ಡಬ್ಲ್ಯೂಎಫ್‌ಐ ಸಮಿತಿ ರಚನೆ; ಸಮಾಲೋಚನೆ ನಡೆಸದ ಕುರಿತು ಕುಸ್ತಿಪಟುಗಳ ಬೇಸರ

  • ಮೇಲ್ವಿಚಾರಣ ಸಮಿತಿಯ ನೇತೃತ್ವ ಎಂ ಸಿ ಮೇರಿಕೋಮ್
  • ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ ಸಾಕ್ಷಿ ಮಲಿಕ್

ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ವಿರುದ್ಧದ ಲೈಂಗಿಕ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಕುಸ್ತಿಪಟುಗಳೊಂದಿಗೆ ಸಮಾಲೋಚನೆ ನಡೆಸದೇ ಸಮಿತಿ ರಚಿಸಿದ್ದಕ್ಕಾಗಿ ಖ್ಯಾತ ಕುಸ್ತಿ ಪಟು ಸಾಕ್ಷಿ ಮಲಿಕ್ ಬೇಸರ ಹೊರಹಾಕಿದ್ದಾರೆ.

ಬ್ರಿಜ್‌ ಭೂಷಣ್‌ ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದರು. ಭೂಷಣ್‌ ರಾಜೀನಾಮೆಗೆ ಒತ್ತಾಯಿಸಿ ಕ್ರೀಡಾಪಟುಗಳು ಪ್ರತಿಭಟನೆಯನ್ನೂ ನಡೆಸಿದ್ದರು. ಸಮಿತಿ ರಚನೆಗೂ ಮುನ್ನ ಸಮಾಲೋಚನೆ ನಡೆಸುವುದಾಗಿ ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ, ಕುಸ್ತಿಪಟುಗಳೊಂದಿಗೆ ಯಾವುದೇ ಸಮಲೋಚನೆ ನಡೆಸದೆ ಸಮಿತಿ ರಚಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಾಕ್ಷಿ ಮಲಿಕ್‌, "ಮೇಲುಸ್ತುವಾರಿ ಸಮಿತಿ ರಚನೆಗೂ ಮುನ್ನ ನಮ್ಮೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಸಮಿತಿ ರಚನೆಗೂ ಮುನ್ನ ನಮ್ಮೊಂದಿಗೆ ಸಮಾಲೋಚನೆ ಮಾಡದಿರುವುದು ಅತ್ಯಂತ ಬೇಸರದ ಸಂಗತಿ" ಎಂದು ಹೇಳಿದ್ದಾರೆ.

ಬ್ರಿಜ್‌ ಭೂಷಣ್ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಕೇಂದ್ರ ಸರ್ಕಾರ ನೇಮಿಸಿರುವ ಮೇಲ್ವಿಚಾರಣಾ ಸಮಿತಿಯನ್ನು ಬಾಕ್ಸಿಂಗ್ ಲೆಜೆಂಡ್‌ ಎಂ ಸಿ ಮೇರಿಕೋಮ್ ಮುನ್ನಡೆಸಲಿದ್ದಾರೆ. ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮುರ್ಗುಂಡೆ, ಟಿಒಪಿಎಸ್‌ನ ಮಾಜಿ ಸಿಇಒ ರಾಜಗೋಪಾಲನ್ ಹಾಗೂ ಸಾಯ್‌ನ ಮಾಜಿ ಕಾರ್ಯಕಾರಿ ನಿರ್ದೇಶಕಿ ರಾಧಿಕಾ ಶ್ರೀಮನ್ ಅವರು ಸಮಿತಿಯಲ್ಲಿದ್ದಾರೆ.

ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಮೂರು ದಿನಗಳ ಕಾಲ ನಡೆದ ಪ್ರತಿಭಟನೆ ವ್ಯಾಪಕ ಗಮನ ಸೆಳೆದಿತ್ತು. ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಜೇಂದರ್ ಸಿಂಗ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಇತರರು ಪ್ರತಿಭಟನೆಯ ಭಾಗವಾಗಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app