ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಕರ್ನಾಟಕದ ಕ್ರೀಡಾಪಟು ಐಶ್ವರ್ಯ

Doping
  • ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಬಿದ್ದ ಕನ್ನಡತಿ  ಐಶ್ವರ್ಯ 
  • ರಿಲೇ ತಂಡದಲ್ಲಿ ಧನಲಕ್ಷ್ಮೀ ಸ್ಥಾನಕ್ಕೆ ಆಯ್ಕೆಯಾದ ಎಂ.ವಿ. ಜಿಲ್ನಾ 

ಟ್ರಿಪಲ್‌ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಕನ್ನಡತಿ  ಐಶ್ವರ್ಯ ಬಾಬು ಮತ್ತು ಓಟಗಾರ್ತಿ ಎಸ್‌. ಧನಲಕ್ಷ್ಮೀ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಆ ಮೂಲಕ ಮುಂದಿನ ವಾರದಿಂದ ಆರಂಭವಾಗಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. 

ಎರಡು ಬಾರಿ ನಡೆಸಲಾದ ದ್ರವ್ಯ ಪರೀಕ್ಷೆಯಲ್ಲಿ ಇಬ್ಬರು ಅಥ್ಲೀಟ್‌ಗಳು, ನಿಷೇಧಿತ ದ್ರವ್ಯ ಸೇವನೆ ಮಾಡಿರುವುದು ಪತ್ತೆಯಾಗಿದೆ.  ಕಾಮನ್‌ವೆಲ್ತ್‌ ಗೇಮ್ಸ್‌ಗೆ ಹೆಸರಿಸಲಾಗಿದ್ದ ಭಾರತದ  37 ಅಥ್ಲೀಟ್‌ಗಳ ಆರಂಭಿಕ ತಂಡದಲ್ಲಿ ಐಶ್ವರ್ಯಾ ಬಾಬು ಮತ್ತು ಎಸ್‌. ಧನಲಕ್ಷ್ಮೀ ಸ್ಥಾನ ಪಡೆದಿದ್ದರು.  ತಮಿಳುನಾಡಿನ 24 ವರ್ಷದ ಧನಲಕ್ಷ್ಮೀ, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 100 ಮೀ. ಮತ್ತು 4×100 ಮೀ. ರಿಲೇ ತಂಡದಲ್ಲಿ  ಭಾಗವಹಿಸಬೇಕಿತ್ತು. ಇದೀಗ ಧನಲಕ್ಷ್ಮೀ ಅವರನ್ನು ಕೈಬಿಟ್ಟ ಕಾರಣ ಎಂ.ವಿ. ಜಿಲ್ನಾ ಅವರನ್ನು ರಿಲೇ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Image

ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್‌ನಲ್ಲಿ ಭಾಗವಹಿಸಬೇಕಾಗಿದ್ದ ಧನಲಕ್ಷ್ಮೀ, ವೀಸಾ ಸಮಸ್ಯೆಯಿಂದಾಗಿ ವಿಮಾನ ತಪ್ಪಿಸಿಕೊಂಡಿದ್ದರು. ಇತ್ತೀಚೆಗೆ ಟರ್ಕಿಯಲ್ಲಿ ನಡೆದ ಕೂಟವೊಂದರಲ್ಲಿ ಎಸ್. ಧನಲಕ್ಷ್ಮೀ 100 ಮೀ. ಓಟವನ್ನು 11.26 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿದ್ದರು. ಆ ಮೂಲಕ ಭಾರತೀಯ ಅಥ್ಲೀಟ್‌ಗಳ ಸಾರ್ವಕಾಲಿಕ ವೇಗದ ದಾಖಲೆಯ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದಿದ್ದರು. ಜೂನ್ 26ರಂದು ನಡೆದ ಕೊಸನೋವ್ ಸ್ಮಾರಕ ಅಥ್ಲೆಟಿಕ್ಸ್ ಕೂಟದಲ್ಲಿ ಧನಲಕ್ಷ್ಮೀ 200 ಮೀ. ಓಟದಲ್ಲಿ ವೈಯಕ್ತಿಕ ಶ್ರೇಷ್ಠ ವಿಭಾಗದಲ್ಲಿ 22.89 ಸೆಕೆಂಡ್ ಗಳಲ್ಲಿ ಓಡಿ ಚಿನ್ನ ಗೆದ್ದಿದ್ದರು. ಸರಸ್ವತಿ ಸಾಹ ಮತ್ತು ಹಿಮಾ ದಾಸ್ ಬಳಿಕ 23 ಸೆಕೆಂಡ್‌ ಸಮಯದಲ್ಲಿ 200 ಮೀ, ಓಡಿದ 3ನೇ ಭಾರತೀಯ ಓಟಗಾರ್ತಿ ಎಂಬ ಹೆಗ್ಗಳಿಕೆಗೂ ಧನಲಕ್ಷ್ಮೀ ಪಾತ್ರರಾಗಿದ್ದರು.

ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ, ಐಶ್ವರ್ಯಾ ಬಾಬು 14.14 ಮೀಟರ್ ದೂರ ಹಾರುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಆ ಮೂಲಕ ಮಯೂಖಾ ಜಾನಿ ಹೆಸರಿನಲ್ಲಿದ್ದ 11 ವರ್ಷ ಹಳೆಯ ರಾಷ್ಟ್ರೀಯ ದಾಖಲೆಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಏಷ್ಯಾದ ನಂ. 1 ಸ್ಥಾನಕ್ಕೇರಿದ್ದರು. ಅದೇ ಕೂಟದ ಲಾಂಗ್ ಸ್ಪರ್ಧೆಯಲ್ಲೂ ಐಶ್ವರ್ಯಾ, 6.73 ಮೀಟರ್ ದೂರ ಹಾರಿದ್ದರು. ಈ ಮೂಲಕ ಲಾಂಗ್ ಜಂಪ್ ತಾರೆ ಅಂಜು ಬಾಬಿ ಜಾರ್ಜ್ (6.83 ಮೀ) ಬಳಿಕ 2ನೇ ಅತ್ಯುತ್ತಮ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಭಾರತೀಯ ಮಹಿಳೆ ಎನಿಸಿದ್ದರು.

ಈ ಸುದ್ದಿ ಓದಿದ್ದೀರಾ ? : ಕಂಬಳದ ʻಉಸೇನ್‌ ಬೋಲ್ಟ್‌ʼ ವಿರುದ್ಧ ವಂಚನೆಯ ದೂರು | ಏನಿದು ಪ್ರಕರಣ ?

ಆದರೆ ಅದೇ ಕೂಟದ ವೇಳೆ ತೆಗೆದುಕೊಳ್ಳಲಾದ ಧನಲಕ್ಷ್ಮೀ ಅವರ ಗಂಟಲು ದ್ರವದ ಮಾದರಿಯಲ್ಲಿ ಅನಾಬೋಲಿಕ್‌ ಸ್ಟಿರಾಯ್ಡ್‌ ಮತ್ತು  ಐಶ್ವರ್ಯಾ ಅವರ ಮಾದರಿಯಲ್ಲಿ ಒಸ್ಟಾರಿನ್‌ ಎಂಬ ನಿಷೇಧಿತ ಡ್ರಗ್ ಸೇವಿಸಿರುವುದು ಪತ್ತೆಯಾಗಿದೆ.  ವಿಶ್ವ ಅಥ್ಲೆಟಿಕ್ಸ್‌ನ ಇಂಟಿಗ್ರಿಟಿ ಯುನಿಟ್‌ (ಎಐಯು) ಮತ್ತು ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಳದ (ನಾಡಾ) ಅಧಿಕಾರಿಗಳು ಉದ್ದೀಪನ ಪರೀಕ್ಷೆ ನಡೆಸಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್