ಹೈದರಾಬಾದ್‌ | ಟಿ20 ಪಂದ್ಯದ ಟಿಕೆಟ್‌ಗಾಗಿ ನೂಕುನುಗ್ಗಲು: ಕಾಲ್ತುಳಿತ, ಲಾಠಿಚಾರ್ಜ್‌

  • ಸೆಪ್ಟಂಬರ್‌ 25ರಂದು ನಡೆಯಲಿರುವ ಸರಣಿಯ ಮೂರನೇ ಪಂದ್ಯ
  • 3 ಸಾವಿರ ಟಿಕೆಟ್‌ಗಳಿಗಾಗಿ 30 ಸಾವಿರಕ್ಕೂ ಅಧಿಕ ಮಂದಿ 'ಕ್ಯೂ'

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ- 20 ಸರಣಿಯ ಮೂರನೇ ಪಂದ್ಯ ಸೆಪ್ಟಂಬರ್‌ 25, ಮಂಗಳವಾರದಂದು ಹೈದರಾಬಾದ್‌ನ ರಾಜೀವ್‌ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದ ಟಿಕೆಟ್‌ಗಳ ಮಾರಾಟ ಈಗಾಗಲೇ ಆರಂಭವಾಗಿದೆ.

ಜಿಮ್ಖಾನ ಮೈದಾನದ ಹೊರಗಿನ ಕೌಂಟರ್‌ಗಳಲ್ಲಿ ಗುರುವಾರ ಬೆಳಗ್ಗೆ 10 ಗಂಟೆಯಿಂದ ಟಿಕೆಟ್‌ ಮಾರಾಟ ಮಾಡಲಾಗುವುದು ಎಂದು ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ (ಎಚ್‌ಸಿಎ) ತಿಳಿಸಿತ್ತು. ಈ ಹಿನ್ನಲೆಯಲ್ಲಿ ಟಿಕೆಟ್‌ ಖರೀದಿಸಲು ಮುಂಜಾನೆಯಿಂದಲೇ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪರಿಣಾಮ ಟಿಕೆಟ್ ಖರೀದಿಸಲು ನೂಕು ನುಗ್ಗಲು ಉಂಟಾಗಿದೆ. ಸಾಲು ಬಲುದೂರ ಸಾಗುತ್ತಲೇ ವಾಗ್ವಾದ ಆರಂಭವಾಗಿತ್ತು.

ಈ ಸುದ್ದಿ ಓದಿದ್ದೀರಾ ? : 23 ವರ್ಷಗಳ ಬಳಿಕ ಆಂಗ್ಲರ ನೆಲದಲ್ಲಿ ಸರಣಿ ಗೆದ್ದ ಭಾರತ ಮಹಿಳಾ ತಂಡ

2 ಕೌಂಟರ್‌ಗಳಲ್ಲಿ 3 ಸಾವಿರ ಟಿಕೆಟ್‌ಗಳನ್ನು ಮಾರಾಟಕ್ಕಿಡಲಾಗಿತ್ತು. ಆದರೆ 30 ಸಾವಿರಕ್ಕೂ ಅಧಿಕ ಅಭಿಮಾನಿಗಳು ಟಿಕೆಟ್‌ಗಾಗಿ ಮುಗಿಬಿದ್ದ ಕಾರಣ ಕಾಲ್ತುಳಿತ ಉಂಟಾಗಿದೆ.  ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಕಂಡ ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ 20ಕ್ಕೂ ಅಧಿಕ ಮಂಧಿಗೆ ಗಾಯಗಳಾಗಿದೆ. ಸರ್ವರ್‌ಗಳ ಸ್ಥಗಿತದಿಂದಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ.

ʻಜನ ಕಿಲೋಮೀಟರ್‌ಗಟ್ಟಲೆ ಸರತಿಯಲ್ಲಿ ನಿಂತಿದ್ದರೂ ಸಹ,  ಟಿಕೆಟ್‌ಗಳನ್ನು ಮಾರಾಟ ಮಾಡಲು ಎಚ್‌ಸಿಎ ಯಾವುದೇ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಪರಿಣಾಮ ನೂಕುನುಗ್ಗಲು, ಪರಸ್ಪರ ತಳ್ಳಾಟ ಪ್ರಾರಂಭವಾಯಿತು. ಈ ವೇಳೆ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದರು.  ಕೂಡಲೇ ಪೊಲೀಸ್ ಸಿಬ್ಬಂದಿ ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಡಿಎಸ್ ಚೌಹಾಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ, ವಿಕೋಪಕ್ಕೆ ತಿರುಗುವ ಸೂಚನೆ ದೊರೆಯುತ್ತಲೇ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಬಳಿಕ ನಡೆದ ಲಾಠಿಚಾರ್ಜ್‌ ಸಂದರ್ಭದಲ್ಲಿ ಕೆಲ ಪೊಲೀಸರ ಮೇಲೂ ಗುಂಪಿನಲ್ಲಿದ್ದವರು ಹಲ್ಲೆ ನಡೆಸಿದ್ದಾರೆ ಎಂದು ಚೌಹಾಣ್ ತಿಳಿಸಿದ್ದಾರೆ.

ಮೊಹಾಲಿಯಲ್ಲಿ ಮಂಗಳವಾರ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ, ಹಾಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ, 4 ವಿಕೆಟ್‌ ಅಂತರದಲ್ಲಿ ಆತಿಥೇಯ ರೋಹಿತ್‌ ಬಳಗವನ್ನು ಮಣಿಸಿತ್ತು. ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್