ಪಾಠ ಕಲಿಯದ ರೋಹಿತ್| ಮೂರು ಬಾರಿ ಲಯ ತಪ್ಪಿದ ಭುವನೇಶ್ವರ್‌ ಎಸೆದ 19ನೇ ಓವರ್‌

  • ಮೂರೂ ಪಂದ್ಯಗಳಲ್ಲಿ ಕೈಕೊಟ್ಟ 19ನೇ ಓವರ್‌ 
  • ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯ ವಿರುದ್ಧ ಸೋಲು

ಏಷ್ಯಾ ಕಪ್‌ನಲ್ಲಿನ ನಿರಾಶಾದಾಯಕ ಪ್ರದರ್ಶನದ ಬಳಿಕ, ತವರಿನಲ್ಲೇ ನಡೆದ ಟಿ20 ಪಂದ್ಯದಲ್ಲೂ ಭಾರತ ಮಂಗಳವಾರ ಮುಗ್ಗರಿಸಿತ್ತು. ಆಸೀಸ್‌ ದಾಂಡಿಗರನ್ನು ಕಟ್ಟಿಹಾಕಲು ಭಾರತದ ದುರ್ಬಲ ಬೌಲಿಂಗ್‌ ವಿಭಾಗಕ್ಕೆ ಸಾಧ್ಯವಾಗಿರಲಿಲ್ಲ. ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆಯೇ ಆರೋನ್‌ ಫಿಂಚ್‌ ಪಡೆ ಗೆಲುವಿನ ನಗೆ ಬೀರಿತ್ತು.

ಮೊಹಾಲಿಯಲ್ಲಿ ತಲಾ ನಾಲ್ಕು ಓವರ್‌ ಎಸೆದಿದ್ದ ಅನುಭವಿ ಭುವನೇಶ್ವರ್‌ ಕುಮಾರ್‌ ಮತ್ತು ಹರ್ಷಲ್‌ ಪಟೇಲ್‌ ಒಟ್ಟು ಎಂಟು ಓವರ್‌ಗಳಲ್ಲಿ 101 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅದಾಗಿಯೂ ಯಾವುದೇ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದರು. ಪಂದ್ಯದ ಬಳಿಕ ಭಾರತದ ಬೌಲಿಂಗ್‌ ಎಷ್ಟು ದುರ್ಬಲವಾಗಿದೆ ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ವಿಶೇಷವೆಂದರೆ ಡೆತ್‌ ಓವರ್‌ನಲ್ಲಿ 63 ರನ್‌ ಬಿಟ್ಟುಕೊಟ್ಟಿರುವ ಭುವಿ, ಯಾವುದೇ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ.

19ನೇ ಓವರ್‌ ಮತ್ತು ಭುವನೇಶ್ವರ್‌ ಕುಮಾರ್‌ 

ಏಷ್ಯಾ ಕಪ್‌ನ ನಿರ್ಣಾಯಕ ಸೂಪರ್‌ 4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಹಾಗೂ ಮಂಗಳವಾರ ಅಸ್ಟ್ರೇಲಿಯ ವಿರುದ್ಧ ಟೀಮ್‌ ಇಂಡಿಯಾ ಗೆಲುವಿನ ಅಂಚಿನಲ್ಲಿ ಎಡವಿತ್ತು. ಈ ಮೂರೂ ಪಂದ್ಯಗಳ 19ನೇ ಓವರ್‌ವರೆಗೂ ಭಾರತ ಗೆಲುವಿನತ್ತ ಮುನ್ನಡೆದಿತ್ತು. ಆದರೆ ಮೂರೂ ಪಂದ್ಯಗಳಲ್ಲೂ 19ನೇ ಓವರ್‌ ಎಸೆದ ಅನುಭವಿ ಭುವನೇಶ್ವರ್‌ ಕುಮಾರ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳಿಂದ ಹಿಗ್ಗಾ ಮುಗ್ಗ ದಂಡಿಸಿಕೊಂಡಿದ್ದರು. ಇದು ಭಾರತ ಪಂದ್ಯ ಸೋಲಲು ಮುಖ್ಯ ಕಾರಣವಾಗಿತ್ತು

ಪಾಕಿಸ್ತಾನ ವಿರುದ್ಧ 19 ರನ್‌

ಏಷ್ಯಾ ಕಪ್‌ನ ಸೂಪರ್‌ 4 ಹಂತದ ಹೈವೋಲ್ಟೇಜ್‌ ಪಂದ್ಯದಲ್ಲಿ ಭಾರತ 7 ವಿಕೆಟ್‌ ನಷ್ಟದಲ್ಲಿ 181 ರನ್‌ ಗಳಿಸಿತ್ತು. ಪಾಕಿಸ್ತಾನ ಗೆಲುವಿಗೆ ಅಂತಿಮ 2 ಓವರ್‌ಗಳಲ್ಲಿ 26 ರನ್‌ ಅಗತ್ಯವಿತ್ತು. ಈ ವೇಳೆ 19ನೇ ಓವರ್‌ ಎಸೆದ ಭುವಿ 19 ರನ್‌ ಬಿಟ್ಟುಕೊಟ್ಟಿದ್ದರು. ಹೀಗಾಗಿ ಅಂತಿಮ ಓವರ್‌ನಲ್ಲೇ ಪಾಕ್‌ ಗುರಿ ಕೇವಲ 7 ರನ್‌ಗಳಿಗೆ ಸೀಮಿತವಾಗಿತ್ತು. ಸುಲಭ ಜಯವೂ ಬಾಬರ್‌ ಅಝಂ ಪಡೆ ಪಾಲಾಗಿತ್ತು.

