ಎದುರಾಳಿಯನ್ನು 39 ನಡೆಗಳಲ್ಲಿ ಸೋಲಿಸಿದ ಪ್ಯಾಲೇಸ್ತೀನಿನ 8 ವರ್ಷದ ಬಾಲೆ!

8 year old palestine chess player Randa Sader
  • ಚೆನ್ನೈನಲ್ಲಿ ನಡೆಯುತ್ತಿರುವ 44ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ರಾಂಡ
  • 1736 ಸ್ಪರ್ಧಾಳುಗಳ ಪೈಕಿ ರಾಂಡ ಸೆಡರ್‌ ಅತಿ ಕಿರಿಯ ಆಟಗಾರ್ತಿ

ಚೆನ್ನೈನ ಮಹಾಬಲಿಪುರಂನಲ್ಲಿ ಮೂರು ದಿನಗಳಿಂದ ಈಕೆ ಆಕರ್ಷಣೆಯ ಕೇಂದ್ರ. 185 ದೇಶಗಳಿಂದ ಘಟಾನುಘಟಿಗಳೇ ತೋಳೇರಿಸಿ ನಿಂತಿರುವ 44ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಪ್ಯಾಲೇಸ್ತೀನಿನಿಂದ ಬಂದಿರುವ 8 ವರ್ಷದ ಬಾಲೆ ರಾಂಡ ಸೆಡರ್‌ ಕುತೂಹಲ, ಬೆರಗಗಳ ಕೇಂದ್ರವಾಗಿದ್ದಾಳೆ.

ಪ್ಯಾಲೇಸ್ತೀನಿಂದ ಬಂದಿರುವ 1214 ರೇಟಿಂಗ್‌ ಇರುವ ತಕ್ವಾ ಹಮೊರಿ 1847 ರೇಟಿಂಗ್‌ ಇರುವ ಇಮಾನ್‌ ಸವಾನ್‌ ಜೊತೆಗೆ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವಾಕೆ ಈ ಪುಟ್ಟ ಚೆಸ್‌ ಆಟಗಾರ್ತಿ ರಾಂಡ. ಶನಿವಾರ ಮುಖ್ಯಮಂತ್ರಿ ಸ್ಟಾಲೀನ್‌ ಕೂಡ ಚೆಸ್‌ ಒಲಿಂಪಿಯಾಡ್‌ಗೆ ಭೇಟಿ ನೀಡಿದಾಗ ಈ ಪುಟ್ಟ ಪ್ರತಿಭೆಗೆ ಹಸ್ತಲಾಘವ ನೀಡಿ ಹಾರೈಸಿದ್ದರು.

ಚೆಸ್‌ ಕೋಚ್‌ ಆಗಿರುವ ತಂದೆಯಿಂದ ಸ್ಫೂರ್ತಿ ಪಡೆದಿರುವ ಈ ಬಾಲೆ 5ನೇ ವಯಸ್ಸಿಗೆ ಚೆಸ್‌ನ ಕಪ್ಪು-ಬಿಳಿ ಕಾಯಿಗಳ ಜೊತೆಗೆ ಆಟವಾಡಲು ಆರಂಭಿಸಿದ್ದಾಳೆ. ಹಿರಿಯಣ್ಣ ಕೂಡ ಫಿಡೆ ಮಾಸ್ಟರ್‌ ಆಗಿ ಗುರುತಿಸಿಕೊಂಡವರು. ಇಂತಹ ಕುಟುಂಬದಲ್ಲಿ ಬೆಳೆದ ರಾಂಡ ಚೆಸ್‌ ಪ್ರತಿಭೆಯಾಗಿ ಗುರುತಿಸಿಕೊಂಡಿರುವುದು ಅಚ್ಚರಿಯಲ್ಲ.

Image
Palestine women chess players team
ಚೆನ್ನೈನಲ್ಲಿ ನಡೆಯುತ್ತಿರುವ 44ನೇ ಫಿಡೆ ಚೆಸ್‌ ಚಾಂಪಿಯನ್‌ನಲ್ಲಿ ಪಾಲ್ಗೊಂಡಿರುವ ಪ್ಯಾಲೆಸ್ತೀನ್‌ ಮಹಿಳಾ ತಂಡದಲ್ಲಿ ಕಿರಿಯ ಆಟಗಾರ್ತಿ ರಾಂಡ ಸೇಡರ್‌

ಆಟವನ್ನು ಕರಗತ, ಮನೋಗತ ಮಾಡಿಕೊಂಡಿರುವ ರಾಂಡ ಎದುರಾಳಿಗೆ ನೀರಿಳಿಸುವಂತೆ ಆಡಬಲ್ಲಳು ಎಂಬುದನ್ನು 44ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಸಾಬೀತು ಮಾಡಿದಳು. ಕೊಮೊರೊಸ್‌ನ ಆಟಗಾರ ಅಲಿ ಮೊಹಮ್ಮದ್‌ ಫಾಹಿಮಾ ಅವರನ್ನು 2ನೇ ಸುತ್ತಿನ ಸ್ಪರ್ಧೆಯಲ್ಲಿ ಕೇವಲ 39 ನಡೆಗಳಲ್ಲಿ ಸೋಲಿಸಿದ್ದಾಳೆ ಈ ಚಿಣ್ಣರ ಚತುರೆ.

ಹಂಗೇರಿಯಾದ ಜೂಡಿತ್‌ ಪೊಲ್ಗಾರ್‌ ಎಂದರೆ ರಾಂಡಗೆ ಅಪಾರ ಅಭಿಮಾನವಂತೆ. ಸ್ಪಾಂಜ್‌ ಬಾಬ್‌ ಕಾರ್ಟೂನ್‌ ಇಷ್ಟಪಡುವ ಈಕೆ ಭಾರತಕ್ಕೆ ಮೊದಲ ಬಾರಿಗೆ ಬಂದಿದ್ದು, ಆಹಾರ ತಿನಿಸುಗಳನ್ನು ಸವಿದು ಆನಂದಿಸುತ್ತಿದ್ದಾಳೆಂದು ಪ್ಯಾಲೆಸ್ತೀನಿನ ಮಹಿಳಾ ತಂಡದ ಇತರ ಸದಸ್ಯರು ಹೇಳುತ್ತಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್