ಚೆನ್ನೈ | ನ್ಯೂಜಿಲೆಂಡ್ ಎ ವಿರುದ್ಧ ಸಂಜು ಬಳಗಕ್ಕೆ ಸುಲಭ ಗೆಲುವು

  • ನ್ಯೂಜಿಲೆಂಡ್ ಎ ವಿರುದ್ಧ ಭಾರತಕ್ಕೆ 7 ವಿಕೆಟ್‌ ಗೆಲುವು
  • ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ

ಬೌಲಿಂಗ್‌ನಲ್ಲಿ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಸೆನ್ ಅವರ ಸಾಹಸದ ನೆರವಿನಿಂದ ಭಾರತ ಎ ತಂಡ, ನ್ಯೂಜಿಲೆಂಡ್ ಎ ವಿರುದ್ಧದ ಏಕದಿನ ಪಂದ್ಯದಲ್ಲಿ 7 ವಿಕೆಟ್‌ ಅಂತರದಲ್ಲಿ ಗೆದ್ದು ಬೀಗಿದೆ.

ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸಂಜು ಸಾಮ್ಸನ್‌, ಪ್ರವಾಸಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಆರಂಭಿಕರಾದಿಯಾಗಿ ಬಂದ ದಾಂಡಿಗರೆಲ್ಲಾ ಪೆವಿಲಿಯನ್‌ ಪರೇಡ್ ನಡೆಸುತ್ತಾ ಸಾಗಿದರು. ಆದರೆ 8ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಮೈಕಲ್‌ ರಿಪ್ಪನ್‌, ತಾಳ್ಮೆಯ ಅರ್ಧಶತಕ ಗಳಿಸಿ ತಂಡದ ಮಾನ ಕಾಪಾಡಿದರು.

104 ಎಸೆತಗಳನ್ನು ಎದುರಿಸಿದ ರಿಪ್ಪನ್‌, 4 ಬೌಂಡರಿಗಳ ನೆರವಿನಿಂದ 61 ರನ್‌ ಗಳಿಸಿ ನಿರ್ಗಮಿಸಿದರು. ಅಂತಿಮ ಓವರ್‌ಗಳಲ್ಲಿ ಮೈಕಲ್‌ ರಿಪ್ಪನ್‌ಗೆ ಸಾಥ್‌ ನೀಡಿದ ಬೌಲರ್‌ ಜಾಯ್‌ ವಾಕರ್‌ 49 ಎಸೆತಗಳಲ್ಲಿ 36 ರನ್‌ ಗಳಿಸಿ ರನೌಟ್‌ಗೆ ಬಲಿಯಾದರು.

ಈ ಸುದ್ದಿ ಓದಿದ್ದೀರಾ ? : ಅಕ್ಟೋಬರ್‌ 18ರಂದು ವಾರ್ಷಿಕ ಸಭೆ | ಬಿಸಿಸಿಐಗೆ ಜಯ್‌ ಶಾ ಅಧ್ಯಕ್ಷ?

ಒಂದು ಹಂತದಲ್ಲಿ,  ನ್ಯೂಜಿಲೆಂಡ್ ಎ ತಂಡ 74 ರನ್‌ ಗಳಿಸುವಷ್ಟರಲ್ಲೇ 8 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಬಳಿಕ ಜೊತೆಯಾದ, ಮೈಕಲ್‌ ರಿಪ್ಪನ್‌ ಮತ್ತು ಜಾಯ್‌ ವಾಕರ್‌, ತಂಡದ ಮೊತ್ತವನ್ನು 167ಕ್ಕೆ ಕೊಂಡೊಯ್ದರು. ಬಿಗು ಬೌಲಿಂಗ್‌ ದಾಳಿ ಸಂಘಟಿಸಿದ ಶಾರ್ದೂಲ್ ಠಾಕೂರ್‌ 32 ರನ್‌ ನೀಡಿ 4 ವಿಕೆಟ್‌ ಪಡೆದರೆ, ಕುಲ್ದೀಪ್‌ ಸೆನ್ 30 ರನ್‌ ನೀಡಿ 3 ವಿಕೆಟ್‌ ತಮ್ಮದಾಗಿಸಿಕೊಂಡರು.

ಸಾಮಾನ್ಯ ಗುರಿ ಬೆನ್ನಟ್ಟಿದ ಭಾರತ, 31.5 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ 170 ರನ್ ಗಳಿಸಿ ಜಯಗಳಿಸಿತು. ನಾಯಕ ಸಂಜು ಸ್ಯಾಮ್ಸನ್‌ 29 ರನ್‌ ಮತ್ತು ರಜತ್‌ ಪಾಟೀದಾರ್‌ 45 ರನ್‌ ಗಳಿಸಿ ಅಜೇಯರಾಗುಳಿದರು. ಉಳಿದಂತೆ ಆರಂಭಿಕ ಪೃಥ್ವಿ ಶಾ 17 ರನ್‌, ಋತುರಾಜ್ ಗಾಯಕ್ವಾಡ್‌ 41 ರನ್‌ ಹಾಗೂ ರಾಹುಲ್ ತ್ರಿಪಾಠಿ 31 ರನ್‌ ಗಳಿಸಿ ನಿರ್ಗಮಿಸಿದರು.  

ನಿಮಗೆ ಏನು ಅನ್ನಿಸ್ತು?
0 ವೋಟ್