ಮಹಿಳಾ ಹಾಕಿ ವಿಶ್ವಕಪ್ | ಭಾರತಕ್ಕೆ ಸ್ಪೇನ್ ಸವಾಲು

  • ಭಾನುವಾರದ ಪಂದ್ಯ ಗೆದ್ದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ
  • ಕ್ವಾರ್ಟರ್ ಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯ ಎದುರಾಳಿ

ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸುವ ಗುರಿ ಹೊಂದಿರುವ ಭಾರತ, ಭಾನುವಾರ ನಡೆಯಲಿರುವ ಕ್ರಾಸ್ ಓವರ್ ಪಂದ್ಯದಲ್ಲಿ ಆತಿಥೇಯ ಸ್ಪೇನ್ ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ 2 ಡ್ರಾ, ಒಂದು ಸೋಲು ಕಂಡು 3ನೇ ಸ್ಥಾನ ಪಡೆದ ಭಾರತ, ಕ್ವಾರ್ಟರ್ ಫೈನಲ್‌ಗೇರಲು ಸ್ಪೇನ್ ವಿರುದ್ಧ ಜಯ ಸಾಧಿಸಬೇಕಿದೆ. ಗೋಲ್‌ಕೀಪರ್ ಸವಿತಾ ನೇತೃತ್ವದ ಭಾರತ ತಂಡವು ಇಂಗ್ಲೆಂಡ್ (1- 1) ಮತ್ತು ಚೀನಾ (1- 1) ವಿರುದ್ಧ ಕ್ರಮವಾಗಿ ಎರಡು ರೋಚಕ ಡ್ರಾಗಳನ್ನು ಸಾಧಿಸಿತ್ತು. ಪಂದ್ಯಾವಳಿಯ ತಮ್ಮ ಪೂಲ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ 3- 4 ಕಿರಿದಾದ ಸೋಲನ್ನು ಅನುಭವಿಸಿತು.

ಇಂಗ್ಲೆಂಡ್ ಹಾಗೂ ಚೀನಾ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ, ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ಮೂರೂ ಪಂದ್ಯಗಳಿಂದ 30ಕ್ಕೂ ಹೆಚ್ಚು ಪೆನಾಲ್ಟಿ ಕಾರ್ನರ್ ಅವಕಾಶಗಳು ದೊರೆತರೂ ಭಾರತ ಕೇವಲ 3 ಗೋಲು ಗಳಿಸಿ ನಿರಾಸೆ ಮೂಡಿಸಿದೆ. ಬಲಿಷ್ಠ ಸ್ಪೇನ್ ವಿರುದ್ಧ ಗೆಲ್ಲಬೇಕಿದ್ದರೆ ಭಾರತ ಸುಧಾರಿತ ಪ್ರದರ್ಶನ ತೋರಬೇಕಿದೆ. ಗೆದ್ದರೆ ಕ್ವಾರ್ಟರ್ ಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯ ಎದುರಾಗಲಿದೆ.

ನ್ಯೂಜಿಲೆಂಡ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ದೊರೆತ 15 ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಕೇವಲ ಒಂದರಲ್ಲಿ ಗೋಲು ಗಳಿಸಿ ನಿರಾಸೆ ಮೂಡಿಸಿದ ಭಾರತ ತಂಡ, ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ವಿಫಲವಾಗಿದೆ. ‘ಬಿ’ ಗುಂಪಿನ ಅಂತಿಮ ಪಂದ್ಯದಲ್ಲಿ 3- 4 ಗೋಲುಗಳ ಸೋಲು ಕಂಡ ಭಾರತ 3ನೇ ಸ್ಥಾನಕ್ಕೆ ತೃಪ್ತಿಪಟ್ಟು ಕ್ರಾಸ್‌ ಓವರ್‌ ಪಂದ್ಯದಲ್ಲಿ ಆಡಬೇಕಾದ ಅನಿವಾರ್ಯತೆಗೆ ಸಿಲುಕಿತು.

ಈ ಮೊದಲು ಅಗ್ರಸ್ಥಾನ ಪಡೆದ ನ್ಯೂಜಿಲೆಂಡ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ನೆದರ್‌ಲೆಂಡ್‌, ಅರ್ಜೆಂಟೀನಾ ಹಾಗೂ ಆಸ್ಪ್ರೇಲಿಯ ತಂಡಗಳು ತಮ್ಮ  ಗುಂಪುಗಳಲ್ಲಿ ಮೊದಲ ಸ್ಥಾನ ಪಡೆದು ಅಂತಿಮ 8ರ ಸುತ್ತಿಗೆ ನೇರ ಪ್ರವೇಶ ಪಡೆದಿವು. ಗುಂಪಿನಲ್ಲಿ 2ನೇ ಮತ್ತು 3ನೇ ಸ್ಥಾನ ಪಡೆದ ತಂಡಗಳು ಕ್ವಾರ್ಟರ್‌ ಫೈನಲ್‌ ಅರ್ಹತೆಗಾಗಿ ಕ್ರಾಸ್‌ ಓವರ್‌ ಪಂದ್ಯಗಳನ್ನು ಆಡಬೇಕಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ಸ್ಪೇನ್‌ ಸವಾಲು ಎದುರಾಗಲಿದ್ದು, ಗೆದ್ದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ ಸಿಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್