ಸಾವಿರಾರು ಸಿಬ್ಬಂದಿಯನ್ನು ವಜಾ ಮಾಡಿದ ಬೈಜೂಸ್ | ಐಸಿಸಿ, ಬಿಸಿಸಿಐಗೆ ಆತಂಕ!

Cricket
  • ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ ₹4.61 ಕೋಟಿ ಪಾವತಿಸುವ ಬೈಜೂಸ್‌
  • ಫಿಫಾ ಮುಖ್ಯ ಪ್ರಾಯೋಜಕ, ಐಸಿಸಿಯ ʻಜಾಗತಿಕ ಪ್ರಾಯೋಜಕʼ

ವಿಶ್ವದ ಅತ್ಯಂತ ಮೌಲ್ಯಯುತ ʻಎಜುಟೆಕ್‌ʼ ಕಂಪನಿ ಬೆಂಗಳೂರು ಮೂಲದ ಬೈಜೂಸ್‌, ತನ್ನ ಕಂಪನಿಯಲ್ಲಿ ಪೂರ್ಣವಧಿ ಮತ್ತು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 2500ಕ್ಕೂ ಅಧಿಕ ಸಿಬ್ಬಂದಿಯನ್ನು ವಜಾಗೊಳಿಸಿದೆ. ಉದ್ಯೋಗ ಕಳೆದುಕೊಂಡವರಲ್ಲಿ ಹೆಚ್ಚಿನವರು ಮಾರಾಟ ಮತ್ತು ಮಾರ್ಕೆಟಿಂಗ್, ಕಾರ್ಯಾಚರಣೆ, ಕಂಟೆಂಟ್‌ ಹಾಗೂ ವಿನ್ಯಾಸ ತಂಡಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಂಪನಿಯ ನಿರ್ವಹಣಾ ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ಸಿಬ್ಬಂದಿಗಳನ್ನು ವಜಾಗೊಳಿಸಲು ಮುಂದಾಗಿರುವುದಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಬೈಜೂಸ್‌ ಸಂಸ್ಥೆಯಿಂದ ಈ ಸುದ್ದಿ ಹೊರಬರುತ್ತಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್‌ ನಿಯಂತ್ರಣ ಸಂಸ್ಥೆಗೆ (ಬಿಸಿಸಿಐ) ಆತಂಕ ಎದುರಾಗಿದೆ. ಎರಡೂ ಸಂಸ್ಥೆಗಳಿಗೆ ಬೈಜೂಸ್‌ ಪ್ರಮುಖ ಪ್ರಾಯೋಜಕರಾಗಿರುವುದೇ ಈ ಆತಂಕಕ್ಕೆ ಕಾರಣ.

ಪ್ರತಿ ಪಂದ್ಯಕ್ಕೆ 4.61 ಕೋಟಿ ಪಾವತಿಸುವ ಬೈಜೂಸ್‌ !

2017ರಿಂದ ಟೀಮ್‌ ಇಂಡಿಯಾದ ಆಟಗಾರರು ಧರಿಸುವ ಜೆರ್ಸಿಯ ಮುಖ್ಯ ಪ್ರಾಯೋಜಕತ್ವವನ್ನು ಬೈಜೂಸ್‌ ವಹಿಸಿಕೊಂಡಿದೆ. 2017ರಿಂದ 2022ರ ಅವಧಿಯಲ್ಲಿ ಬಿಸಿಸಿಐಗೆ ಪ್ರಾಯೋಜಕತ್ವ ಮೊತ್ತವಾಗಿ ₹1,079 ಕೋಟಿಯನ್ನು ಬೈಜೂಸ್‌ ಪಾವತಿಸಿದೆ. ಈ ವರ್ಷದ ಆರಂಭದಲ್ಲಿ ಪ್ರಾಯೋಜಕತ್ವ ಒಡಂಬಡಿಕೆಯನ್ನು  ನವೀಕರಿಸಿದ್ದ ಎಜುಟೆಕ್‌ ಕಂಪನಿ, 2023ರ ಏಕದಿನ ವಿಶ್ವಕಪ್‌ ಅವಧಿಯವರೆಗೂ ಜೆರ್ಸಿಯ ಮುಖ್ಯ ಪ್ರಾಯೋಜಕರಾಗಿ ಮುಂದುವರಿಸಲು ಬಿಸಿಸಿಐ ಜೊತೆ ಒಪ್ಪಂದಕ್ಕೆ ಸಹಿಹಾಕಿದೆ. ಈ ಒಪ್ಪಂದದ ಪ್ರಕಾರ ದ್ವಿಪಕ್ಷೀಯ ಸರಣಿಯ ವೇಳೆ  ಟೀಮ್‌ ಇಂಡಿಯಾದ ಪ್ರತಿ ಪಂದ್ಯಕ್ಕೆ ₹4.61 ಕೋಟಿ ಮತ್ತು ಐಸಿಸಿ ಕೂಟಗಳಲ್ಲಿ ₹1.51 ಕೋಟಿಯನ್ನು ಬೈಜೂಸ್‌ ಪಾವತಿಸುತ್ತಿದೆ.

