ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿ ಗೆದ್ದ ಟೀಮ್‌ ಇಂಡಿಯಾ

  • ಐದು ಪಂದ್ಯಗಳ ಸರಣಿ 3- 1 ಅಂತರದಲ್ಲಿ ಕೈವಶ
  • ನಾಲ್ಕು ಓವರ್‌ಗಳಲ್ಲಿ 66 ರನ್​ ಚಚ್ಚಿಸಿಕೊಂಡ ಒಬೆಡ್

ಆವೇಶ್‌ ಖಾನ್‌ ಮತ್ತು ಅರ್ಷದೀಪ್‌ ಸಿಂಗ್‌ ಅವರ ಬಿಗು ಬೌಲಿಂಗ್‌ ದಾಳಿಯ ನೆರವಿನಿಂದ ಟೀಮ್‌ ಇಂಡಿಯಾ, ವೆಸ್ಟ್​ ಇಂಡೀಸ್​ ವಿರುದ್ಧದ 4ನೇ ಟಿ20 ಪಂದ್ಯವನ್ನು 59 ರನ್​ ಅಂತರದಲ್ಲಿ ಗೆದ್ದು ಬೀಗಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. 

ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಬಳಗ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 191 ರನ್‌ ಪೇರಿಸಿದರೆ, ವಿಂಡೀಸ್‌ 19.1 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟಾಯಿತು.

ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ನಾಯಕ ರೋಹಿತ್​ ಶರ್ಮಾ, 16 ಎಸೆತಗಳಲ್ಲಿ 33 ರನ್​ ಗಳಿಸಿದರು. ಸೂರ್ಯಕುಮಾರ್​ 24, ದೀಪಕ್​ ಹೂಡಾ 21, ರಿಷಬ್​ ಪಂತ್​ 44, ಸಂಜು ಸ್ಯಾಮ್ಸನ್ 30 ರನ್​ ಗಳಿಸಿದರು. ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಅಕ್ಸರ್ ಪಟೇಲ್​ 8 ಎಸೆತಗಳಲ್ಲಿ 2 ಸಿಕ್ಸರ್​, 1 ಬೌಂಡರಿ ಮೂಲಕ 20 ರನ್​ ಗಳಿಸಿ ಅಜೇಯರಾಗುಳಿದರು. ವೆಸ್ಟ್‌ ಇಂಡೀಸ್‌ ಪರ ಬೌಲಿಂಗ್‌ನಲ್ಲಿ ಒಬೆಡ್​ ಮೆಕಾಯ್ ದುಬಾರಿಯಾದರು. ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ ಎರಡು ವಿಕೆಟ್‌ ಪಡೆದರಾದರೂ, 66 ರನ್​ ಚಚ್ಚಿಸಿಕೊಂಡರು.

ಸರಣಿ ಉಳಿಸಿಕೊಳ್ಳಲು ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ವಿಂಡೀಸ್‌, ಯಾವುದೇ ಹಂತದಲ್ಲೂ ಹೋರಾಟ ಪ್ರದರ್ಶಿಸಲಿಲ್ಲ. ಭಾರತೀಯ ಬೌಲರ್‌ಗಳನ್ನು ಎದುರಿಸಲಾಗದೇ ಸತತವಾಗಿ ವಿಕೆಟ್​ ಕಳೆದುಕೊಳ್ಳುತ್ತಲೇ ಸಾಗಿತು. ರೋವ್‌ಮನ್​ ಪೊವೆಲ್​ ಮತ್ತು ನಿಕೋಲಸ್​ ಪೂರನ್​ ತಲಾ 24 ರನ್​ ಗಳಿಸಿದ್ದೇ ಗರಿಷ್ಠ ಸ್ಕೋರ್​ ಆಗಿತ್ತು.

3.1 ಓವರ್‌ ಎಸೆದ ಅರ್ಶದೀಪ್‌ ಸಿಂಗ್ 12 ರನ್‌ ನೀಡಿ  ಮೂರು ವಿಕೆಟ್‌ ಪಡೆದರೆ, ಆವೇಶ್‌ ಖಾನ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯ್‌ ಮತ್ತು ತಲಾ ಎರಡು ವಿಕೆಟ್‌ ಗಳಿಸಿದರು. ಅಂತಿಮವಾಗಿ ವೆಸ್ಟ್‌ ಇಂಡೀಸ್‌ 19.1 ಓವರ್​ಗಳಲ್ಲಿ 132 ರನ್​ಗಳಿಗೆ ಸರ್ವಪತನ ಕಂಡಿತು. ಸರಣಿಯ ಕೊನೆಯ ಪಂದ್ಯ ಭಾನುವಾರ ನಡೆಯಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್