ಕಾಮನ್‌ವೆಲ್ತ್‌ ಗೇಮ್ಸ್‌ | ಕ್ರೀಡೆ ಮತ್ತು ರಾಜಕೀಯ ಸ್ನೇಹದ ಇತಿಹಾಸ

 • ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ 215 ಭಾರತೀಯ ಕ್ರೀಡಾಳುಗಳು 
 • 55 ದೇಶಗಳ ತಂಡಗಳು ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾಗಿ

ಪ್ರತೀ ನಾಲ್ಕು ವರ್ಷಕ್ಕೆ ಒಮ್ಮೆ ನಡೆಯುವ ಕಾಮನ್‌ವೆಲ್ತ್‌ ಕ್ರೀಡಾಕೂಟ 1930ರಲ್ಲಿ ಮೊದಲ ಬಾರಿಗೆ ಪ್ರಾರಂಭವಾಗಿದೆ. ಒಲಂಪಿಕ್ ಕ್ರೀಡಾಕೂಟ, ಏಷ್ಯನ್ ಗೇಮ್ಸ್‌ ನಂತರ ಪ್ರಪಂಚದ ಮೂರನೆಯ ಅತಿ ದೊಡ್ಡ ಕ್ರೀಡಾಕೂಟ ಕಾಮನ್‌ವೆಲ್ತ್ ಗೇಮ್ಸ್‌.

ಈ ಕ್ರೀಡಾಕೂಟ ಹಿಂದೆ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ದೇಶಗಳಿಗೆ ಮಾತ್ರ ಸೀಮಿತ. ಇದರಲ್ಲಿ 55 ದೇಶಗಳು ಭಾಗವಹಿಸುತ್ತವೆ. 2010ರಲ್ಲಿ ಈ ಕಾರ್ಯಕ್ರಮ ಭಾರತದ ರಾಜಧಾನಿ ದೆಹಲಿಯಲ್ಲಿ ನಡೆದಿತ್ತು.

ಈ ಬಾರಿ ಕ್ರೀಡಾಕೂಟ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದ್ದು, ಭಾರತದ 215 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕಾಮನ್‌ವೆಲ್ತ್ ‌ಗೇಮ್ಸ್‌ ಎನ್ನುವುದು ಕೇವಲ ಅಥ್ಲೆಟಿಕ್ ಆಟಗಳಿಗಷ್ಟೇ ಸೀಮಿತವಾಗದೆ, ಬೇಸಿಗೆ ಒಲಂಪಿಕ್ ಕ್ರೀಡೆಗಳು, ವಿಶೇಷವಾಗಿ ಜನಪ್ರಿಯ ಕಾಮನ್‌ವೆಲ್ತ್ ಕ್ರೀಡೆಗಳಾದ ನೆಟ್ ಬಾಲ್ ಮತ್ತು ರಗ್ಬಿ ಮುಂತಾದ ಆಟಗಳ ಸ್ಪರ್ಧೆಯೂ ಇರುತ್ತದೆ. 

ಕಾಮನ್‌ವೆಲ್ತ್ ಒಕ್ಕೂಟದ ರಾಜಕೀಯ ಇತಿಹಾಸ

ಕಾಮನ್‌ವೆಲ್ತ್ ಎಂಬ ವ್ಯಾಖ್ಯೆಯು ಒಂದು ರಾಜಕೀಯ ಒಕ್ಕೂಟವಾಗಿರದೆ, ಅಂತರ್ ಸರ್ಕಾರಿ ಸಂಸ್ಥೆ. ಇದರ ಮೂಲಕ ರಾಷ್ಟ್ರಗಳು ತಮ್ಮ ವೈವಿಧ್ಯಮಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಹಿನ್ನೆಲೆಯಲ್ಲಿ ಸಮಾನತೆ ಕಾಣಲು ಸಹಾಯಮಾಡುತ್ತದೆ ಎಂಬ ಧ್ಯೇಯ ಹೊಂದಿದೆ. ಕಾಮನ್‌ವೆಲ್ತ್ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧಗಳನ್ನು ಬೆಸೆಯುವ ಒಂದು ಪ್ರಯತ್ನ. ಕ್ರೀಡೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ದೇಶಗಳ ನಡುವೆ ಬೆಳೆಸಿ  “ಸ್ನೇಹ ಕ್ರೀಡಾ ಕೂಟ'ವಾಗಿ ಉಳಿಸುವ ಪ್ರಯತ್ನ ನಡೆದಿದೆ. 

1977ರ ಗ್ಲೆನಿಗಲ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕಾಮನ್‌ವೆಲ್ತ್ ರಾಷ್ಟ್ರಗಳು ದಕ್ಷಿಣ ಆಫ್ರಿಕವನ್ನು (ಆಗ ಇನ್ನೂ ಕಾಮನ್‌ವೆಲ್ತ್‌ನ ಸದಸ್ಯವಾಗಿರಲಿಲ್ಲ) ಕ್ರೀಡೆಯಿಂದ ಹೊರಗಿಟ್ಟು ವರ್ಣಬೇಧ ನೀತಿಯ ವಿರುದ್ಧ ಪ್ರತಿರೋಧ ತೋರಿಸಿದ್ದವು. ಆದರೆ 1986ರ ಕ್ರೀಡೆಯಲ್ಲಿ ಇತರೆ ರಾಷ್ಟ್ರಗಳು ಗ್ಲೆನಿಗಲ್ಸ್ ಒಪ್ಪಂದ ಜಾರಿಗೆ ಮಾಡಿಲ್ಲ ಎಂದು ಆಫ್ರಿಕ, ಏಷ್ಯಾ, ಮತ್ತು ಕೆರೆಬಿಯನ್ ದೇಶಗಳು 'ಕಾಮನ್‌ವೆಲ್ತ್ ಗೇಮ್ಸ್‌'  ಬಹಿಷ್ಕರಿಸಿದ್ದವು.

1971ರಲ್ಲಿ ಸಿಂಗಾಪುರದಲ್ಲಿ ಘೋಷಿಸಿದ ಕಾಮನ್‌ವೆಲ್ತ್‌ ಗುರಿಗಳು

ಕಾಮನ್‌ವೆಲ್ತ್ ಈ ಕೆಳಕಂಡ ಗುರಿಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತದೆ. ವಿಶ್ವ ಶಾಂತಿ ಕಾಪಾಡುವುದು, ಪ್ರಾತಿನಿಧ್ಯದ ಪ್ರಜಾಪ್ರಭುತ್ವ ಉತ್ತೇಜಿಸುವುದು ಮತ್ತು ವ್ಯಕ್ತಿ ಸ್ವಾತಂತ್ರದ ಸಮಾನತೆ ಸಾಧಿಸುವುದು ಮತ್ತು ವರ್ಣಬೇಧ ನೀತಿ ವಿರೋಧಿಸುವುದು; ಬಡತನದ, ರೋಗದ ವಿರುದ್ಧ ಹೋರಾಡುವುದು ಹಾಗೂ ಸ್ವತಂತ್ರ ವ್ಯಾಪಾರ ಜೊತೆಗೆ 1979ರ ಲುಸಾಕಾ ಘೋಷಣೆಯಂತೆ ಲಿಂಗ ಬೇಧವನ್ನು ವಿರೋಧಿಸುವುದು ಮೊದಲಾದ ಧ್ಯೇಯಗಳಿದ್ದವು. ನಂತರ 1989ರಲ್ಲಿ ಲಾಂಗ್ ಕವಿಯ ಘೋಷಣೆಯಂತೆ ಪರಿಸರ ಸಂರಕ್ಷಣೆಯನ್ನೂ ಸೇರಿಸಲಾಗಿತ್ತು.

2003ರ ಆಸೋ ರಾಕ್ ಘೋಷಣೆಯ ಮುಖ್ಯಾಂಶಗಳಂತೆ ಕಾಮನ್‌ವೆಲ್ತ್‌ನ ಅತ್ಯುನ್ನತ ಪ್ರಾಧಾನ್ಯತೆಯ ಗುರಿ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಯನ್ನು ಉತ್ತೇಜಿಸುವುದು. "ನಾವು ಪ್ರಜಾಪ್ರಭುತ್ವ, ಉತ್ತಮ ಸರ್ಕಾರ, ಮಾನವ ಹಕ್ಕುಗಳು, ಲಿಂಗ ಸಮಾನತೆ ಮತ್ತು ಜಾಗತೀಕರಣದ ಲಾಭಾಂಶಗಳ ಸಮನಾದ ಹಂಚುವಿಕೆಗೆ ಬದ್ಧರಾಗಿರುತ್ತೇವೆ" ಎಂದು ಕಾಮನ್‌ವೆಲ್ತ್ ಹೇಳಿದೆ.

