ಭಾರತದ ಸ್ಪಿನ್‌ ಬಲೆಗೆ ನಲುಗಿದ ಕೆರಿಬಿಯನ್‌ ಬಳಗ; 4-1ರಲ್ಲಿ ಸರಣಿ ಗೆದ್ದ ಟೀಮ್ ಇಂಡಿಯಾ

  • 4-1 ಅಂತರದಲ್ಲಿ ಟಿ20 ಪಂದ್ಯಗಳ ಸರಣಿ ಗೆಲುವಿನ ಸಾಧನೆ
  • ಕೆರಿಬಿಯನ್‌ ನೆಲದಲ್ಲಿ ಏಕದಿನ ಸರಣಿ ಸ್ವೀಪ್ ಮಾಡಿದ್ದ ಭಾರತ

ಕೆರಿಬಿಯನ್‌ ನೆಲದಲ್ಲಿ ಏಕದಿನ ಸರಣಿ ಕ್ಲೀನ್‌ ಸ್ವೀಪ್ ಮಾಡಿ ಇತಿಹಾಸ ನಿರ್ಮಿಸಿದ್ದ ಟೀಮ್‌ ಇಂಡಿಯಾ, ಆ ಬಳಿಕ ನಡೆದ ಟಿ20 ಸರಣಿಯಲ್ಲೂ ಸಂಪೂರ್ಣ ಮೇಲುಗೈ ಸಾಧಿಸಿದೆ. ಫ್ಲೋರಿಡಾದ ರೀಜನಲ್ ಪಾರ್ಕ್ ಮೈದಾನದಲ್ಲಿ ನಡೆದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ,  ವೆಸ್ಟ್ ಇಂಡೀಸ್ ತಂಡವನ್ನು 88 ರನ್‌ಗಳಿಂದ ಮಣಿಸಿದೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ರೋಹಿತ್‌ ಬಳಗ,  5 ಪಂದ್ಯಗಳ ಸರಣಿಯಲ್ಲಿ ಗೆಲುವಿನ ಅಂತರವನ್ನು ಭಾರತ 4-1ಕ್ಕೆ ಹಿಗ್ಗಿಸಿಕೊಂಡಿತು.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಶ್ರೇಯಸ್ ಅಯ್ಯರ್ ಗಳಿಸಿದ ಬಿರುಸಿನ ಅರ್ಧಶತಕದ (64ರನ್)  ನೆರವಿನಿಂದ 7 ವಿಕೆಟ್‌ಗೆ 188 ರನ್ ಪೇರಿಸಿತು. ಕಠಿಣ ಸವಾಲು ಬೆನ್ನಟ್ಟಿದ ವಿಂಡೀಸ್‌, ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ನಲುಗಿ, 15.4 ಓವರ್‌ಗಳಲ್ಲಿ 100 ರನ್‌ಗಳಿಗೆ ಸರ್ವಪತನ ಕಂಡಿತು. ಸ್ಪಿನ್ನರ್‌ಗಳಾದ ರವಿ ಬಿಷ್ಣೋಯ್‌ 16 ರನ್‌ ನೀಡಿ ನಾಲ್ಕು ವಿಕೆಟ್‌ ಪಡೆದರೆ, ಕುಲ್‌ದೀಪ್‌ ಯಾದವ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು.

ವೆಸ್ಟ್‌ ಇಂಡೀಸ್‌ ಪರ ಏಕಾಂಗಿ ಹೋರಾಟ ನಡೆಸಿದ ಶಿಮ್ರಾನ್‌ ಹೇಟ್ಮಯರ್‌, 35 ಎಸೆತಗಳನ್ನು ಎದುರಿಸಿ, 5 ಬೌಂಡರಿ, 4 ಸಿಕ್ಸರ್ ನೆರವಿನಿಂದ 56 ರನ್‌ ಗಳಿಸಿ ಬಿಷ್ಣೋಯ್‌ಗೆ ವಿಕೆಟ್‌ ಒಪ್ಪಿಸಿದರು. ನಾಲ್ಕು ಮಂದಿ ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ ಸೇರಿದರು.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಕ್ರಿಕೆಟ್‌ | ಫೈನಲ್‌ನಲ್ಲಿ ಎಡವಿದ ಭಾರತಕ್ಕೆ ಬೆಳ್ಳಿ

ಟೀಮ್‌ ಇಂಡಿಯಾದಲ್ಲಿ ನಾಲ್ಕು ಬದಲಾವಣೆ

ವೆಸ್ಟ್‌ ಇಂಡೀಸ್‌ ವಿರುದ್ಧದ ಅಂತಿಮ ಟಿ20 ಪಂದ್ಯದಿಂದ ನಾಯಕ ರೋಹಿತ್‌ ಶರ್ಮಾ, ರಿಷಭ್‌ ಪಂತ್‌, ಭುವನೇಶ್ವರ್‌ ಕುಮಾರ್‌ ಹಾಗೂ ಸೂರ್ಯಕುಮಾರ್‌ ಯಾದವ್‌ಗೆ ವಿಶ್ರಾಂತಿ ನೀಡಲಾಗಿತ್ತು. ರೋಹಿತ್‌ ಹೊರಗುಳಿದ ಕಾರಣ ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸಿದರು. ರೋಹಿತ್- ಸೂರ್ಯಕುಮಾರ್ ಬದಲಿಗೆ ಇನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ (11) ಹಾಗೂ ಶ್ರೇಯಸ್‌ ಅಯ್ಯರ್ ಜೋಡಿ ಉತ್ತಮ ಆರಂಭ ನೀಡಲು ವಿಫಲವಾಯಿತು. ಇಶಾನ್ ನಿರ್ಗಮನದ ಬಳಿಕ ಶ್ರೇಯಸ್‌ಗೆ ಜತೆಯಾದ ದೀಪಕ್ ಹೂಡಾ (38 ರನ್, 25 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಈ ಜೋಡಿ 2ನೇ ವಿಕೆಟ್‌ಗೆ 76 ರನ್ ಜತೆಯಾಟವಾಡಿ ಬೇರ್ಪಟ್ಟಿತು. ಸಂಜು ಸ್ಯಾಮ್ಸನ್‌ 15 ರನ್‌ ಗಳಿಸಿದರೆ, ಪಾಂಡ್ಯ 28 ರನ್‌ ಗಳಿಸಿದ್ದ ವೇಳೆ ರನೌಟ್‌ಗೆ ಬಲಿಯಾದರು. ವಿಂಡೀಸ್‌ ಪರ ಒಡಿಯನ್‌ ಸ್ಮಿತ್‌ ಮೂರು ವಿಕೆಟ್‌ ಪಡೆದರು.

ನಿಮಗೆ ಏನು ಅನ್ನಿಸ್ತು?
0 ವೋಟ್