ಕೂಲಿಂಗ್- ಆಫ್ ನಿಯಮ | ಅಧ್ಯಕ್ಷ- ಕಾರ್ಯದರ್ಶಿಗಳಾಗಿ ಮುಂದುವರಿದ ಗಂಗೂಲಿ, ಜೇ ಶಾ

  • ಬಿಸಿಸಿಐ ಒಂದು ಸ್ವತಂತ್ರ ಸಂಸ್ಥೆ
  • ಮತ್ತೊಂದು ಅವಧಿಗೆ ಗಂಗೂಲಿ 

ರಾಜ್ಯ ಕ್ರಿಕೆಟ್ ಸಂಸ್ಥೆಗಳು ಮತ್ತು ಬಿಸಿಸಿಐನ ಪದಾಧಿಕಾರಿಗಳ ಕಡ್ಡಾಯ ಕೂಲಿಂಗ್ ಆಫ್‌ ಅವಧಿಯನ್ನು ರದ್ದುಗೊಳಿಸುವಂತೆ ಕೋರಿ ಬಿಸಿಸಿಐ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಅಂಗೀಕರಿಸಿದೆ. ಬಿಸಿಸಿಐ ಈ ಸಂಬಂಧ ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಅವಕಾಶ ಕೋರಿತ್ತು. ಇದೀಗ ನ್ಯಾಯಾಲಯ ತಿದ್ದುಪಡಿಗೆ ಅವಕಾಶ ನೀಡಿದ ನಂತರ ಸೌರವ್ ಗಂಗೂಲಿ ಮತ್ತು ಜೇ ಶಾ ಅವರು ಇನ್ನೂ ಮೂರು ವರ್ಷ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಾಗಿದೆ.

ತಿದ್ದುಪಡಿಯ ನಂತರ ಪದಾಧಿಕಾರಿಗಳು ರಾಜ್ಯ ಮಟ್ಟದಲ್ಲಿ ಆರು ವರ್ಷ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆರು ವರ್ಷ ಅಧಿಕಾರ ಹಿಡಿಯಲು ಸಾಧ್ಯವಾಗಲಿದೆ. "ಬಿಸಿಸಿಐ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಕಾರ್ಯನಿರ್ವಹಿಸುವಿಕೆಯ ಮೇಲೆ ಸದಾ ಕಣ್ಣಿಡಲು ಸಾಧ್ಯವಿಲ್ಲ" ಎಂದಿರುವ ಸುಪ್ರೀಂ ಕೋರ್ಟ್‌, ಬಿಸಿಸಿಐಗೆ ಕೆಲ ಮಹತ್ವದ ಪ್ರಶ್ನೆಗಳನ್ನೂ ಕೇಳಿತ್ತು.

ತನ್ನ ಸಂವಿಧಾನದಲ್ಲಿ ತಿದ್ದುಪಡಿ ಮಾಡಿಕೊಂಡು ಕಡ್ಡಾಯ ಕೂಲಿಂಗ್‌ ಆಫ್‌ ಅವಧಿಯ ನಿಯಮವನ್ನು ರದ್ದುಗೊಳಿಸಲು ಅನುಮತಿ ಕೋರಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠ ವಿಚಾರಣೆ ನಡೆಸಿ ತೀರ್ಪು ನೀಡಿದೆ.

ಈ ಸದ್ದಿ ಓದಿದ್ದೀರಾ? ಎಂಎಸ್ ಧೋನಿ ಅವಕಾಶ ನೀಡಿದ್ದರೆ, ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದೆ: ಈಶ್ವರ್ ಪಾಂಡೆ

ಬಿಸಿಸಿಐ ಅಧ್ಯಕ್ಷರಾಗಿ ಸೌರವ್‌ ಗಂಗೂಲಿ, ಕಾರ್ಯದರ್ಶಿಯಾಗಿ ಜೇ ಶಾ ಅವರೇ ಮತ್ತೊಂದು ಅವಧಿಗೆ ಮುಂದುವರಿಯಬೇಕು ಎನ್ನುವ ಕಾರಣಕ್ಕೆ ಕೂಲಿಂಗ್‌ ಆಫ್‌ ನಿಯಮ ರದ್ದುಗೊಳಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಾಗಿದೆ. ನ್ಯಾಯಮೂರ್ತಿ ಲೋಧಾ ಸಮಿತಿ ಮಾಡಿದ್ದ ಶಿಫಾರಸುಗಳಲ್ಲಿ ಕೂಲಿಂಗ್‌ ಆಫ್‌ ನಿಯಮವೂ ಒಂದಾಗಿತ್ತು. ಇದೀಗ ಕೊನೆ ಪಕ್ಷ ಮತ್ತೊಂದು ಅವಧಿಗೆ ಮುಂದುವರಿಯಲು ಅವಕಾಶ ನೀಡುವಂತೆ ಗಂಗೂಲಿ ಹಾಗೂ ಶಾ ಬಿಸಿಸಿಐ ವಕೀಲರ ಮೂಲಕ ಮನವಿ ಸಲ್ಲಿಸಿದ್ದರು. 

