ವಿಂಬಲ್ಡನ್‌ 2022 | ಏಳನೆಯ ಬಾರಿ ಚಾಂಪಿಯನ್‌ಶಿಪ್‌ ಗೆದ್ದ ಜೊಕೊವಿಕ್, ಫೆಡರರ್‌ ಸರಿಗಟ್ಟಿದ ಸರ್ಬಿಯಾ ಸರದಾರ

Novak Djokovic
  • ಏಳನೆಯ ಬಾರಿಗೆ ವಿಂಬಲ್ಡನ್‌ ಪುರುಷರ ಟ್ರೋಫಿ ಗೆದ್ದ ಜೊಕೊವಿಕ್‌
  • 21 ಗ್ರ್ಯಾಂಡ್‌ ಸ್ಲ್ಯಾಮ್‌ ಗೆದ್ದು ಫೆಡರರ್‌ ಹಿಂದಿಕ್ಕಿದ್ದ ಸರ್ಬಿಯಾ ಆಟಗಾರ

ಲಂಡನ್ನಿನ ಆಲ್‌ ಇಂಗ್ಲೆಂಡ್‌ ಲಾನ್‌ ಟೆನ್ನಿಸ್‌ ಅಂಡ್‌ ಕ್ರೊಕೆ ಕ್ಲಬ್‌ ಮತ್ತೊಂದು ಅಭೂತಪೂರ್ವ ಗೆಲವಿಗೆ ಸಾಕ್ಷಿಯಾಯಿತು. ಭಾನುವಾರ ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ಮತ್ತು ನೊವಾಕ್‌ ಜೊಕೊವಿಕ್‌ ನಡುವಿನ ವಿಂಬಲ್ಡನ್‌ ಪುರುಷರ ಫೈನಲ್ಸ್‌ನಲ್ಲಿ ಜೊಕೊವಿಕ್‌ ಜಯ ಗಳಿಸುವ ಮೂಲಕ 7ನೇ ಬಾರಿಗೆ ಚಾಂಪಿಯನ್‌ಶಿಪ್‌ ತಮ್ಮದಾಗಿಸಿಕೊಂಡರು.

Image
Novak Djokovic
ಏಳನೆಯ ಟ್ರೋಫಿಯೊಂದಿಗೆ ಜೊಕೊವಿಕ್

ಜೊಕೊವಿಕ್‌ 4- 6, 6- 3, 6- 4 ಮತ್ತು 7- 6 ಸೆಟ್‌ಗಳ ಅಂತರದಲ್ಲಿ ನಿಕ್‌ ಅವರನ್ನು ಸೋಲಿಸಿದರು. ಈ ಮೂಲಕ ಜೊಕೊವಿಕ್‌ 21 ಗ್ರ್ಯಾನ್‌ಸ್ಲಾಮ್‌ ಟೈಟಲ್‌ಗಳನ್ನು ತಮ್ಮ ಮುಡಿಗೇರಿಸಿಕೊಂಡಂತಾಗಿದೆ. ಇಪ್ಪತ್ತು ಗ್ರ್ಯಾಂಡ್‌ ಸ್ಲ್ಯಾಮ್‌ ಗೆದ್ದಿರುವ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರನ್ನು ಹಿಂದಿಕ್ಕಿದ್ದಾರೆ.

ನಿಕ್‌ ಆಕ್ರಮಣ, ಜೊಕೊವಿಕ್ ಜಯ!

ಮೊದಲ ಸೆಟ್‌ನಲ್ಲಿ ತೀವ್ರ ಸೆಣಸಾಟ ಒಡ್ಡಿ ನಿಕ್‌ ಕಿರ್ಗಿಯೋಸ್‌, ಜೊಕೊವಿಕ್‌ ಬಲವಾದ ಸ್ಪರ್ಧೆ ಒಡ್ಡಿದರು. ಆದರೂ 6 ಅಂಕಗಳಿಂದ ಮೇಲುಗೈ ಸಾಧಿಸಿದ ನಿಕ್‌, ಜೊಕೊವಿಕ್‌ ಅವರನ್ನು 4 ಅಂಕಕ್ಕೆ ಕಟ್ಟಿಹಾಕಿ, ಸೆಟ್‌ ತಮ್ಮದಾಗಿಸಿಕೊಂಡರು.

ಎರಡನೆಯ ಸೆಟ್‌ನಲ್ಲಿ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಜೊಕೊವಿಕ್‌, ದೀರ್ಘ ಅವಧಿಯವರೆಗೆ ಆಟವನ್ನು ತಮ್ಮ ಹಿಡಿತದಲ್ಲೇ ಇರಿಸಿಕೊಂಡರು. 6 ಅಂಕ ಪಡೆದು ಕಿರ್ಗಿಯೋಸ್‌ 3ಕ್ಕೆ ತೃಪ್ತರಾಗುವಂತೆ ಆಡಿ, ಪಂದ್ಯದಲ್ಲಿ ಮುನ್ನಡೆ ಗಳಿಸಿದರು.

