
- ಇಶಾನ್ ಕಿಶನ್, ಸಂಜು ಸ್ಯಾಮ್ಸನ್ `ಔಟ್ʼ
- ತಂಡಕ್ಕೆ ಮರಳಿದ ಕೊಹ್ಲಿ, ಕೆ ಎಲ್ ರಾಹುಲ್
ಆಗಸ್ಟ್ 27 ರಿಂದ ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟಿ20 ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಅನುಭವಿ ಬೌಲರ್ ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಗುಳಿದಿದ್ದಾರೆ.
ವಿಶ್ರಾಂತಿಯಲ್ಲಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರಂಭಿಕ ಆಟಗಾರ ಕೆ ಎಲ್ ರಾಹುಲ್ ಉಪನಾಯಕನಾಗಿ ತಂಡಕ್ಕೆ ಮರಳಿದ್ದಾರೆ. ನಿರೀಕ್ಷೆಯಂತೆಯೇ ನಾಯಕ ರೋಹಿತ್ ಶರ್ಮಾ ತಂಡ ಮುನ್ನಡೆಸಲಿದ್ದಾರೆ. ಆಗಸ್ಟ್ 27ರಂದು ಟೂರ್ನಿ ಆರಂಭವಾಗಲಿದ್ದು, ಸೆಪ್ಟಂಬರ್ 11ರಂದು ಫೈನಲ್ ಹಣಾಹಣಿ ನಡೆಯಲಿದೆ. ಟೂರ್ನಿಯಲ್ಲಿ ಭಾರತ, ಆಗಸ್ಟ್ 28ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.
🚨#TeamIndia squad for Asia Cup 2022 - Rohit Sharma (Capt ), KL Rahul (VC), Virat Kohli, Suryakumar Yadav, Deepak Hooda, R Pant (wk), Dinesh Karthik (wk), Hardik Pandya, R Jadeja, R Ashwin, Y Chahal, R Bishnoi, Bhuvneshwar Kumar, Arshdeep Singh, Avesh Khan.
— BCCI (@BCCI) August 8, 2022
ಏಷ್ಯಾ ಕಪ್ ಟೂರ್ನಿಗೆ ಬಿಸಿಸಿಐ ಪ್ರಕಟಿಸಿದ ತಂಡ
ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್ ಅಶ್ವಿನ್, ಯುಜ್ವೇಂದ್ರ ಚಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ದೀಪಕ್ ಚಹರ್
ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಟೂರ್ನಿಯ ಭಾರತ ತಂಡದ ಆಯ್ಕೆಗೆ ಅಲಭ್ಯರಾಗಿದ್ದಾರೆ. ಈ ಇಬ್ಬರು ವೇಗಿಗಳು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆಂದು ಬಿಸಿಸಿಐ ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದೆ. ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ವಿರಾಟ್ ಕೊಹ್ಲಿಗೆ ಇದು ನಿರ್ಣಾಯಕ ಸರಣಿ
ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸಗಳಿಗೆ ವಿಶ್ರಾಂತಿ ಪಡೆದುಕೊಂಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಕಷ್ಟಪಡುತ್ತಿರುವ ಕೊಹ್ಲಿ, ಶತಕ ದಾಖಲಿಸಿ ವರ್ಷಗಳು ಎರಡು ಕಳೆದಿವೆ. ಈ ಹಿನ್ನಲೆಯಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಹಿನ್ನಲೆಯಲ್ಲಿ, ಏಷ್ಯಾ ಕಪ್ ಟೂರ್ನಿ ಕೊಹ್ಲಿ ಪಾಲಿಗೆ ನಿರ್ಣಾಯಕವಾಗಿದೆ.
ಈ ಸುದ್ದಿ ಓದಿದ್ದೀರಾ ? : ಇದೀಗ | ಕಾಮನ್ವೆಲ್ತ್ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ
ಏಷ್ಯಾಕಪ್ಗೆ ಆರು ತಂಡ, ಎರಡು ಗುಂಪು
ಟೂರ್ನಿಯ ಒಟ್ಟು ಆರು ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಅರ್ಹತಾ ಸುತ್ತಿನ ವಿಜೇತ ತಂಡಗಳಿದ್ದರೆ, 'ಬಿ' ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಸ್ಥಾನ ಪಡದಿವೆ. ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೂಪರ್- 4ಕ್ಕೆ ಅರ್ಹತೆ ಪಡೆಯಲಿವೆ. ಇದರಲ್ಲಿ ