ಭಾರತೀಯ ಫುಟ್ಬಾಲ್‌ ಫೆಡರೇಶನ್‌ ಅಮಾನತುಗೊಳಿಸಿದ ಫಿಫಾ

  • ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವ ಕಾರಣ ನೀಡಿದ ಫಿಫಾ
  • FIFA U-17 ಮಹಿಳಾ ವಿಶ್ವಕಪ್ ಟೂರ್ನಿ ಭಾರತದಿಂದ ಸ್ಥಳಾಂತರ

ನಿಯಮಗಳನ್ನು ಉಲ್ಲಂಘಿಸಿದ ಕಾರಣ ನೀಡಿ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌ (ಎಐಎಫ್‌ಎಫ್‌) ಅನ್ನು ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ (ಫಿಫಾ) ಅಮಾನತುಗೊಳಿಸಿದೆ. ಮಂಗಳವಾರ ನಡೆದ ಫಿಫಾದ ಕೌನ್ಸಿಲ್‌ ಸಭೆಯಲ್ಲಿ ಸರ್ವಾನುಮತದಿಂದ ಅಮಾನತು ಆದೇಶ ನಿರ್ಧಾರ ತೆಗೆದುಕೊಳ್ಳಲಾಗಿದ್ದು,  ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಫಿಫಾ ತಿಳಿಸಿದೆ.

ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವ ಮತ್ತು ಫಿಫಾದ ನಿಯಮಗಳನ್ನು ನಿಯಮಿತವಾಗಿ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಅಮಾನತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಫಿಫಾ ತಿಳಿಸಿದೆ.

Image

ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯ ಅಧಿಕಾರವನ್ನು ವಹಿಸಿಕೊಳ್ಳಲು ನಿರ್ವಾಹಕರ ಸಮಿತಿಯನ್ನು ರಚಿಸುವ ಆದೇಶವನ್ನು ರದ್ದುಗೊಳಿಸಿದ ನಂತರ ಮತ್ತು ಎಐಎಫ್‌ಎಫ್ ಆಡಳಿತವು ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದ ನಂತರ ಅಮಾನತು ತೆಗೆದುಹಾಕಲಾಗುವುದು ಎಂದು ಫಿಫಾ ಹೇಳಿದೆ.  

ಈ ಸುದ್ದಿ ಓದಿದ್ದೀರಾ ? : ಒಂದು ನಿಮಿಷದ ಓದು| ಕ್ರೀಡಾ ತಾರೆಯರಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ

ಎಐಎಫ್‌ಎಫ್‌ ಅನ್ನು ಅಮಾನತುಗೊಳಿಸಿದ ಪರಿಣಾಮ ಅಕ್ಟೋಬರ್​ 11ರಿಂದ 30ರವರೆಗೆ ಭಾರತದಲ್ಲಿ ನಡೆಯಬೇಕಾಗಿದ್ದ ಫಿಫಾ U-17 ಮಹಿಳಾ ವಿಶ್ವಕಪ್ 2022 ಟೂರ್ನಿಯು ನಿಗದಿಯಂತೆ ನಡೆಸಲು ಸಾಧ್ಯವಿಲ್ಲ ಎಂದು ಫಿಫಾ ಪ್ರಕಟಣೆಯಲ್ಲಿ ತಿಳಿಸಿದೆ. ಪಂದ್ಯಾವಳಿ ಆಯೋಜನೆಗೆ ಸಂಬಂಧಿಸಿದಂತೆ ಮುಂದಿನ ಹಂತಗಳನ್ನು ಫಿಫಾ ನಿರ್ಣಯಿಸಲಿದೆ. ಅಗತ್ಯವೆನಿಸಿದರೆ ಕೌನ್ಸಿಲ್‌ ಸಭೆಯಲ್ಲಿ ವಿಷಯವನ್ನು ಉಲ್ಲೇಖಿಸಲಾಗುವುದು. ಇದರ ಜೊತೆಗೆ ಎಐಎಫ್‌ಎಫ್‌ ಅನ್ನು ಅಮಾನತುಗೊಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಕ್ರೀಡಾ ಮತ್ತು ಯುವಜನ ಇಲಾಖೆಯ ಸಚಿವಾಲಯದೊಂದಿಗೆ ಫಿಫಾ ನಿರಂತರ ಸಂಪರ್ಕದಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್