ಮೂರನೆಯ ಸೆಟ್‌ನಲ್ಲಿ ನಿಕ್ ಮತ್ತು ಜೊಕೊವಿಕ್‌ ನಡುವೆ ಆರಂಭದಲ್ಲಿ ಸಮಾನ ಸೆಣಸಾಟವಿದ್ದರೂ, ಲಹರಿಯಲ್ಲಿದ್ದ ನಿಕ್‌ ತಮ್ಮ ಕೈ ಚಳಕದ ಮೂಲಕ ಆಟವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮೂರು ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡರು. ಆದರೆ, ತಮ್ಮ ತೀವ್ರವಾದ ಸರ್ವ್‌ಗಳ ಮೂಲಕ ನಿಕ್‌ ಹತಾಶರಾಗುವಂತೆ ಆಡಿದ ಜೊಕೊವಿಕ್‌, ನಿರಾಯಾಸವಾಗಿ ಆಟವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, 6-4 ಅಂತರದಲ್ಲಿ ನಿಕ್‌ ಅವರಿಗೆ ಸೋಲುಣಿಸಿದರು.

ನಾಲ್ಕನೆಯ ಕಡೆಯ ಸೆಟ್‌ನಲ್ಲಿ, ನಿಕ್‌ ಎಚ್ಚರದ ಹಾಗೂ ಆತ್ಮವಿಶ್ವಾಸದ ಆಟ ಆರಂಭಿಸಿ ಎರಡು ಅಂಕದಿಂದ ಮುನ್ನಡೆಯಲ್ಲಿದ್ದರು. ಆದರೆ ಮೂರು ಭಾರೀ ಸರ್ವ್‌ಗಳ ಮೂಲಕ ಪಂದ್ಯಕ್ಕೆ ತಿರುವು ನೀಡಿದ ಜೊಕೊವಿಕ್‌, ನಿಕ್‌ ಅವರಿಂದ ಗೆಲುವಿನ ಕನಸು ಕಸಿದುಕೊಂಡರು. 6- 6 ಸಮಾನ ಅಂತರದಲ್ಲಿ ಸೆಣಸುತ್ತಿದ್ದ ನಿಕ್‌- ಜೊಕೊವಿಕ್‌ ಇಡೀ ಟೆನಿಸ್‌ ಲೋಕವನ್ನು ತುದಿಗಾಲಲ್ಲಿ ನಿಲ್ಲಿಸಿದ್ದರು. ಮೂರೇ ನಿಮಿಷಗಳ ಅಂತರದಲ್ಲಿ 7 ಅಂಕ ಪಡೆದು ನಿಕ್‌ ಕನಸು ಭಗ್ನಗೊಳಿಸಿದರು.

ತಮ್ಮ ಎಂದಿನ ಮನೋಜ್ಞ ಆಟ ಪ್ರದರ್ಶಿಸಿದ ಜೊಕೊವಿಕ್‌ ರೋಚಕ ಪಂದ್ಯವನ್ನು ತಮ್ಮ ಜಯದೊಂದಿಗೆ ಕೊನೆಗೊಳಿಸಿದರು.

