ಏಕದಿನ ಸರಣಿ | ಟೀಮ್‌ ಇಂಡಿಯಾಗೆ ಕ್ಲೀನ್‌ ಸ್ವೀಪ್‌ ಗುರಿ

Cricket
  • ಮೂರು ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 2-0 ಮುನ್ನಡೆ 
  • ಎರಡು ಬದಲಾವಣೆಗಳನ್ನು ಮಾಡಲಿರುವ ಭಾರತ ತಂಡ

ಭಾರತ- ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಬುಧವಾರ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಶಿಖರ್ ಧವನ್‌ ನೇತೃತ್ವದ ಟೀಮ್‌ ಇಂಡಿಯಾ, ಈಗಾಗಲೇ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯವನ್ನು ಗೆದ್ದು ಕ್ಲೀನ್‌ ಸ್ವೀಪ್‌ನತ್ತ ಧವನ್‌ ಬಳಗದ ಗುರಿ ನೆಟ್ಟಿದೆ.

ಮೊದಲೆರಡು ಪಂದ್ಯಗಳಲ್ಲಿ ಅತಿಥೇಯ ವೆಸ್ಟ್‌ ಇಂಡೀಸ್‌ ಕಠಿಣ ಸವಾಲೊಡ್ಡಿ ಸೋಲಿಗೆ ಶರಣಾಗಿತ್ತು. ಮೊದಲ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಹೋರಾಡಿದ್ದ ನಿಕೋಲಸ್ ಪೂರನ್ ಬಳಗ ಮೂರು ರನ್‌ ಅಂತರದಲ್ಲಿ ಮತ್ತು ಎರಡನೇ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಭಾರತಕ್ಕೆ ಶರಣಾಗಿತ್ತು. ದ್ವಿತೀಯ ಪಂದ್ಯದಲ್ಲಿ ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿದ್ದ ವಿಂಡೀಸ್‌ಗೆ, ಅಂತಿಮ ಓವರ್‌ಗಳಲ್ಲಿ ಅಕ್ಷರ್ ಪಟೇಲ್ ಅಜೇಯ 64 ರನ್ ಗಳಿಸಿ ಆಘಾತವಿಕ್ಕಿದ್ದರು.

ಮೂರನೇ ಪಂದ್ಯದಲ್ಲಿ ಕೆಲವೊಂದು ಬದಲಾವಣೆಗಳೊಂದಿಗೆ ಟೀಮ್‌ ಇಂಡಿಯಾ ಕಣಕ್ಕಿಳಿಯುವ ಸಾಧ್ಯತೆಯಿದೆ. ಗಾಯದ ಕಾರಣದಿಂದ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ, ಬುಧವಾರದ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಜಡೇಜಾ ಫಿಟ್‌ ಆದರೆ ಶಾರ್ದೂಲ್‌ ಠಾಕೂರ್‌ ಅಥವಾ ಯಜುವೇಂದ್ರ ಚಹಾಲ್‌ ತಂಡದಿಂದ ಹೊರಗುಳಿಯಲಿದ್ದಾರೆ. ಮತ್ತೊಂದೆಡೆ ಆವೇಶ್‌ ಖಾನ್‌ ಬದಲಿಗೆ ಯುವ ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ ಸ್ಥಾನ ಪಡೆಯುವ ನಿರೀಕ್ಷೆ ಇದೆ.  

ಒತ್ತಡದಲ್ಲಿ ವಿಂಡೀಸ್‌

ಪ್ರಮುಖ ಆಟಗಾರರು ತಂಡದಿಂದ ಹೊರಗಿದ್ದರೂ ಸಹ ಟೀಮ್‌ ಇಂಡಿಯಾ ಅಮೋಘ ಲಯದಲ್ಲಿದೆ. ಆದರೆ ಅತ್ತ ವೆಸ್ಟ್‌ ಇಂಡೀಸ್‌ ಕಳಪೆ ಪ್ರದರ್ಶನ ಮತ್ತೆ ಮುಂದುವರಿದಿದೆ. ಸತತವಾಗಿ ಕಳೆದ 8 ಏಕದಿನ ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸ್‌ ಎದುರಾಳಿಗಳಿಗೆ ಶರಣಾಗಿದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ 0-3 ವೈಟ್‌ವಾಶ್‌ ಅನುಭವಿಸಿತ್ತು. ಇದೀಗ ಮತ್ತೊಂದು ವೈಟ್‌ವಾಶ್‌ ಸನಿಹದಲ್ಲಿದೆ.

ಈ ಸುದ್ದಿ ಓದಿದ್ದೀರಾ ?: ಕಾಮನ್‌ವೆಲ್ತ್ ಗೇಮ್ಸ್‌ | ಪದಕ ಪಟ್ಟಿಯಲ್ಲಿ ಶತಕದತ್ತ ಭಾರತದ ಚಿತ್ತ

ಸಂಭವನೀಯ ತಂಡ

ಭಾರತ: ಶಿಖರ್‌ ಧವನ್‌ (ನಾಯಕ), ಶುಭ್‌ಮನ್‌ ಗಿಲ್‌, ಶ್ರೇಯಸ್ ಅಯ್ಯರ್‌, ಸೂರ್ಯಕುಮಾರ್ ಯಾದವ್‌, ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ, ಅಕ್ಷರ್ ಪಟೇಲ್‌‌, ರವೀಂದ್ರ ಜಡೇಜಾ/ ಯುಜುವೇಂದ್ರ ಚಹಲ್‌, ಶಾರ್ದೂಲ್ ಠಾಕೂರ್‌, ಪ್ರಸಿದ್ದ್‌ ಕೃಷ್ಣ, ಆವೇಶ್‌ ಖಾನ್/ ಅರ್ಶ್‌ದೀಪ್  ಸಿಂಗ್‌‌

ವೆಸ್ಟ್ ಇಂಡೀಸ್‌: ಶಾಯ್ ಹೋಪ್‌, ಕೈಲ್ ಮೇಯ​ರ್ಸ್‌, ಸಮರ್ಥ್ ಬ್ರೂಕ್ಸ್‌, ಬ್ರಾಂಡನ್‌ ಕಿಂಗ್‌, ನಿಕೋಲಸ್ ಪೂರನ್‌(ನಾಯಕ), ರೋವ್ಮನ್‌ ಪೋವೆಲ್‌, ಶೆಫರ್ಡ್‌, ಹೊಸೈನ್‌, ವಾಲ್ಶ್‌, ಅಲ್ಜಾರಿ ಜೋಸೆಫ್‌, ಸೀಲ್ಸ್‌.

ನಿಮಗೆ ಏನು ಅನ್ನಿಸ್ತು?
0 ವೋಟ್