ಪ್ರಜಾಪ್ರಭುತ್ವ, ಆರ್ಥಿಕತೆ, ಲಿಂಗ, ಆಡಳಿತ, ಮಾನವ ಹಕ್ಕುಗಳು, ಕಾನೂನು, ಚಿಕ್ಕ ರಾಷ್ಟ್ರಗಳು, ಕ್ರೀಡೆ, ಸಹನೆ ಹಾಗೂ ಯುವಶಕ್ತಿ ಮೊದಲಾದ ವಿಚಾರಗಳಲ್ಲಿ ಕಾಮನ್‌ವೆಲ್ತ್ ಒಂದು ಅಂತರಾಷ್ಟ್ರೀಯ ನ್ಯಾಯಸ್ಥಾನವಾಗಿದ್ದು, ಧೀರ್ಘಕಾಲದಿಂದ ತನ್ನದೇ ಪ್ರತ್ಯೇಕತೆ ಹೊಂದಿದೆ. ಇದರ ಮೂಲಕ ಆರ್ಥಿಕವಾಗಿ ಉಚ್ಛಮಟ್ಟದಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು (ಬ್ರಿಟನ್‌ ಸಾಮ್ರಾಜ್ಯ, ಆಸ್ಟ್ರೇಲಿಯ, ಕೆನಡಾ, ಸಿಂಗಪೂರ್, ಹಾಗೂ ನ್ಯೂಜಿಲ್ಯಾಂಡ್) ಮತ್ತು ಪ್ರಪಂಚದ ಹಲವಾರು ಬಡರಾಷ್ಟ್ರಗಳು ಒಮ್ಮತದ ಮೂಲಕ ಒಂದು ಒಪ್ಪಂದಕ್ಕೆ ಬರುವ ಉದ್ದೇಶ ಹೊಂದಿದೆ.

ಈ ಗುರಿ ಸಾಧಿಸುವುದು ಕಷ್ಟಕರ. ಏಕೆಂದರೆ 1960ಮತ್ತು 1970ರಲ್ಲಿ ರೊಡೇಶಿಯಾ ಕುರಿತಾಗಿ ಆದ ಅಸಮಾಧಾನಗಳು ಮತ್ತು 1980ರಲ್ಲಿ ದಕ್ಷಿಣ ಆಫ್ರಿಕದಲ್ಲಿ ವರ್ಣಬೇಧ ನೀತಿಯಿಂದ ಆದ ಅಸಮ್ಮತಿಗಳು ಯುನೈಟೆಡ್ ಕಿಂಗ್‌ಡಂ  ಮತ್ತು ಆಫ್ರಿಕಾದ ಸದಸ್ಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡುತ್ತಾ ಬಂದಿದೆ.

