ಕತಾರ್‌ ಫಿಫಾ ವಿಶ್ವಕಪ್‌ | ಬಲಿಷ್ಠ ಬ್ರೆಜಿಲ್‌ಗೆ ಸಾಟಿಯಿಲ್ಲ, ಅತಿಹೆಚ್ಚು ಫೈನಲ್‌ನಲ್ಲಿ ಕಾಣಿಸಿಕೊಂಡ ಜರ್ಮನಿ

  • ಅಲ್ ಬೈತ್‌ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ
  • ಮೊದಲ ಪಂದ್ಯದಲ್ಲಿ ಕತಾರ್‌- ಈಕ್ವೆಡಾರ್‌ ಮುಖಾಮುಖಿ

ಅರಬ್‌ ನಾಡಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಫುಟ್‌ಬಾಲ್‌ ಮಹಾಸಂಗಮ ಫಿಫಾ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳಷ್ಟೇ ಉಳಿದಿದೆ. ಕತಾರ್‌ನ ರಾಜಧಾನಿ ದೋಹಾದಿಂದ 40 ಕಿಮೀ ಉತ್ತರದಲ್ಲಿರುವ ಅಲ್ ಬೈತ್‌ ಕ್ರೀಡಾಂಗಣದಲ್ಲಿ ಭಾನುವಾರ ಉದ್ಘಾಟನಾ ಸಮಾರಂಭವು ನಡೆಯಲಿದೆ.

ಭಾರತೀಯ ಕಾಲಮಾನದ ಸಂಜೆ 7:30 ರಿಂದ ಅದ್ದೂರಿ ಕಾರ್ಯಕ್ರಮವು ಪ್ರಾರಂಭವಾಗಲಿದೆ, ಕೊಲಂಬಿಯ ಪಾಪ್ ತಾರೆ ಶಕೀರಾ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಆ ಬಳಿಕ ನಡೆಯುವ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್‌, ಈಕ್ವೆಡಾರ್ ಸವಾಲನ್ನು ಎದುರಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಆರಂಭವಾಗಲಿದೆ.

1930ರಲ್ಲಿ ನಡೆದ ಚೊಚ್ಚಲ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಆತಿಥೇಯ ಉರುಗ್ವೆ, ಅರ್ಜೆಂಟೀನಾ ತಂಡವನ್ನು 4-2 ಅಂತರದಲ್ಲಿ ಮಣಿಸಿತ್ತು. ಆ ಮೂಲಕ ಫಿಫಾ ವಿಶ್ವಕಪ್‌ ಟೂರ್ನಿಯ ಮೊತ್ತಮೊದಲ ಚಾಂಪಿಯನ್‌ ಎಂಬ ಹೆಗ್ಗಳಿಕೆ ಪಡೆದಿತ್ತು. ಕತಾರ್‌ನಲ್ಲಿ ನಡೆಯುತ್ತಿರುವುದು 22ನೇ ಆವೃತ್ತಿ.

2018ರಲ್ಲಿ ರಷ್ಯಾ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಕ್ರೊಯೇಷಿಯ ತಂಡವನ್ನು ಮಣಿಸಿ ಫ್ರಾನ್ಸ್‌, 2ನೇ ಬಾರಿಗೆ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿತ್ತು.

92 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಬ್ರೆಝಿಲ್‌ ಅತಿಹೆಚ್ಚು ಬಾರಿ (5)  ಚಾಂಪಿಯನ್‌ ಪಟ್ಟವನ್ನ ಆಲಂಕರಿಸಿದ ದಾಖಲೆ ಹೊಂದಿದೆ. (1958, 1962, 1970, 1994, 2002). ಜರ್ಮನಿ ಮತ್ತು ಇಟಲಿ ತಂಡಗಳು ತಲಾ 4 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದು, 2ನೇ ಸ್ಥಾನ ಹಂಚಿಕೊಂಡಿದೆ.

8 ಬಾರಿ ಫೈನಲ್‌ ಪ್ರವೇಶಿಸಿರುವ ಮೂಲಕ ಜರ್ಮನಿ, ಅತಿಹೆಚ್ಚು ಬಾರಿ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಆಡಿದ ತಂಡ ಎಂಬ ದಾಖಲೆ ಹೊಂದಿದೆ. 1954, 1974, 1990 ಹಾಗೂ 2014ರಲ್ಲಿ ಚಾಂಪಿಯನ್‌ ಆದರೆ, 1966, 1982, 1986 ಹಾಗೂ 2002ರಲ್ಲಿ ಜರ್ಮನ್‌ ಪಡೆ ಸೋಲು ಕಂಡಿತ್ತು.

ಈ ಸುದ್ದಿಯನ್ನು ಓದಿದ್ದೀರಾ ? : ಕತಾರ್‌ ಫಿಫಾ ವಿಶ್ವಕಪ್‌ | ಆಟಗಾರರ ನಾಟಕಕ್ಕೆ ಬ್ರೇಕ್‌ ಹಾಕಲಿದೆ 'ಅಲ್ ರಿಹ್ಲಾʼ ಚೆಂಡು! ವಿಶ್ವಕಪ್‌ ಚೆಂಡಿನ ವಿಶೇಷತೆ ಗೊತ್ತಾ?

ಜರ್ಮನಿ ಕೊನೆಯದಾಗಿ ಚಾಂಪಿಯನ್‌ ಪಟ್ಟವನ್ನೇರಿದ್ದು 2014ರಲ್ಲಿ. ಆ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ಬ್ರೆಜಿಲ್‌ ತಂಡವನ್ನು 7-1 ಅಂತರದಲ್ಲಿ ಭರ್ಜರಿಯಾಗಿ ಮಣಿಸಿದ್ದ ಜರ್ಮನಿ, ರಿಯೊ ಡಿ ಜನೈರೋದದ ಐತಿಹಾಸಿಕ ಮರಕಾನ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮೆಸ್ಸಿ ತಂಡ ಅರ್ಜೆಂಟೀನಾವನ್ನು ಏಕೈಕ ಗೋಲುಗಳಿಂದ ರೋಚಕವಾಗಿ ಮಣಿಸಿತ್ತು.

ಉರುಗ್ವೆ (1930, 1950), ಅರ್ಜೆಂಟೀನಾ (1978, 1986), ಫ್ರಾನ್ಸ್‌ (1998, 2018), ಈ ಮೂರೂ ತಂಡಗಳು ತಲಾ 2 ಬಾರಿ ವಿಶ್ವ ಚಾಂಪಿಯನ್‌ ಪಟ್ಟವನ್ನಲಂಕರಿಸಿದೆ. 1966ರಲ್ಲಿ ಇಂಗ್ಲೆಂಡ್‌ ಮತ್ತು 2010ರಲ್ಲಿ ಸ್ಪೇನ್‌ ತಂಡಗಳು ಫಿಫಾ ಪ್ರಶಸ್ತಿಯ ಮೇಲೆ ಆಧಿಪತ್ಯ ಸ್ಥಾಪಿಸಿದ್ದವು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app