ಹಾಕಿ ವಿಶ್ವಕಪ್‌ | ಸೆಮಿಫೈನಲ್‌ ಹಂತಕ್ಕೇರಿದ ಬೆಲ್ಜಿಯಂ, ಆಸ್ಟ್ರೇಲಿಯ

  • ಸತತ 12ನೇ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ ಆಸ್ಟ್ರೇಲಿಯ
  • ನ್ಯೂಜಿಲೆಂಡ್‌ ತಂಡದ ಚೊಚ್ಚಲ ಸೆಮಿಫೈನಲ್‌ ಕನಸು ಭಗ್ನ

ಹಾಲಿ ಚಾಂಪಿಯನ್‌ ಬೆಲ್ಜಿಯಂ ಮತ್ತು ವಿಶ್ವ ನಂ. 1 ಶ್ರೇಯಾಂಕಿತ ಆಸ್ಟ್ರೇಲಿಯ ತಂಡಗಳು, ಒಡಿಶಾದಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಹಾಕಿ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದೆ.

ನ್ಯೂಜಿಲೆಂಡ್ ವಿರುದ್ಧ 2- 0 ಗೋಲುಗಳ ಅಂತರದಲ್ಲಿ ಬೆಲ್ಜಿಯಂ ಗೆದ್ದರೆ, ಆಸ್ಟ್ರೇಲಿಯ 4- 3 ಗೋಲುಗಳಿಂದ ಸ್ಪೇನ್‌ ತಂಡವನ್ನು ಮಣಿಸಿತು.

6 ನಿಮಿಷದಲ್ಲಿ 4 ಗೋಲು ದಾಖಲಿಸಿದ ಆಸ್ಟ್ರೇಲಿಯ!

ಸ್ಪೇನ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಧ್ಯಂತರ ವಿರಾಮದ ವೇಳೆಗೆ ಆಸ್ಟ್ರೇಲಿಯ 2- 1 ಗೋಲುಗಳಿಂದ ಹಿನ್ನಡೆ ಅನುಭವಿಸಿತ್ತು. ಆದರೆ ಸೋಲೊಪ್ಪಿಕೊಳ್ಳುವುದಿಲ್ಲ ಎಂದು ದೃಢನಿಶ್ಚಯ ಮಾಡಿ,  ವಿಶ್ವ ನಂಬರ್‌ 1 ತಂಡ ಎಂಬುದನ್ನು ನಿರೂಪಿಸುವ ಶೈಲಿಯ ಆಟ ಪ್ರದರ್ಶಿಸಿದ ಆಸೀಸ್‌, ನಂತರದ 6 ನಿಮಿಷಗಳಲ್ಲಿ 4 ಗೋಲು ಗಳಿಸುವ ಮೂಲಕ ಎದುರಾಳಿ ಸ್ಪೇನ್‌ ತಂಡಕ್ಕೆ ಶಾಕ್‌ ನೀಡಿತು.

ಪಂದ್ಯ ಮುಗಿಯಲು 2 ನಿಮಿಷಗಳು ಬಾಕಿ ಇರುವಾಗ ಸಮಬಲ ಸಾಧಿಸಲು ದೊರಕಿದ್ದ ಅಪೂರ್ವ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಿದ ಸ್ಪೇನ್‌, ಟೂರ್ನಿಯಿಂದಲೇ ಹೊರನಡೆಯಿತು. ದ್ವಿತಿಯಾರ್ಧದ 7 ನಿಮಿಷಗಳಲ್ಲಿ ಒಟ್ಟು 5 ಗೋಲುಗಳು ದಾಖಲಾಗುವ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯ, ಸತತ 12ನೇ ಬಾರಿಗೆ ಹಾಕಿ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದೆ.

ಆತಿಥೇಯ ಭಾರತವನ್ನು ಕ್ರಾಸ್‌ ಓವರ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟೌನಲ್ಲಿ ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ನ್ಯೂಜಿಲೆಂಡ್‌, 2- 0 ಗೋಲುಗಳ ಅಂತರದಲ್ಲಿ ಬೆಲ್ಜಿಯಂಗೆ ಶರಣಾಗುವ ಮೂಲಕ ವಿಶ್ವಕಪ್‌ ಅಭಿಯಾನ  ಮುಗಿಸಿತು. ಇದರೊಂದಿಗೆ ಕಿವೀಸ್‌ ತಂಡದ  ಚೊಚ್ಚಲ ಸೆಮಿಫೈನಲ್‌ ಕನಸು ಭಗ್ನವಾಯಿತು. ಬೆಲ್ಜಿಯಂ ಪರ ಟಾಮ್ ಬೂನ್ 11ನೇ ನಿಮಿಷದಲ್ಲಿ ಮತ್ತು ಫ್ಲೋರೆಂಟ್ ವ್ಯಾನ್ ಆಬೆಲ್ 16ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಬುಧವಾರ ನಡೆಯಲಿರುವ ಕ್ವಾರ್ಟರ್‌ಫೈನಲ್ ಪಂದ್ಯಗಳ ವಿವರ

  • ಇಂಗ್ಲೆಂಡ್ vs ಜರ್ಮನಿ, ಸಂಜೆ 4.30ಕ್ಕೆ,
  • ನೆದರ್‌ಲ್ಯಾಂಡ್ಸ್‌ vs ಕೊರಿಯಾ, ಸಂಜೆ 7ಕ್ಕೆ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app