- ಥಾರ್ ಜೀಪ್ ಏರಿ ದೂರದ ಕತಾರ್ಗೆ ಒಬ್ಬಂಟಿ ಪ್ರಯಾಣ
- ಮಾಹಿ ನಿವಾಸಿಯಾಗಿರುವ ಐದು ಮಕ್ಕಳ ತಾಯಿ ನಾಜಿ ನೌಶಿ
ವಿಶ್ವದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಯೆಂದರೆ ಫುಟ್ಬಾಲ್. ಭಾರತದಲ್ಲಿ ಕ್ರಿಕೆಟ್ ಮೇಲಿನ ಪ್ರೀತಿ ತುಸು ಹೆಚ್ಚಾಗಿಯೇ ಇದೆಯಾದರೂ ಕೇರಳ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಫುಟ್ಬಾಲ್ ಜ್ವರ ಜೋರಾಗಿಯೇ ಇದೆ.
ಫುಟ್ಬಾಲ್ ವಿಶ್ವಕಪ್ ಬಂತೆಂದರೆ ಸಾಕು, ಕೇರಳದ ರಸ್ತೆಗಳು, ವಾಹನಗಳು ಅರ್ಜೆಂಟೀನಾ, ಬ್ರೆಝಿಲ್, ಫ್ರಾನ್ಸ್, ಪೋರ್ಚುಗಲ್ ದೇಶಗಳ ಬಣ್ಣಗಳಿಂದ ಕಂಗೊಳಿಸುತ್ತವೆ. ಕೆಲ ಗ್ರಾಮಗಳ ಹೆಸರುಗಳು ಸಹ ತಾತ್ಕಾಲಿವಾಗಿ ಫುಟ್ಬಾಲ್ ಚಾಂಪಿಯನ್ನರ ಊರಿನ ಹೆಸರುಗಳಾಗಿ ಬಿಡುತ್ತವೆ. ಫುಟ್ಬಾಲ್ ಆಟವನ್ನು ಹೃದಯಲ್ಲಿಟ್ಟು ಪೂಜಿಸುವ ದೇವರ ಸ್ವಂತ ಊರಿನಿಂದ ಮಹಿಳೆಯೊಬ್ಬರು, ಅರಬ್ ರಾಷ್ಟ್ರ ಕತಾರ್ನಲ್ಲಿ ನಡೆಯುವ ಫುಟ್ಬಾಲ್ ವಿಶ್ವಕಪ್ ಪಂದ್ಯಾಕೂಟವನ್ನು ವೀಕ್ಷಿಸಲು ಥಾರ್ ಜೀಪ್ ಏರಿ ಹೊರಟಿದ್ದಾರೆ. ಅದು ಏಕಾಂಕಿಯಾಗಿ !
ಇವರ ಹೆಸರು ನಾಜಿ ನೌಶಿ. ಮಾಹಿ ನಿವಾಸಿ. ಐದು ಮಕ್ಕಳ ತಾಯಿ. ಗೃಹಿಣಿಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸುವುದರ ಜೊತೆಗೆ ಪ್ರವಾಸದ ಹವ್ಯಾಸವುಳ್ಳವರು, ಯೂಟ್ಯೂಬ್ನಲ್ಲಿ ವ್ಲಾಗರ್ ಆಗಿಯೂ ನಾಜಿ ಚಿರಪರಿಚಿತರಾಗಿದ್ದಾರೆ. ಫುಟ್ಬಾಲ್ ಮಾಂತ್ರಿಕ ಮೆಸ್ಸಿ ಮತ್ತು ಮೆಸ್ಸಿ ನಾಯಕನಾಗಿರುವ ಅರ್ಜೆಂಟೀನಾ ತಂಡವನ್ನು ಅತಿಯಾಗಿ ಇಷ್ಟಪಡುವ ನಾಜಿ, ತನ್ನ ನೆಚ್ಚಿನ ತಂಡ ಕತಾರ್ ಮೈದಾನದಲ್ಲಿ ಕಣಕ್ಕಿಳಿಯುವುದನ್ನು ವೀಕ್ಷಿಸಲು, ಮಹೀಂದ್ರಾ ಥಾರ್ ಜೀಪ್ ಏರಿ ದೂರದ ಕತಾರ್ಗೆ ಒಬ್ಬಂಟಿಯಾಗಿ ಪ್ರಯಾಣ ಬೆಳೆಸಿದ್ದಾರೆ.
