
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ದಾಖಲಿಸಿದೆ. ಆರಂಭಿಕರಿಬ್ಬರ ಅಬ್ಬರದ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 385 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಆರಂಭಿಕ ಆಟಗಾರರು ಶತಕದಾರಂಭ ಒದಗಿಸಿದರು. ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ದ್ವಿಶತಕದ ಜೊತೆಯಾಟ ದಾಖಲಿಸುವ ಮೂಲಕ ಕಿವೀಸ್ ಬೌಲರ್ಗಳ ಬೆವರಿಳಿಸಿದರು.
26ನೇ ಓವರ್ 3ನೇ ಎಸೆತದಲ್ಲಿ ರೋಹಿತ್ ಮತ್ತು 6ನೇ ಎಸೆತದಲ್ಲಿ ಗಿಲ್ ಶತಕದ ಸಂಭ್ರವನ್ನಾಚರಿಸಿದರು. 85 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ರೋಹಿತ್ 101 ರನ್ ಗಳಿಸಿದ್ದ ವೇಳೆ ಬ್ರಾಸ್ವೆಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಹಾರ್ದಿಕ್ ಪಾಂಡ್ಯ 54 ಮತ್ತು ವಿರಾಟ್ ಕೊಹ್ಲಿ 36 ರನ್ಗಳಿಸಿದರು.
Innings Break!
— BCCI (@BCCI) January 24, 2023
A mighty batting display from #TeamIndia! 💪 💪
1⃣1⃣2⃣ for @ShubmanGill
1⃣0⃣1⃣ for captain @ImRo45
5⃣4⃣ for vice-captain @hardikpandya7
Over to our bowlers now 👍 👍
Scorecard ▶️ https://t.co/ojTz5RqWZf#INDvNZ | @mastercardindia pic.twitter.com/JW4MXWej4A
ರೋಹಿತ್ 30ನೇ ಶತಕ
ವೃತ್ತಿ ಜೀವನದ 241ನೇ ಪಂದ್ಯದಲ್ಲಿ ರೋಹಿತ್ ದಾಖಲಿಸಿದ 30ನೇ ಶತಕ ಇದಾಗಿದ್ದು, ಈ ಮೂಲಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದರು. 2020ರ ಜನವರಿ ಬಳಿಕ ರೋಹಿತ್ ಬ್ಯಾಟ್ನಿಂದ ಮೂಡಿದ ಮೊದಲ ಮೂರಂಕಿಯ ಮೊತ್ತ ಇದಾಗಿದೆ. ಏಕದಿನ ಕ್ರಿಕೆಟ್ನ ಅತಿ ಹೆಚ್ಚು ಶತಕದ ದಾಖಲೆ ಸಚಿನ್ ತೆಂಡುಲ್ಕರ್ (49) ಹೆಸರಿನಲ್ಲಿದೆ. 46 ಶತಕಗಳೊಂದಿಗೆ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 365 ಇನಿಂಗ್ಸ್ಗಳಿಂದ ಪಾಂಟಿಂಗ್ 30 ಶತಕದ ಸಾಧನೆ ಮಾಡಿದ್ದು, ಕಡಿಮೆ ಇನ್ನಿಂಗ್ಸ್ ಅಂತರದಲ್ಲಿ ರೋಹಿತ್, ಆಸ್ಟ್ರೇಲಿಯಾದ ಮಾಜಿ ನಾಯಕನನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ.
ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ನಡೆಸಿದ ಗಿಲ್, 72 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. 78 ಎಸೆತಗಳನ್ನು ಎದುರಿಸಿದ ಶುಭಮನ್, 13 ಬೌಂಡರಿ ಮತ್ತು 5 ಸಿಕ್ಸರ್ಗಳ ನೆರವಿನಿಂದ 112 ರನ್ಗಳಿಸಿ ನಿರ್ಗಮಿಸಿದರು. 21ಇನ್ನಿಂಗ್ಸ್ನಲ್ಲಿ ಗಿಲ್ ಗಳಿಸುತ್ತಿರುವ 4ನೇ ಏಕದಿನ ಶತಕ ಇದಾಗಿದೆ. ಇವರಿಬ್ಬರು ಮೊದಲ ವಿಕೆಟ್ಗೆ 212 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. ಆ ಮೂಲಕ ನ್ಯೂಜಿಲೆಂಡ್ ವಿರುದ್ಧ ಆರಂಭಿಕ ವಿಕೆಟ್ಗೆ ಅತಿಹೆಚ್ಚು ರನ್ ಜೊತೆಯಾಟದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು 2009ರಲ್ಲಿ ಹ್ಯಾಮಿಲ್ಟನ್ನಲ್ಲಿ ಗಂಭೀರ್-ಸೆಹ್ವಾಗ್ ಆರಂಭಿಕ ವಿಕೆಟ್ಗೆ 201 ರನ್ನ ಜೊತೆಯಾಟದಲ್ಲಿ ಭಾಗಿಯಾಗಿದ್ದರು.
ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ಶತಕ ಸಿಡಿಸಿದ ಐವರು
1. ಸಚಿನ್ ತೆಂಡೂಲ್ಕರ್ (ಭಾರತ) – 452 ಇನಿಂಗ್ಸ್ಗಳಲ್ಲಿ 49 ಶತಕ
2. ವಿರಾಟ್ ಕೊಹ್ಲಿ (ಭಾರತ) – 261 ಇನಿಂಗ್ಸ್ಗಳಲ್ಲಿ 46 ಶತಕ
3. ರೋಹಿತ್ ಶರ್ಮಾ (ಭಾರತ) – 234 ಇನಿಂಗ್ಸ್ಗಳಲ್ಲಿ 30 ಶತಕ
4. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ ) – 365 ಇನಿಂಗ್ಸ್ಗಳಲ್ಲಿ 30 ಶತಕ
5. ಸನತ್ ಜಯಸೂರ್ಯ (ಶ್ರೀಲಂಕಾ) – 433 ಇನಿಂಗ್ಸ್ಗಳಲ್ಲಿ 28 ಶತಕ