ಶ್ರೀಲಂಕಾ ವಿರುದ್ಧ 14 ರನ್‌

ಏಷ್ಯಾ ಕಪ್‌ನ ಸೂಪರ್‌ 4 ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲೂ ಭುವನೇಶ್ವರ್‌ ಭಾರತದ ಪಾಲಿಗೆ ವಿಲನ್‌ ಅಗಿದ್ದರು. ಲಂಕಾ ಗೆಲುವಿಗೆ ಅಂತಿಮ 2 ಓವರ್‌ಗಳಲ್ಲಿ 21 ರನ್‌ಗಳ ಅಗತ್ಯವಿತ್ತು. ಈ ವೇಳೆ 19ನೇ ಓವರ್‌ ಎಸೆದ ಭುವನೇಶ್ವರ್‌, ನಿರ್ಣಾಯಕ ಘಟ್ಟದಲ್ಲಿ 14 ರನ್‌ ಬಿಟ್ಟುಕೊಟ್ಟಿದ್ದರು. ಅಲ್ಲೂ ಭಾರತ ಮುಗ್ಗರಿಸಿತ್ತು.

ಆಸ್ಟ್ರೇಲಿಯ ವಿರುದ್ಧ 16 ರನ್‌

ಮೊಹಾಲಿಯಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ಗೆಲುವಿಗೆ ಅಂತಿಮ ಮೂರು ಓವರ್‌ಗಳಲ್ಲಿ 40 ರನ್‌ಗಳ ಕಠಿಣ ಸವಾಲು ಮುಂದಿತ್ತು. ಆದರೆ 18ನೇ ಓವರ್‌ ಎಸೆದ ಹರ್ಷಲ್‌ ಪಟೇಲ್‌ 22 ರನ್‌ ಬಿಟ್ಟುಕೊಟ್ಟರೆ, ನಿರ್ಣಾಯಕ  19ನೇ ಓವರ್‌ ಎಸೆದ ಭುವನೇಶ್ವರ್‌ 16 ರನ್‌ ನೀಡಿದ್ದರು. ಹೀಗಾಗಿ 20ನೇ ಓವರ್‌ನಲ್ಲಿ ಆಸ್ಟ್ರೇಲಿಯಗೆ ಕೇವಲ 2 ರನ್‌ಗಳಷ್ಟೇ ಬೇಕಾಗಿತ್ತು.

ಟಿ20 ಕ್ರಿಕೆಟ್‌ನಲ್ಲಿ 19ನೇ ಓವರ್‌ ಎಲ್ಲಾ ತಂಡಗಳ ಪಾಲಿಗೂ ನಿರ್ಣಾಯಕ ಆಗಿರುತ್ತದೆ, ಪಂದ್ಯದ ಫಲಿತಾಂಶ ಅಂತಿಮ ಓವರ್‌ಗಿಂತಲೂ, ಅದರ ಹಿಂದಿನ ಓವರ್‌ನಲ್ಲೇ ಬಹುತೇಕ ನಿರ್ಧಾರವಾಗುತ್ತದೆ. ಹೀಗಾಗಿ 19ನೇ ಓವರ್‌ನಲ್ಲಿ ಯಾವ ತಂಡವೂ ಪ್ರಯೋಗಕ್ಕೆ ಮುಂದಾಗದೆ, ಅನುಭವಿ ಬೌಲರ್‌ಗಳನ್ನೇ ಆಶ್ರಯಿಸುತ್ತದೆ. ಆದರೆ ಕಳೆದ ಮೂರು ಪಂದ್ಯಗಳಲ್ಲಿ ಭಾರತದ ಪಾಲಿಗೆ 19ನೇ ಓವರ್‌, ಪಂದ್ಯವನ್ನು ಕಳೆದುಕೊಳ್ಳುವ ಓವರ್‌ ಆಗಿ ಮಾರ್ಪಟ್ಟಿದೆ. ಮೂರು ಬಾರಿಯೂ ಒಂದೇ ಬೌಲರ್‌ ಭಾರತವನ್ನು ಸೋಲಿನ ದವಡೆಗೆ ದೂಡಿದ್ದಾರೆ.

ಏಷ್ಯಾಕಪ್‌ನಲ್ಲಿ ದುಬಾರಿಯಾಗಿದ್ದರೂ ಸಹ ಆಸ್ಟ್ರೇಲಿಯ ವಿರುದ್ಧ ಮತ್ತೊಮ್ಮೆ ನಿರ್ಣಾಯಕ ಓವರ್‌ನಲ್ಲಿ ಭುವನೇಶ್ವರ್‌ಗೆ ಮತ್ತೆ ಚೆಂಡು ನೀಡಿದ ನಾಯಕ ರೋಹಿತ್‌ ಶರ್ಮಾ ನಿರ್ಧಾರವೂ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.  

ನಿಮಗೆ ಏನು ಅನ್ನಿಸ್ತು?
3 ವೋಟ್