ಫುಟ್ಬಾಲ್‌ | ಇಂಗ್ಲೆಂಡ್‌ ಮುಡಿಗೆ ಮಹಿಳಾ ಯೂರೊ ಕಪ್‌

  • ವೆಂಬ್ಲಿ ಕ್ರೀಡಾಂಗಣದಲ್ಲಿ  87,192 ಮಂದಿ ಪಂದ್ಯ ವೀಕ್ಷಣೆ
  • ಪ್ರಮುಖ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ಚೊಚ್ಚಲ ಪ್ರಶಸ್ತಿ 

ಹೆಚ್ಚುವರಿ ಅವಧಿಯಲ್ಲಿ ದಾಖಲಾದ ಗೋಲಿನ ನೆರವಿನಿಂದ ಇಂಗ್ಲೆಂಡ್‌ ತಂಡ, ಮಹಿಳಾ ಯೂರೊ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ವೆಂಬ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ದಾಖಲೆ ಸಂಖ್ಯೆಯ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡ 2–1 ಗೋಲುಗಳ ಅಂತರದಿಂದ ಜರ್ಮನಿ ತಂಡವನ್ನು ಮಣಿಸಿತು.

ರೋಚಕ ಪೈಪೋಟಿಯಿಂದ ಕೂಡಿದ್ದ ಪಂದ್ಯದ ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು 1–1 ರಲ್ಲಿ ಸಮಬಲ ಸಾಧಿಸಿದ್ದವು. ಇಂಗ್ಲೆಂಡ್‌ನ ಎಲಾ ಟೂನ್ 62ನೇ ನಿಮಿಷದಲ್ಲಿ ಗೋಲು ಗಳಿಸಿದರೆ, 17 ನಿಮಿಷಗಳ ಬಳಿಕ ಜರ್ಮನಿಯ ಲಿನಾ ಮಗುಲ್ ಚೆಂಡನ್ನು ಗುರಿ ಸೇರಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. ಆ ಬಳಿಕ ಎರಡೂ ತಂಡಗಳು ಗೆಲುವಿನ ಗೋಲಿಗಾಗಿ ಪ್ರಯತ್ನ ನಡೆಸಿದರೂ ಯಶಸ್ಸು ಲಭಿಸಲಿಲ್ಲ. ಆದರೆ ಹೆಚ್ಚುವರಿ ಸಮಯದ 110ನೇ ನಿಮಿಷದಲ್ಲಿ ಮುಂಚೂಣಿ ಆಟಗಾರ್ತಿ ಕೆಲ್ಲಿ ಗೆಲುವಿನ ಗೋಲು ಗಳಿಸಿದರು. ಆ ಮೂಲಕ ಪ್ರಮುಖ ಟೂರ್ನಿಯೊಂದರಲ್ಲಿ ಇಂಗ್ಲೆಂಡ್ ಮಹಿಳಾ ತಂಡ ಇದೇ ಮೊದಲ ಬಾರಿಗೆ ಪ್ರಶಸ್ತಿ ಸಾಧನೆ ಮಾಡಿತು.

ಈ ಸುದ್ದಿ ಓದಿದ್ದೀರಾ ? : 2ನೇ ಟಿ20 ಪಂದ್ಯ| ಪುಟಿದೇಳುವ ವಿಶ್ವಾಸದಲ್ಲಿ ವಿಂಡೀಸ್‌

ದಾಖಲೆ ಸಂಖ್ಯೆಯ ಪ್ರೇಕ್ಷಕರು

ಮಹಿಳಾ ಯೂರೊ ಕಪ್‌ ಫೈನಲ್‌ ಪಂದ್ಯಕ್ಕೆ ದಾಖಲೆ ಸಂಖ್ಯೆಯ ಪ್ರೇಕ್ಷಕರು ಸಾಕ್ಷಿಯಾದರು. ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು 87,192 ಮಂದಿ ವೀಕ್ಷಿಸಿದರು. ಯೂರೊ ಕಪ್‌ ಫುಟ್‌ಬಾಲ್‌ ಇತಿಹಾಸದಲ್ಲಿ ಪುರುಷರ ಮತ್ತು ಮಹಿಳೆಯರ ಪಂದ್ಯಕ್ಕೆ ಇಷ್ಟೊಂದು ಸಂಖ್ಯೆಯ ಪ್ರೇಕ್ಷಕರು ಸೇರಿರಲಿಲ್ಲ. 1964ರ ಪುರುಷರ ಟೂರ್ನಿಯ ಸ್ಪೇನ್‌ ಮತ್ತು ಸೋವಿಯತ್‌ ಯೂನಿಯನ್‌ ನಡುವಿನ ಫೈನಲ್‌ ಪಂದ್ಯಕ್ಕೆ 79,115 ಪ್ರೇಕ್ಷಕರು ಸೇರಿದ್ದು ಇದುವರೆಗಿನ ದಾಖಲೆಯಾಗಿತ್ತು

ನಿಮಗೆ ಏನು ಅನ್ನಿಸ್ತು?
0 ವೋಟ್