
- ಯಾವ ಹಾವು ಎಂಬುದನ್ನು ತಿಳಿಸಿ ಎಂದ ಮಿಚೆಲ್ ಜಾನ್ಸನ್
- ಇಂಡಿಯಾ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿರುವ ಆಸೀಸ್ ಮಾಜಿ ವೇಗಿ
ಆಸ್ಟ್ರೇಲಿಯದ ದಿಗ್ಗಜ ಬೌಲರ್ ಮಿಚೆಲ್ ಜಾನ್ಸನ್ ಹೋಟೆಲ್ ಕೊಠಡಿಯಲ್ಲಿ ಹಾವು ಪ್ರತ್ಯಕ್ಷವಾಗಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಆಸೀಸ್ ಮಾಜಿ ವೇಗಿ ಮಿಚೆಲ್ ಜಾನ್ಸನ್, ತಾವು ತಂಗಿರುವ ಲಕ್ನೋದ ಹೋಟೆಲ್ ಕೊಠಡಿಯಲ್ಲಿದ್ದ ಹಾವಿನ ಪೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ಜೊತೆಗೆ ಇದು ಯಾವ ಜಾತಿಗೆ ಸೇರಿದ ಹಾವು ಎಂಬುದನ್ನು ತಿಳಿಸುವಂತೆ ಅಭಿಮಾನಿಗಳಲ್ಲಿ ಕೋರಿದ್ದಾರೆ.
ಕೆಲವು ಗಂಟೆಗಳ ಬಳಿಕ ಹಾವಿನ ಫೋಟೋವನ್ನು ಮತ್ತೊಮ್ಮೆ ಪೋಸ್ಟ್ ಮಾಡಿದ ಮಿಚೆಲ್ “ಈ ಚಿತ್ರದಲ್ಲಿ ಹಾವಿನ ತಲೆಯು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೂ ಯಾವ ಹಾವೆಂದು ಇನ್ನೂ ಖಚಿತವಾಗಿಲ್ಲ. ಭಾರತದ ಲಕ್ನೋದಲ್ಲಿನ ಇದುವರೆಗಿನ ವಾಸ್ತವ್ಯವು ಕೌತುಕಮಯವಾಗಿದೆ" ಎಂದು 40 ವರ್ಷದ ಆಸೀಸ್ ಮಾಜಿ ವೇಗಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ ? : ಟಿ20 ವಿಶ್ವಕಪ್ ಕೌಂಟ್ಡೌನ್ | 6x6 ಯುವರಾಜ್ ಸ್ಮರಣೀಯ ಇನ್ನಿಂಗ್ಸ್ಗೆ 15 ವರ್ಷ
ಮಿಚೆಲ್ ಜಾನ್ಸನ್ ಹಾಕಿರುವ ಪೋಸ್ಟ್ಗೆ ಆಸ್ಟ್ರೇಲಿಯದ ಮಾಜಿ ಸಹ ಆಟಗಾರ ಬ್ರೆಟ್ ಲೀ ಮತ್ತು ದಕ್ಷಿಣ ಆಫ್ರಿಕದ ಮಾಜಿ ವೇಗಿ ವರ್ನೋನ್ ಫಿಲಾಂಡರ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಆದರೆ ಈ ಘಟನೆಯಿಂದಾಗಿ ಭಾರತದ ಪ್ರಮುಖ ನಗರವೊಂದರ ಹೊಟೇಲ್ಗಳಲ್ಲಿ ನೀಡಲಾಗುವ ಸೌಕರ್ಯಗಳು ಯಾವ ರೀತಿಯಲ್ಲಿ ಇರುತ್ತವೆ ಮತ್ತು ಅಲ್ಲಿನ ಸಿಬ್ಬಂದಿ ಎಷ್ಟೊಂದು ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಇದೊಂದು ನಾಚಿಕಗೇಡಿನ ವಿಷಯ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿರುವ ಜಾನ್ಸನ್, ಗುಜರಾತ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕ ವಿರೇಂದ್ರ ಸೆಹ್ವಾಗ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.