Image
Cricket

ಐಸಿಸಿಯ ʻಜಾಗತಿಕ ಪ್ರಾಯೋಜಕʼ

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ)ಯ ʻಜಾಗತಿಕ ಪ್ರಾಯೋಜಕʼ ಸ್ಥಾನವನ್ನು ಬೈಜೂಸ್‌ ವಹಿಸಿಕೊಂಡಿದೆ. ಸದ್ಯದ ಒಪ್ಪಂದ, 2023ರ ಏಕದಿನ ವಿಶ್ವಕಪ್‌  ಅವಧಿಯವರೆಗೂ ಮುಂದುವರಿಯಲಿದೆ. ಮೂಲಗಳ ಪ್ರಕಾರ ಇದಕ್ಕಾಗಿ ₹120ರಿಂದ ₹130 ಕೋಟಿ ಮೊತ್ತವನ್ನು ಜೈಜೂಸ್‌ ಐಸಿಸಿಗೆ ಪಾವತಿಸುತ್ತಿದೆ.

ಫಿಫಾ ಮುಖ್ಯ ಪ್ರಾಯೋಜಕ

ನವೆಂಬರ್ 21 ರಿಂದ ಡಿಸೆಂಬರ್ 18ರವರೆಗೆ ಖತಾರ್‌ನಲ್ಲಿ ನಡೆಯಲಿರುವ ಫುಟ್ಬಾಲ್‌ ವಿಶ್ವಕಪ್‌ನ ಮುಖ್ಯ ಪ್ರಾಯೋಜಕತ್ವವನ್ನೂ ಬೈಜೂಸ್‌ ಪಡೆದಿದೆ. ಇದಕ್ಕಾಗಿ ಸುಮಾರು ₹400 ಕೋಟಿಗಿಂತಲೂ ಅಧಿಕ ಮೊತ್ತವನ್ನು ಬೈಜೂಸ್‌ ಫಿಫಾ ಸಂಸ್ಥೆಗೆ ಪಾವತಿಸಬೇಕಿದೆ. ಇದೇ ಮೊದಲ ಬಾರಿಗೆ ಎಜುಟೆಕ್‌ ಕಂಪನಿಯೊಂದು ಫುಟ್ಬಾಲ್‌ ವಿಶ್ವಕಪ್‌ನಂತಹ ಮಹಾ ಕೂಟದ ಪ್ರಾಯೋಜಕತ್ವ ವಹಿಸಿದೆ.

ಈ ಸುದ್ದಿ ಓದಿದ್ದೀರಾ ? : ಒಂದು ನಿಮಿಷದ ಓದು | ಡೇವಿಡ್ ವಾರ್ನರ್ ಸೂಪರ್​ ಮ್ಯಾನ್ ಕ್ಯಾಚ್‌

ಟಾಪರ್‌ ಮತ್ತು ವೈಟ್‌ಹ್ಯಾಟ್‌ ಉದ್ಯೋಗಿಗಳಿಗೇ ಶಾಕ್‌ 

ಕಳೆದೆರಡು ವರ್ಷಗಳಲ್ಲಿ ಬೈಜೂಸ್‌ ಸ್ವಾಧೀನಪಡಿಸಿಕೊಂಡಿದ್ದ `ಟಾಪರ್‌' ಮತ್ತು `ವೈಟ್‌ಹ್ಯಾಟ್‌' ಕಂಪನಿಗಳಲ್ಲಿದ್ದ 1500ಕ್ಕೂ ಅಧಿಕ ಮಂದಿ ಉದ್ಯೋಗಿಗಳನ್ನು ದಿಢೀರ್‌ ವಜಾಗೊಳಿಸಲಾಗಿದೆ. ಈ ಕುರಿತು ಜೂನ್ 27 ಮತ್ತು 28ರಂದು ಸಿಬ್ಬಂದಿಗೆ ಈಮೇಲ್‌ ಮತ್ತು ಫೋನ್‌ ಮೂಲಕ ಮಾಹಿತಿ ನೀಡಲಾಗಿದ್ದು, ಜೂನ್‌ 29 `ನಿಮ್ಮ ಅಂತಿಮ ಕೆಲಸದ ದಿನ'ವಾಗಿರಲಿದೆ ಎಂದು ಸೂಚನೆ ಕೊಟ್ಟಿತ್ತು. ಆದರೆ ಈ ಕುರಿತು ಅಧಿಕೃತವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಬೈಜೂಸ್‌ ಸಂಸ್ಥೆ ನಿರಾಕರಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್