ಭಾರತೀಯ ಫುಟ್ಬಾಲ್‌ ದಿಗ್ಗಜನಿಗೆ ಫಿಫಾ ಗೌರವ; ಸುನಿಲ್‌ ಛೆಟ್ರಿ ಕುರಿತ ಸಾಕ್ಷ್ಯ ಚಿತ್ರ ಬಿಡುಗಡೆ

  • ಸುನಿಲ್‌ ಛೆಟ್ರಿ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದ ಫಿಫಾ
  • ರೊನಾಲ್ಡೊ, ಮೆಸ್ಸಿ ಬಳಿಕ  ಮೂರನೇ ಸ್ಥಾನದಲ್ಲಿ ಸುನಿಲ್‌ ಛೆಟ್ರಿ

ಜಗತ್ತಿನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಮತ್ತು ವೀಕ್ಷಕರನ್ನು ಹೊಂದಿರುವ ಕ್ರೀಡೆ ಫುಟ್‌ಬಾಲ್‌. ಕಳೆದ ಎರಡು ದಶಕಗಳಿಂದ ಈ ಕ್ರೀಡೆಯನ್ನ ಆಳುತ್ತಿರುವವರು ಪೋರ್ಚ್‌ಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ. ಆದರೆ ಇವರಿಬ್ಬರನ್ನು ಹೊರತುಪಡಿಸಿದರೆ, ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ದಾಖಲೆ ಇರುವುದು ಭಾರತೀಯ ತಂಡದ ನಾಯಕ ಸುನಿಲ್‌ ಛೆಟ್ರಿ ಹೆಸರಿನಲ್ಲಿ ಎನ್ನುವುದು ಪ್ರತಿಯೊಬ್ಬ ಭಾರತೀಯನ ಪಾಲಿಗೆ ಅತ್ಯಂತ ಹೆಮ್ಮೆಯ ಸಂಗತಿ.

ಒಲಿಂಪಿಕ್ಸ್‌ ಬಳಿಕ ಜಗತ್ತಿನ ಅತಿದೊಡ್ಡ ಕ್ರೀಡಾಕೂಟ ಎಂಬ ಹೆಗ್ಗಳಿಕೆಯ ಫುಟ್‌ಬಾಲ್‌ ವಿಶ್ವಕಪ್‌, ನವೆಂಬರ್‌ 20ರಂದು ಗಲ್ಫ್‌ ರಾಷ್ಟ್ರ ಖತಾರ್‌ನಲ್ಲಿ ಆರಂಭವಾಗಲಿದೆ. 32 ರಾಷ್ಟ್ರಗಳು ಈ ಮಹಾಕೂಟದಲ್ಲಿ ಭಾಗವಹಿಸಲಿದೆ. 1950ರಲ್ಲಿ ಕೊನೆಯದಾಗಿ ಭಾರತ, ಫುಟ್‌ಬಾಲ್‌ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿತ್ತು. ಅದಾಗಿಯೂ ಸುನಿಲ್‌ ಛೆಟ್ರಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

Eedina App

ಇದೀಗ ಸುನಿಲ್‌ ಸಾಧನೆಗೆ ಫುಟ್ಬಾಲ್‌ನ ಜಾಗತಿಕ ಆಡಳಿತ ಸಂಸ್ಥೆ, ಅಂತಾರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ವಿಶೇಷ ಗೌರವ ನೀಡಿದೆ. ಭಾರತೀಯ ಫುಟ್ಬಾಲ್ ತಂಡದ ನಾಯಕನ ಫುಟ್ಬಾಲ್ ಪಯಣದ ಕುರಿತಾದ ವಿಶೇಷ ಸಾಕ್ಷ್ಯಚಿತ್ರವೊಂದನ್ನು ಫಿಫಾ ಬಿಡುಗಡೆಗೊಳಿಸಿದೆ. ಮೂರು ಅಧ್ಯಾಯಗಳ ಸರಣಿ ಇದಾಗಿದ್ದು 'ಕ್ಯಾಪ್ಟನ್ ಫೆಂಟಾಸ್ಟಿಕ್' ಎಂದು ಹೆಸರಿಸಲಾಗಿದೆ. ಈ ಕುರಿತು 'ಫಿಫಾ ವರ್ಲ್ಡ್ ಕಪ್' ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ʻನಿಮಗೆಲ್ಲಾ ರೊನಾಲ್ಡೋ ಮತ್ತು ಮೆಸ್ಸಿ ಬಗ್ಗೆ ಗೊತ್ತೇ ಇದೆ. ಆದರೆ ಈಗ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಕ್ರಿಯವಾಗಿರುವ ಆಟಗಾರರ ಪೈಕಿ ಮೂರನೇ ಅತಿ ಹೆಚ್ಚು ಗೋಲುಗಳಿಸಿದ ಆಟಗಾರನ ಬಗ್ಗೆ ತಿಳಿದುಕೊಳ್ಳುವ ಸಮಯ. 'ಸುನಿಲ್ ಛೆಟ್ರಿ| ಕ್ಯಾಪ್ಟನ್ ಫೆಂಟಾಸ್ಟಿಕ್' ಫೀಫಾ +ನಲ್ಲಿ ಈಗ ಲಭ್ಯವಿದೆʼ ಎಂದು ಟ್ವೀಟ್ ಮಾಡಿದೆ.