ಬಿಸಿಸಿಐ ಮಾಡಲು ಬಯಸಿದ ತಿದ್ದುಪಡಿ ಪ್ರಕಾರ, ಒಬ್ಬ ಪದಾಧಿಕಾರಿಯು ರಾಜ್ಯ ಅಸೋಸಿಯೇಷನ್ ​​ಅಥವಾ ಬಿಸಿಸಿಐ ಅಥವಾ ಎರಡರ ಸಂಯೋಜನೆಯಲ್ಲಿ ಮೂರು ವರ್ಷಗಳ ಕಾಲ ಸತತ ಎರಡು ಅವಧಿಗಳನ್ನು ನಿಭಾಯಿಸಿದ ಮೇಲೆ ಕೂಲಿಂಗ್-ಆಫ್ ಅವಧಿ ಅನ್ವಯವಾಗುತ್ತದೆ. ಬಿಸಿಸಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠಕ್ಕೆ, ದೇಶದಲ್ಲಿ ಕ್ರಿಕೆಟ್ ಆಟವು ಗಣನೀಯವಾಗಿ ಸುವ್ಯವಸ್ಥಿತವಾಗಿದೆ ಎಂದು ಹೇಳಿದರು.

ರದ್ದಿಗೆ ಪಟ್ಟು ಏಕೆ?

ಸೌರವ್ ಗಂಗೂಲಿ ಮತ್ತು ಜೇ ಶಾ ಅಧಿಕಾರ 2020ರ ಜುಲೈಗೆ ಮುಕ್ತಾಯಗೊಂಡಿದೆ. ಗಂಗೂಲಿ ಹಾಗೂ ಶಾ ಈಗಾಗಲೇ ಕ್ರಿಕೆಟ್‌ ಆಡಳಿತಗಾರರಾಗಿ ಸತತ 6 ವರ್ಷಗಳ ಕಾಲ ಅಧಿಕಾರದಲ್ಲಿದ್ದಾರೆ. ಬಿಸಿಸಿಐ ಗದ್ದುಗೆ ಏರುವ ಮೊದಲು ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ, ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಶಾ ತಲಾ 3 ವರ್ಷ ಅಧಿಕಾರ ಅನುಭವಿಸಿದ್ದರು. ಇದೀಗ ಬಿಸಿಸಿಐನಲ್ಲೂ 3 ವರ್ಷ ಪೂರ್ಣಗೊಂಡಿದೆ. ಆದರೆ ಅಧಿಕಾರ ಕೈತಪ್ಪಬಾರದು ಎನ್ನುವ ಉದ್ದೇಶದಿಂದ ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಅವಕಾಶ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಾಗಿದೆ.

ಏನಿದು ಕೂಲಿಂಗ್‌ ಆಫ್‌ ನಿಯಮ?

ಬಿಸಿಸಿಐ ಸಂವಿಧಾನದ ಪ್ರಕಾರ ರಾಜ್ಯ ಕ್ರಿಕೆಟ್‌ ಸಂಸ್ಥೆ ಇಲ್ಲವೇ ಬಿಸಿಸಿಐ ಆಡಳಿತದಲ್ಲಿ ಎರಡು ಸತತ ಅವಧಿಗಳ ನಡುವೆ ಕಡ್ಡಾಯವಾಗಿ 3 ವರ್ಷ ಬಿಡುವು ಪಡೆಯಬೇಕು. ಒಬ್ಬರೇ ಹೆಚ್ಚು ಸಮಯ ಅಧಿಕಾರದಲ್ಲಿ ಇದ್ದರೆ ಅಧಿಕಾರದ ದುರುಪಯೋಗವಾಗಬಹುದು. ಇತರ ಅರ್ಹ ವ್ಯಕ್ತಿಗಳಿಗೆ ಅಧಿಕಾರ ಸಿಗದೆ ಇರಬಹುದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ತರಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್