ಹರ್ಮನ್‌ಪ್ರೀತ್‌ ಕೌರ್‌ ಅಜೇಯ ಶತಕ | ಇಂಗ್ಲೆಂಡ್‌ ಗೆಲುವಿಗೆ 334 ರನ್‌ ಗುರಿ

  • ಮೂರು ಪಂದ್ಯಗಳ ಏಕದಿನ ಸರಣಿ
  • ಕ್ಯಾಂಟರ್ಬರಿಯಲ್ಲಿ ಗೆದ್ದರೆ ಸರಣಿ ಭಾರತದ ಕೈವಶ

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಗಳಿಸಿದ ಅಜೇಯ ಶತಕದ ನೆರವಿನಿಂದ ಮಿಂಚಿದ  ಭಾರತೀಯ ಮಹಿಳಾ ತಂಡ, ಎರಡನೇ  ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ 334 ರನ್‌ಗಳ ಕಠಿಣ ಗುರಿ ನೀಡಿದೆ.

ಕ್ಯಾಂಟರ್ಬರಿಯಲ್ಲಿ ನಡೆಯುತ್ತಿರುವ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌, ಪ್ರವಾಸಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 8 ರನ್‌ ಗಳಿಸುವಷ್ಟರಲ್ಲೇ ನಿರ್ಗಮಿಸಿದರು, ಆದರೆ ಸ್ಮೃತಿ ಮಂದಾನ ಮತ್ತು ಹರ್ಲಿನ್‌ ದಿಯೋಲ್‌ ಜೊತೆ ಮಹತ್ವದ ಜತೆಯಾಟದಲ್ಲಿ ಭಾಗಿಯಾದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 40 ರನ್‌ ಗಳಿಸಿದ್ದ ವೇಳೆ ಸ್ಮೃತಿ, ಎಕ್ಸಲ್‌ಸ್ಟೋನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂಗೆ  ಬಲಿಯಾದರು.

143 ರನ್‌ಗಳಿಸಿ ಅಜೇಯರಾಗುಳಿದ ಹರ್ಮನ್‌ಪ್ರೀತ್‌ ಕೌರ್‌

ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಹರ್ಮನ್‌ಪ್ರೀತ್‌ ಕೌರ್‌, ಆಕರ್ಷಕ ಶತಕ ಗಳಿಸಿ ಅಜೇಯರಾಗುಳಿದರು. 111 ಎಸೆತಗಳನ್ನು ಎದುರಿಸಿ 4 ಸಿಕ್ಸರ್‌ ಮತ್ತು 18 ಬೌಂಡರಿಗಳ ನೆರವಿನೊಂದಿಗೆ 143 ರನ್‌ ಗಳಿಸಿದರು. ಪ್ರಸಕ್ತ ವರ್ಷ ಅಮೋಘ ಫಾರ್ಮ್‌ನಲ್ಲಿರುವ ನಾಯಕಿ ಕೌರ್‌, ಇದುವರೆಗೂ 15 ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು 5 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ನಾಯಕಿಗೆ ಉತ್ತಮ ಸಾಥ್‌ ನೀಡಿದ ಹರ್ಲಿನ್‌ ದಿಯೋಲ್‌, 72 ಎಸೆತಗಳಲ್ಲಿ 58 ರನ್‌ಗಳಿಸಿ ನಿರ್ಗಮಿಸಿದರು. ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ ದಿಯೋಲ್‌ ಇನ್ನಿಂಗ್ಸ್‌ನ ಆಕರ್ಷಣೆಯಾಗಿತ್ತು. ಉಳಿದಂತೆ ಪೂಜಾ ವಸ್ತ್ರಕರ್‌ 18 ರನ್‌,  ದೀಪ್ತಿ ಶರ್ಮಾ 15 ರನ್‌ಗಳಿಸಿದರು.

ಈ ಸುದ್ದಿ ಓದಿದ್ದೀರಾ ? : ಮಹಿಳಾ ಟಿ20 ಏಷ್ಯಾಕಪ್‌ | 15 ಸದಸ್ಯರ ಭಾರತ ತಂಡ ಪ್ರಕಟ

ಇಂಗ್ಲೆಂಡ್‌ ಪರ ಬೌಲಿಂಗ್‌ನಲ್ಲಿ ಐವರು ಬೌಲರ್‌ಗಳು ತಲಾ ಒಂದು ವಿಕೆಟ್‌ ಪಡೆದರು. 24 ವೈಡ್‌ ಮತ್ತು ಒಂದು ಲೆಗ್‌ ಬೈ ಸೇರಿದಂತೆ ಇತರ ರೂಪದಲ್ಲಿ ಒಟ್ಟು 25 ರನ್‌ ನೀಡಿ ಆಂಗ್ಲ ಬೌಲರ್‌ಗಳು ದುಬಾರಿಯಾದರು.  

ಹೋವ್‌ನಲ್ಲಿ ನಡೆದಿದ್ದ ಸರಣಿಯ ಮೊದಲನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ, ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಸುಮಾರು 23 ವರ್ಷಗಳ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ಸರಣಿ ಗೆಲುವಿನ ತವಕದಲ್ಲಿರುವ ಭಾರತ ಮಹಿಳಾ ತಂಡವು, ಬುಧವಾರದ ಪಂದ್ಯದಲ್ಲಿ ಗೆಲುವು ಸಾಧಿಸುವ ತವಕದಲ್ಲಿದೆ. ವೇಗಿ ಜೂಲನ್ ಗೋಸ್ವಾಮಿ ಅವರಿಗೆ ಇದು ವಿದಾಯದ ಸರಣಿಯಾಗಿದೆ. 1999ರಲ್ಲಿ ಭಾರತ ಮಹಿಳಾ ತಂಡವು ಇಂಗ್ಲೆಂಡ್‌ನಲ್ಲಿ 2–1ರಿಂದ ಸರಣಿ ಜಯಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್