ಕೇಳುವಾಗ ಆಶ್ಚರ್ಯ ಎನಿಸಬಹುದಾದರೂ ಸಹ, ನಾಜಿ ಈಗಾಗಲೇ ಕತಾರ್ನತ್ತ ಪ್ರಯಾಣ ಆರಂಭಿಸಿದ್ದಾರೆ ಎನ್ನುವುದು ಸತ್ಯ. ಸುಮಾರು ಎರಡು ತಿಂಗಳುಗಳ ಕಾಲ ನಡೆಯಲಿರುವ ನಾಜಿ ಯಾತ್ರೆಗೆ ಕಣ್ಣೂರ್ನಲ್ಲಿ ಕೇರಳ ಸಾರಿಗೆ ಸಚಿವ ಆಂಟನಿ ರಾಜು ಹಸಿರು ನಿಶಾನೆ ತೋರಿ ಶುಭ ಹಾರೈಸಿದ್ದಾರೆ. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು, ಊರವರು ಉಪಸ್ಥಿತರಿದ್ದರು.
ಕಣ್ಣೂರ್ನಿಂದ ಕೊಯಂಬತ್ತೂರು ಮೂಲಕ ಮುಂಬೈ ತಲುಪಲಿರುವ ನಾಜಿ, ಆ ಬಳಿಕ ಹಡಗಿನಲ್ಲಿ ಜೀಪ್ ಸಹಿತ ಒಮಾನ್ ತಲುಪಲಿದ್ದಾರೆ. ಅಲ್ಲಿಂದ ಜೀಪ್ನಲ್ಲಿ ಪ್ರಯಾಣ ಮುಂದುವರಿಸಿ, ಒಮಾನ್, ಯುಎಇ, ಬಹ್ರೈನ್, ಕುವೈತ್, ಸೌದಿ ಅರೇಬಿಯಾ ರಸ್ತೆಗಳ ಮೂಲಕ ಡಿಸೆಂಬರ್ ಮೊದಲ ವಾರದಲ್ಲಿ ಕತಾರ್ ತಲುಪುವ ಗುರಿ ಹೊಂದಿದ್ದಾರೆ.

ವಿಶ್ರಾಂತಿ ಪಡೆಯಲು ಟೆಂಟ್ ಮತ್ತು ಅಡುಗೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಹೀಂದ್ರಾ ಥಾರ್ ಜೀಪ್ನಲ್ಲಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ʻವ್ಯಾನ್ ಲೈಫ್ʼ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದಾಗಿ ನಾಜಿ ತಿಳಿಸಿದ್ದಾರೆ.
ನಾಜಿ ನೌಶಿ ಒಬ್ಬಂಟಿಯಾಗಿ ಪ್ರವಾಸ ತೆರಳುತ್ತಿರುವುದು ಇದು ಮೊದಲೇನಲ್ಲ. 2021ರಲ್ಲಿ ನಾಜಿ ಒಬ್ಬರೇ ಕೇರಳದಿಂದ ಲಡಾಖ್ಗೆ ಪ್ರಯಾಣಿಸಿದ್ದರು. ಆ ಬಳಿಕ 30 ದಿನಗಳ ಕಾಲ ಲಕ್ಷದ್ವೀಪ್ ಮತ್ತು ಎವರೆಸ್ಟ್ಗೆ ಪ್ರವಾಸ ಕೈಗೊಂಡಿದ್ದಾರೆ. ಎವರೆಸ್ಟ್ಗೆ ತೆರಳುವ ವೇಳೆ ಸಾರ್ವಜನಿಕ ಸಾರಿಗೆ, ಟ್ರಕ್ ಸೇರಿದಂತೆ ಇತರರೊಂದಿಗೆ ಲಿಫ್ಟ್ ಕೇಳಿ ಎವರೆಸ್ಟ್ ತಲುಪಿದ್ದರು ಎಂಬುದು ವಿಶೇಷ.
ಮಾಹಿ ನಿವಾಸಿಯಾಗಿರುವ ನಾಜಿ ನೌಶಿ ಕಳೆದ ಏಳು ವರ್ಷಗಳಿಂದ ಒಮಾನ್ನಲ್ಲಿ ನೆಲೆಸಿದ್ದಾರೆ. ಅಲ್ಲಿನ ಲೈಸನ್ಸ್ ಕೂಡ ಹೊಂದಿದ್ದಾರೆ. ತನ್ನ ಐದು ಮಕ್ಕಳನ್ನು ತಾಯಿಯ ಸುಪರ್ದಿಗೆ ಒಪ್ಪಿಸಿ ಇದೀಗ ನಾಜಿ ಕನಸಿನ ಯಾತ್ರೆ ಆರಂಭಿಸಿದ್ದಾರೆ.