AV Eye Hospital ad

ಸುನಿಲ್ ಛೆಟ್ರಿ ಅವರ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ಕುರಿತಾದ ವಿಶೇಷ ಸರಣಿಯನ್ನು ಬಿಡುಗಡೆಗೊಳಿಸಿರುವುದಾಗಿ ಫಿಫಾ ತಿಳಿಸಿದೆ. ಫಿಫಾದ ಸ್ಟ್ರೀಮಿಂಗ್ ವೇದಿಕೆಯಾಗಿರುವ 'FIFA+'ನಲ್ಲಿ ಈ ಡಾಕ್ಯುಮೆಂಟರಿ ಲಭ್ಯವಿದೆ. ಭಾರತ ಫುಟ್ಬಾಲ್‌ನ ದಿಗ್ಗಜ ಆಟಗಾರನ ಕುರಿತ ಅನೇಕ ಕುತೂಹಲಕಾರಿ ಸಂಗತಿಗಳು ಈ ವಿಶೇಷ ಸಾಕ್ಷ್ಯಚಿತ್ರದಲ್ಲಿದೆ. ಅಭಿಮಾನಿಗಳಿಗೆ ತಿಳಿಯದ ಸಾಕಷ್ಟು ಅಂಶಗಳನ್ನು ಈ ಡಾಕ್ಯುಮೆಂಟರಿ ಹೊಂದಿದೆ. ಯೌವನದ ಕಷ್ಟದ ದಿನಗಳ ಸಂದರ್ಭ, 20ನೇ ಹರೆಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ, ವೈಯಕ್ತಿಕ ಜೀವನ, ಪ್ರಶಸ್ತಿ ಪುರಸ್ಕಾರಗಳ ಜೊತೆಗೆ ಅತ್ಯುನ್ನತ ಸಾಧನೆಗಳ ಮೇಲೆ ಬೆಳಕು ಚೆಲ್ಲಲಾಗಿದೆ.

ಫಿಫಾ ಗೌರವಕ್ಕೆ ಕೊಹ್ಲಿ ಫುಲ್‌ಖುಷ್‌!

ಈ ಸುದ್ದಿ ಓದಿದ್ದೀರಾ ? : ಟಿ20 ಹಣಾಹಣಿ | ಆಫ್ರಿಕಾ ಎದುರು ಟಾಸ್‌ ಗೆದ್ದ ರೋಹಿತ್‌, ಹೊರಗುಳಿದ ಬುಮ್ರಾ, ಅಶ್ವಿನ್‌ಗೆ ಸ್ಥಾನ

ಭಾರತೀಯ ಫುಟ್ಬಾಲ್‌ ದಿಗ್ಗಜನಿಗೆ ಫಿಫಾ ನೀಡಿರುವ ಗೌರವಕ್ಕೆ, ಟೀಮ್‌ ಇಂಡಿಯಾದ ಮಾಜಿ ನಾಯಕ ಫುಲ್‌ ಖುಷಿಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 'ಫಿಫಾ ವರ್ಲ್ಡ್ ಕಪ್' ಟ್ವಿಟ್ಟರ್ ಪೋಸ್ಟ್‌ ಹಂಚಿಕೊಂಡಿರುವ ಕೊಹ್ಲಿ, ʻಸ್ಕಿಪ್‌ (ನಾಯಕ) ಎಂದು ಬರೆದು ಹೃದಯ, ಸ್ಟಾರ್‌ ಹಾಗೂ ವಿಜಯದ ಸಂಕೇತದ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಸಕ್ರಿಯ ಆಟಗಾರರ ಪೈಕಿ ಸುನಿಲ್ ಛೆಟ್ರಿ ಮೂರನೇ ಸ್ಥಾನದಲ್ಲಿದ್ದಾರೆ. ಈವರೆಗೂ 131 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಛೆಟ್ರಿ ಖಾತೆಯಲ್ಲಿ 84 ಗೋಲ್‌ಗಳಿವೆ. ಫುಟ್ಬಾಲ್‌ನ ದಿಗ್ಗಜ ಆಟಗಾರರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ( 90 ಗೋಲು, 164 ಪಂದ್ಯ) ಎರಡನೇ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (117 ಗೋಲು, 191 ಪಂದ್ಯ ) ಮೊದಲನೇ ಸ್ಥಾನದಲ್ಲಿದ್ದಾರೆ.

ಭಾರತದಲ್ಲಿ ಕ್ರಿಕೆಟ್‌ ಅಬ್ಬರದ ನಡುವೆ ಫುಟ್‌ಬಾಲ್‌ ಸೇರಿದಂತೆ ಇತರ ಕ್ರೀಡೆಗಳು ಮಂಕಾಗಿರುವುದು ನಿಜ. ಆದರೆ ಕೇರಳ, ಪಶ್ಚಿಮ ಬಂಗಾಳ, ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕ್ರಿಕೆಟ್‌ಗಿಂತಲೂ ಫುಟ್‌ಬಾಲ್‌ ಅತ್ಯಂತ ಜನಪ್ರಿಯವಾಗಿದೆ.  

ನಿಮಗೆ ಏನು ಅನ್ನಿಸ್ತು?
1 ವೋಟ್
eedina app