀಡಾಭಿಮಾನಿಗಳಿಗೆ ಭಾರೀ ನಿರಾಸೆ ಉಂಟುಮಾಡಿದೆ.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್ ಗೇಮ್ಸ್ ಕೂಟದಿಂದ ಹಿಂದೆ ಸರಿದ ನೀರಜ್ ಚೋಪ್ರಾ

ಪಿ ವಿ ಸಿಂಧು, ಲಕ್ಷ್ಯ ಸೇನ್, ನಿಖತ್ ಝರೀನ್ ಮೇಲೆ ನಿರೀಕ್ಷೆ

Image

ನೀರಜ್‌ ಚೋಪ್ರಾ ಹೊರತಾಗಿಯೂ ಭಾರತ ಬರ್ಮಿಂಗ್‌ಹ್ಯಾಮ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಉತ್ಸಾಹದಲ್ಲಿದೆ. ಬ್ಯಾಡ್ಮಿಂಟನ್‌ನಲ್ಲಿ ಪಿ ವಿ ಸಿಂಧು, ಲಕ್ಷ್ಯ ಸೇನ್ ಮತ್ತು ಕಿದಂಬಿ ಶ್ರೀಕಾಂತ್, ಬಾಕ್ಸಿಂಗ್‌ನಲ್ಲಿ ನಿಖತ್‌ ಝರೀನ್‌, ಲೊವ್ಲಿನಾ ಬೊರ್ಗೊಹೈನ್ ಚಿನ್ನದ ಪಂಚ್‌ನ ನಿರೀಕ್ಷೆಯಲ್ಲಿದ್ದಾರೆ. ಹಾಕಿ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿಯೂ ಭಾರತ ಪದಕ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮೀರಾಬಾಯಿ ಚಾನು ಮತ್ತು ಪೂರ್ಣಿಮಾ ಪಾಂಡೆ ಅವರನ್ನೊಳಗೊಂಡ ವೇಟ್‌ಲಿಫ್ಟಿಂಗ್‌ ತಂಡ ಮತ್ತು ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಮತ್ತು ಬಜರಂಗ್ ಪುನಿಯಾ ಅವರಂತಹ ದಿಗ್ಗಜರನ್ನು ಹೊಂದಿರುವ ಕುಸ್ತಿ ತಂಡವು ಕೂಡ ಪ್ರಶಸ್ತಿ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್