
- ಶೂನ್ಯಕ್ಕೆ ನಿರ್ಗಮಿಸಿದ ವಿರಾಟ್ ಕೊಹ್ಲಿ
- 32ನೇ ಅರ್ಧಶತಕ ದಾಖಲಿಸಿದ ರೋಹಿತ್ ಶರ್ಮಾ
ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ದಾಖಲಿಸಿ ಫಾರ್ಮ್ಗೆ ಮರಳುವ ಸೂಚನೆ ನೀಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಹತ್ವದ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ʻಡೂ ಆರ್ ಡೈʼ ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ ನಡೆಸುತ್ತಿದೆ. ಆರಂಭಿಕನಾಗಿ ಬಂದ ಕೆಎಲ್ ರಾಹುಲ್ ಮತ್ತೊಮ್ಮೆ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾಗಿದ್ಧಾರೆ. ಆರು ರನ್ ಗಳಿಸಿದ್ದ ವೇಳೆ ಮಹೇಶ್ ತೀಕ್ಷಣ ಎಸೆತದಲ್ಲಿ ಎಲ್ಬಿಡ್ಬ್ಲ್ಯೂಗೆ ಬಲಿಯಾದರು. ಲೆಗ್ಸ್ಟಂಪ್ನಿಂದ ಆಚೆಗೆ ಹೋಗುತ್ತಿದ್ದ ಚೆಂಡನ್ನು ಕ್ರೀಸ್ನಿಂದ ಮುಂದೆ ಬಂದು ಆಡಿದ್ದರು. ಆದರೂ ಮೈದಾನದ ಅಂಪೈರ್ ನೀಡಿದ್ದ ತೀರ್ಪನ್ನು ಟಿವಿ ಅಂಪೈರ್ ಎತ್ತಿಹಿಡಿದರು.
ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಕೊಹ್ಲಿ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ವೇಗಿ ದಿಲ್ಶನ್ ಮಧುಶಂಕ ಗುಡ್ಲೆಂತ್ ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾದ ವಿರಾಟ್ ಕೊಹ್ಲಿ, ಕೆಟ್ಟ ಹೊಡೆತಕ್ಕೆ ಪ್ರಯತ್ನಿಸಿ ಕ್ಲೀನ್ ಬೌಲ್ಡ್ ಆದರು. ಲೀಗ್ ಹಂತದಲ್ಲಿ ಹಾಂಕಾಂಗ್ ವಿರುದ್ಧ ಮತ್ತು ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಕರ್ಷಕ ಅರ್ಧಶತಕ ದಾಖಲಿಸಿದ್ದ ಕೊಹ್ಲಿ, ಲಂಕಾ ವಿರುದ್ಧವೂ ಅಬ್ಬರಿಸುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೆ ನಾಲ್ಕು ಎಸೆತಗಳಲ್ಲೇ ಇನ್ನಿಂಗ್ಸ್ ಮುಗಿಸಿದ ವಿರಾಟ್, ನಿರಾಸೆಯಿಂದಲೇ ಮರಳಿದರು. ಆ ಮೂಲಕ ಟೀಮ್ ಇಂಡಿಯಾ ಕೇವಲ 13 ರನ್ಗಳಿಸುವಷ್ಟರಲ್ಲೇ ಪ್ರಮುಖ ಎರಡು ಕಳೆದುಕೊಂಡಿದೆ.
UNREAL 💔
— Sportskeeda (@Sportskeeda) September 6, 2022
Virat Kohli departs for a Duck 😟#INDvSL #AsiaCupT20 #TeamIndia pic.twitter.com/V9Pvh2yi2Q
ರೋಹಿತ್ ಅರ್ಧಶತಕ
ಆರಂಭಿಕನಾಗಿ ಬಂದ ನಾಯಕ ರೋಹಿತ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ದಾಖಲಿಸಿದ್ದಾರೆ. ಅಶಿತಾ ಫೆರ್ನಾಂಡೋ ಎಸೆದ 10ನೇ ಓವರ್ನ ನಾಲ್ಕನೇ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಶರ್ಮಾ, ಅರ್ಧಶತಕ ಪೂರ್ತಿಗೊಳಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ರೋಹಿತ್ ಬ್ಯಾಟ್ನಿಂದ ದಾಖಲಾಗುತ್ತಿರುವ 32ನೇ ಅರ್ಧಶತಕ ಇದಾಗಿದೆ. ಆ ಮೂಲಕ ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಲಾಗಿದ್ದ ದಾಖಲೆಯನ್ನು ಸಮಬಲ ಸಾಧಿಸಿದ್ದಾರೆ.
ಏಷ್ಯಾ ಕಪ್ ಫೈನಲ್ ಆಸೆ ಜೀವಂತವಾಗಿರಿಸಲು ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಭಾರತ, ಏಕೈಕ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಸ್ಪಿನ್ನರ್ ರವಿ ಬಿಷ್ಣೋಯ್ ತಂಡದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ ಅವಕಾಶ ನೀಡಲಾಗಿದೆ.
ಅಂತಿಮ ಪ್ಲೇಯಿಂಗ್ ಇಲೆವೆನ್
ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