ಟ್ರೋಫಿ ಗೆಲ್ಲುವ ಕನಸು ಸದಾ ಜೀವಂತ

ಪಂದ್ಯದ ನಂತರ ತನ್ನ ಎದುರಾಳಿ ನಿಕ್‌ ಕುರಿತು ಮಾತನಾಡಿದ ಜೋಕೊವಿಕ್‌, "ನಿಕ್‌, ನೀವು ಮತ್ತೆ ಮರಳುತ್ತೀರಿ. ಕೇವಲ ವಿಂಬಲ್ಡನ್‌ನಷ್ಟೇ ಅಲ್ಲ, ಹಲವು ಫೈನಲ್‌ಗಳಲ್ಲಿ ಆಡುತ್ತೀರಿ. ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂಬುದನ್ನು ತೋರಿಸಿದ್ದೀರಿ. ನಿಮಗೆ ನಿಮ್ಮ ತಂಡಕ್ಕೆ ಅಭಿನಂದನೆಗಳು. ಶುಭ ಹಾರೈಕೆಗಳು, ನೀವೊಂದು ಅದ್ಭುತ ಪ್ರತಿಭೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೆಲುವಿನ ಕುರಿತು ಮಾತನಾಡುತ್ತಾ, "ನನಗೆ ಮಾತೇ ಹೊರಡುತ್ತಿಲ್ಲ. ನನ್ನ ಪಾಲಿಗೆ ಈ ಟ್ರೋಫಿ ಬಹಳ ಮಹತ್ವದ್ದು. ವಿಂಬಲ್ಡನ್‌ ನನ್ನ ಪಾಲಿಗೆ ಎಂದಿಗೂ ವಿಶೇಷವಾಗಿತ್ತು, ಎಂದಿಗೂ ವಿಶೇಷವಾಗಿರುತ್ತದೆ. ಈ ಟ್ರೋಫಿ ಗೆಲ್ಲಬೇಕೆನ್ನುವ ಬಾಲ್ಯದ ಕನಸು ನನಸು ಮಾಡಿಕೊಳ್ಳುತ್ತಿದ್ದೇನೆ. ಪ್ರತಿ ವರ್ಷ ಈ ಕನಸು ಹೆಚ್ಚು ಅರ್ಥಪೂರ್ಣವಾಗುತ್ತಿದೆ. ಇದು ಜಗತ್ತಿನಲ್ಲೇ ಅತ್ಯಂತ ವಿಶೇಷವಾದ ಕ್ರೀಡಾಂಗಣ. ನಾನು ಇಲ್ಲಿರುವುದಕ್ಕೆ ಅತ್ಯಂತ ಸಂತೋಷಪಡುತ್ತಿದ್ದೇನೆ ಮತ್ತು ಆಭಾರಿಯಾಗಿದ್ದೇನೆ'' ಎಂದರು.

ನಿಕ್‌ ಕಿರ್ಗಿಯೋಸ್‌ ಮಾತನಾಡಿ, "ಜೊಕೊವಿಕ್‌, ಸ್ವಲ್ಪ ದೇವರಂತೆ. ನಾನೂ ಚೆನ್ನಾಗಿ ಆಡಿದೆನೆಂದು ಭಾವಿಸುತ್ತೇನೆ. ನೊವಾಕ್‌ ಅವರಿಗೆ ಅಭಿನಂದಿಸಲು ಬಯಸುತ್ತೇನೆ. ಅವರು ಅದೆಷ್ಟು ಬಾರಿ ಈ ಚಾಂಪಿಯನ್‌ಶಿಪ್‌ ಗೆದ್ದಿದ್ದಾರೋ ತಿಳಿಯದು" ಎಂದು ಅಚ್ಚರಿಯ ಮಾತುಗಳನ್ನಾಡಿದರು.

Image
Wimbledon 2022

ಏಳನೆಯ ಬಾರಿ ವಿಂಬಲ್ಡನ್‌!

ಜೊಕೊವಿಕ್‌ ಮೊದಲ ಬಾರಿಗೆ ವಿಂಬಲ್ಡನ್‌ ಗೆದ್ದಿದ್ದು 2011ರಲ್ಲಿ. ಸ್ಪ್ಯಾನಿಷ್‌ ಆಟಗಾರ ರಾಫೇಲ್‌ ನಡಾಲ್‌ರನ್ನು 4- 6, 1- 6, 6- 1 ಮತ್ತು 3- 6 ಅಂತರದಲ್ಲಿ ಸೋಲಿಸಿದ್ದರು. 

2014ರಲ್ಲಿ ರೋಜರ್‌ ಫೆಡರರ್‌ರನ್ನು ಎದುರಿಸಿದ್ದ ಜೊಕೊವಿಕ್‌ ಭಾರಿ ಸೆಣಸಾಟದ ಬಳಿಕ, 6- 7, 6- 4, 7- 6, 5- 7 ಮತ್ತು 6- 4 ಅಂತರದಲ್ಲಿ ಜಯ ಗಳಿಸಿದ್ದರು.

2015ರಲ್ಲಿ ಮತ್ತೆ ರೋಜರ್‌ ಫೆಡರರ್‌ ಎದುರಿಸಿದ ಜೊಕೊವಿಕ್‌ 7- 6, 6- 7, 6- 4, ಮತ್ತು 6- 3 ಅಂತರದಲ್ಲಿ ಜಯ ಗಳಿಸಿದ್ದರು.

2018ರಲ್ಲಿ ಆಫ್ರಿಕಾದ ಕೆವಿನ್‌ ಆಂಡರ್ಸನ್‌, 2019ರಲ್ಲಿ ರೋಜರ್‌ ಫೆಡರರ್‌ ಮತ್ತು 2021ರಲ್ಲಿ ಇಟಲಿಯ ಮಟ್ಟೆ ಬೆರ್ರೆಟಿನಿಯನ್ನು ಎದುರಿಸಿ ಕ್ರಮವಾಗಿ 4, 5,ಮತ್ತು 6ನೆಯ ಟ್ರೋಫಿ ತಮ್ಮದಾಗಿಸಿಕೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್