ಭಾರತ ಮತ್ತು  ಕಾಮನ್‌ವೆಲ್ತ್‌ ಕ್ರೀಡಾಕೂಟ

 • ಭಾರತವು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 503 ಪದಕಗಳನ್ನು ಗೆದ್ದಿದೆ.
 • ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಕೇವಲ ಎರಡು ಬಾರಿ ಮಾತ್ರ ಪದಕವಿಲ್ಲದೆ ಮರಳಿದ್ದರು. 
 • 1938 (ಸಿಡ್ನಿ) ಮತ್ತು 1954ರ (ವ್ಯಾಂಕೋವರ್) ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳು ಯಾವುದೇ ಪದಕ ಗಳಿಸಲಿಲ್ಲ
 • 1934ರಲ್ಲಿ ಲಂಡನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕುಸ್ತಿಪಟು ರಶೀದ್ ಅನ್ವರ್ ಹೊಸ ಇತಿಹಾಸ ಬರೆದಿದ್ದರು 
 • 1934ರ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಕೇವಲ ಆರು ಮಂದಿ ಭಾರತೀಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಿದ್ದರು.
 •  1934ರ ಕ್ರೀಡಾಕೂಟದಲ್ಲಿ ಆರು ಸದಸ್ಯರ ಭಾರತ ತಂಡವು ಅಥ್ಲೆಟಿಕ್ಸ್ ಮತ್ತು ಕುಸ್ತಿ ವಿಭಾಗಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಅಲ್ಲದೆ ಚೊಚ್ಚಲ ಸೀಸನ್​ನಲ್ಲೇ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಶೀದ್ ಅನ್ವರ್ ಇತಿಹಾಸ ನಿರ್ಮಿಸಿದ್ದರು.
 • ಭಾರತಕ್ಕೆ ಚಿನ್ನದ ಪದಕ ಸಿಕ್ಕಿದ್ದು 1958ರಲ್ಲಿ. ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಅವರು ಕಾರ್ಡಿಫ್​ನಲ್ಲಿ ನಡೆದ ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಓಟದಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದರು.
 • 1978ರಲ್ಲಿ ಕೆನಡಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಅಮಿ ಘಿಯಾ ಮತ್ತು ಕನ್ವಾಲ್ ಥಕರ್ ಸಿಂಗ್ ಜೋಡಿಯು ಬ್ಯಾಡ್ಮಿಂಟನ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿಯಾಗಿದ್ದಾರೆ.
 • ಮಿಲ್ಕಾ ಸಿಂಗ್ ಅವರ ಐತಿಹಾಸಿಕ ಸಾಧನೆಯನ್ನು 52 ವರ್ಷಗಳ ನಂತರ ಡಿಸ್ಕಸ್ ಎಸೆತಗಾತಿ ಕೃಷ್ಣ ಪೂನಿಯಾ ಅವರು ಸರಿಗಟ್ಟಿದ್ದರು. 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಪೂನಿಯಾ ಚಿನ್ನದ ಪದಕ ಗೆದಿದ್ದರು.
 • ಶೂಟರ್ ರೂಪಾ ಉನ್ನಿಕೃಷ್ಣನ್ ಅವರು ಕೌಲಾಲಂಪುರದಲ್ಲಿ 1998ರ ಆವೃತ್ತಿಯ ಕ್ರೀಡಾಕೂಟದಲ್ಲಿ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು.
 • ಬಿಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯ ಭೀಮನ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ಅವರು 1966ರ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
 •  ಮ್ಯಾಂಚೆಸ್ಟರ್‌ನಲ್ಲಿ ನಡೆದ 2002ರ ಆವೃತ್ತಿಯ ಕ್ರೀಡಾಕೂಟದ ನಂತರ ಭಾರತವು ಪದಕಗಳ ಪಟ್ಟಿಯಲ್ಲಿ ಟಾಪ್​-5 ನಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದೆ.
 • 2006 ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಡಿಸ್ಕಸ್ ಎಸೆತಗಾರ ರಂಜಿತ್ ಕುಮಾರ್ ಕಂಚಿನ ಪದಕ ಗೆಲ್ಲುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ಯಾರಾ ಅಥ್ಲೀಟ್ ಎನಿಸಿಕೊಂಡರು.
 •  ಕಾಮನ್​ವೆಲ್ತ್ ಕ್ರೀಡಾಕೂಟದ ಅತ್ಯಂತ ಯಶಸ್ವಿ ಭಾರತೀಯ ಅಥ್ಲೀಟ್ ಶೂಟರ್ ಜಸ್ಪಾಲ್ ರಾಣಾ. ಜಸ್ಪಾಲ್ ಅವರು ಇದುವರೆಗೆ ಭಾರತಕ್ಕಾಗಿ ಒಟ್ಟು 15 ಪದಕಗಳನ್ನು ಗೆದ್ದಿದ್ದಾರೆ.
 • ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಸೇರಿದಂತೆ ಒಟ್ಟು 322 ಸದಸ್ಯರ ಭಾರತೀಯ ತಂಡವು ಭಾಗವಹಿಸಲಿದೆ. ಇದರಲ್ಲಿ 215 ಕ್ರೀಡಾಪಟುಗಳಿದ್ದು, ಇವರು 19 ಕ್ರೀಡೆಗಳ ಮೂಲಕ 141 ವಿವಿಧ ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ
ನಿಮಗೆ ಏನು ಅನ್ನಿಸ್ತು?
0 ವೋಟ್