
- ಅಭಿಮಾನಿಗಳಿಂದ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ನಲ್ಲಿ ಗಲಭೆ
- ಹಿಂಸಾಚಾರ ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು
ಫಿಫಾ ವಿಶ್ವಕಪ್ನಲ್ಲಿ ಭಾನುವಾರ ಮೊರಾಕ್ಕೋ ವಿರುದ್ಧ ಬೆಲ್ಜಿಯಂ ಎರಡು ಗೋಲುಗಳಿಂದ ಸೋತಿದೆ. ಈ ಸೋಲಿನ ಪರಿಣಾಮ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ನಲ್ಲಿ ಗಲಭೆ ಸೃಷ್ಟಿಯಾಗಿದೆ.
ಬೆಲ್ಜಿಯಂ ಸೋಲಿನ ನಂತರ ಬ್ರಸೆಲ್ಸ್ನ ಬೀದಿಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಅನೇಕ ಅಂಗಡಿಗಳನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಪೊಲೀಸರು ಬ್ರಸೆಲ್ಸ್ನ ಕೇಂದ್ರ ಭಾಗಗಳನ್ನು ಬಂದ್ ಮಾಡಿ, ಹಿಂಸಾಚಾರ ನಿಯಂತ್ರಿಸಲು ಅಶ್ರುವಾಯು ಶೆಲ್ಗಳನ್ನು ಸಹ ಪ್ರಯೋಗಿಸಿದ್ದಾರೆ. ಈ ಗಲಭೆಯಲ್ಲಿ ಒಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಹತ್ತಾರು ಗಲಭೆಕೋರರು ಕಾರನ್ನು ಉರುಳಿಸಿ ಬೆಂಕಿ ಹಚ್ಚಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಸೇರಿ ಅನೇಕ ವಾಹನಗಳಿಗೆ ಹಾನಿಯುಂಟಾಗಿದೆ.
ಜನರು ನಗರ ಕೇಂದ್ರದಿಂದ ದೂರವಿರುವಂತೆ ಬ್ರಸೆಲ್ಸ್ ಮೇಯರ್ ಫಿಲಿಪ್ ಕ್ಲೋಸ್ ಸೂಚಿಸಿದ್ದಾರೆ. ಬೀದಿಗಳಲ್ಲಿ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ತಮ್ಮ ಕೈಲಾದಷ್ಟು ಶ್ರಮ ಪಡುತ್ತಿದ್ದಾರೆ. ಪೊಲೀಸರ ಆದೇಶದ ನಂತರ ಮೆಟ್ರೋ ಮತ್ತು ಟ್ರಾಮ್ ಸಂಚಾರವನ್ನು ಸಹ ನಿಲ್ಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಫಿಫಾ ವಿಶ್ವಕಪ್ | ಎಂಬಾಪೆ ಮಿಂಚು, ಮೊದಲ ತಂಡವಾಗಿ 16ರ ಘಟ್ಟ ಪ್ರವೇಶಿಸಿದ ಹಾಲಿ ಚಾಂಪಿಯನ್ ಫ್ರಾನ್ಸ್
ಸುಮಾರು 100 ಪೊಲೀಸ್ ಅಧಿಕಾರಿಗಳನ್ನು ಸಜ್ಜುಗೊಳಿಸಲಾಗಿದ್ದು, ಹಿಂಸಾಚಾರದ ಸಮಯದಲ್ಲಿ ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ವಿಶ್ವ ದರ್ಜೆಯ ಆಟಗಾರರಿಂದ ಕಂಗೊಳಿಸುತ್ತಿದ್ದ ಬೆಲ್ಜಿಯಂ ತಂಡವನ್ನು ಮೊರಾಕ್ಕೋ ಎರಡು ಗೋಲುಗಳಿಂದ ಸೋಲಿಸಿತ್ತು. ಮೊರಾಕ್ಕೋ ಪರ ಮೊದಲ ಗೋಲು ರೂಮನ್ ಸೈಸ್ ಮತ್ತು ಎರಡನೇ ಗೋಲು ಜಕಾರಿಯಾ ಅಬುಖ್ಲಾಲ್ ಬಾರಿಸಿದ್ದರು. ಈ ಗೆಲುವಿನ ನಂತರ, ಮೊರಾಕ್ಕೋ ಫೈನಲ್ 16 ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಬೆಲ್ಜಿಯಂಗೆ ಆ ಹಂತ ತಲುಪಲು ಕಷ್ಟವಾಗಿದೆ.