
- ದೇಶೀಯ ಟೂರ್ನಿಗಳಲ್ಲಿ ಆಡಿದ ಕೊನೆಯ ರಾಜ್ಯ ಕೇರಳ
- ಪ್ರೀತಿ ಮತ್ತು ಆಶೀರ್ವಾದವನ್ನು ಹೊರತುಪಡಿಸಿ ಬೇರೇನಿಲ್ಲ
ಭಾರತದ ಕ್ರಿಕೆಟ್ ತಾರೆ ರಾಬಿನ್ ಉತ್ತಪ್ಪ ಎಲ್ಲ ಮಾದರಿಯ ಕ್ರಿಕೆಟ್ಗೆ ಬುಧವಾರ (ಸೆಪ್ಟೆಂಬರ್ 14) ನಿವೃತ್ತಿ ಘೋಷಿಸಿದ್ದಾರೆ. 2007ರಲ್ಲಿ ಭಾರತ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ ರಾಬಿನ್ ಉತ್ತಪ್ಪ, ಕಳೆದ ಐಪಿಎಲ್ ಸೀಸನ್ನಲ್ಲಿ ಸಿಎಸ್ಕೆ ಪರವಾಗಿ ಆಡಿದ್ದರು. ರಾಬಿನ್ ಉತ್ತಪ್ಪ ನಿವೃತ್ತಿ ಘೋಷಿಸುತ್ತಿದ್ದಂತೆ ಹಲವು ಕ್ರಿಕೆಟಿಗರು, ಅಭಿಮಾನಿಗಳು ಅವರ ಮುಂದಿನ ಜೀವನಕ್ಕೆ ಶುಭಾಶಯ ಹೇಳಿದ್ದಾರೆ. ರಾಬಿನ್ ಉತ್ತಪ್ಪ ನಿವೃತ್ತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ಹೃದಯಪೂರ್ವಕ ಸಂದೇಶ ನೀಡಿದ್ದಾರೆ.

ರಾಬಿನ್ ಉತ್ತಪ್ಪ ಮುಂದಿನ ಜೀವನ ಖುಷಿಯಾಗಿರಲಿ ಎಂದು ಹಾರೈಸಿರುವ ವಿರಾಟ್ ಕೊಹ್ಲಿ, "ನಿಮ್ಮೊಂದಿಗೆ ಆಡಿರುವುದು ಖುಷಿ ನೀಡಿದೆ" ಎಂದು ಹೇಳಿದ್ದಾರೆ. 2002ರಲ್ಲಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರಾಬಿನ್ ಉತ್ತಪ್ಪ 20 ವರ್ಷಗಳ ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ರಾಬಿನ್ಗೆ ಕೊಹ್ಲಿ ಸಂದೇಶ
ಇನ್ಸ್ಟಾಗ್ರಾಮ್ನಲ್ಲಿ ರಾಬಿನ್ ಉತ್ತಪ್ಪ ಅವರ ನಿವೃತ್ತಿ ಟಿಪ್ಪಣಿಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, "ಚೆನ್ನಾಗಿ ಆಡಿದ್ದೀರಾ ರಾಬಿ, ನಿಮ್ಮ ದಾರಿಯಲ್ಲಿ ಪ್ರೀತಿ ಮತ್ತು ಆಶೀರ್ವಾದವನ್ನು ಹೊರತುಪಡಿಸಿ ಬೇರೇನೂ ಇಲ್ಲ. ನಿಮ್ಮ ಸಾಧನೆಗಾಗಿ ಹೆಮ್ಮೆಪಡಬೇಕು ಮತ್ತು ನಿಮ್ಮ ಜೊತೆಯಲ್ಲಿ ಆಡಿರುವುದು ತುಂಬಾ ಸಂತೋಷವಾಗಿತ್ತು. ಆಲ್ ದಿ ಬೆಸ್ಟ್ ಬ್ರದರ್" ಎಂದು ಶುಭಾಶಯ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ | ಭಾರತ- ಪಾಕಿಸ್ತಾನ ಪಂದ್ಯದ ಟಿಕೆಟ್ ಸಂಪೂರ್ಣ ಮಾರಾಟ
ರಾಬಿನ್ ಉತ್ತಪ್ಪ ಅವರಿಗೆ ಕೇರಳ ಕ್ರಿಕೆಟ್ ಅಸೋಸಿಯೇಷನ್ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಿದೆ, ಇದರಿಂದಾಗಿ ಅವರು ವಿದೇಶಗಳಲ್ಲಿ ನಡೆಯುವ ಟಿ20 ಲೀಗ್ಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಕರ್ನಾಟಕದೊಂದಿಗೆ ತನ್ನ ಕ್ರಿಕೆಟ್ ಆಟ ಪ್ರಾರಂಭಿಸಿದ ಉತ್ತಪ್ಪ ದೇಶೀಯ ಟೂರ್ನಿಗಳಲ್ಲಿ ಆಡಿದ ಕೊನೆಯ ರಾಜ್ಯ ಕೇರಳವಾಗಿದೆ.
ಧನ್ಯವಾದ ತಿಳಿಸಿದ ಸಿಎಸ್ಕೆ
"ಅಭಿಮಾನಿಗಳ ಹೆಮ್ಮೆ ನೀವು, ಧನ್ಯವಾದಗಳು" ಎಂದು ಭಾವನಾತ್ಮಕ ಟ್ವೀಟ್ನೊಂದಿಗೆ ಸಿಎಸ್ಕೆ ರಾಬಿನ್ ಉತ್ತಪ್ಪ ಅವರಿಗೆ ಧನ್ಯವಾದ ಹೇಳಿದೆ.
The Fans. The Pride. You.
— Chennai Super Kings (@ChennaiIPL) September 14, 2022
Our bond is everlasting! Super Thanks, Robbie! 🤘🏻💛 #77#WhistlePoduForever #Yellove 🦁💛 pic.twitter.com/MRwf6G4gE1
ಉತ್ತಪ್ಪ ತಮ್ಮ ಕೊನೆಯ ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಅವರು ನಿವೃತ್ತಿ ಘೋಷಿಸಿದ ಕೂಡಲೇ "ಹೃತ್ಪೂರ್ವಕ, ಭಾವನಾತ್ಮಕ ಧನ್ಯವಾದಗಳು" ಎಂದು ಸಿಎಸ್ಕೆ ಟ್ವೀಟ್ ಮಾಡಿದೆ.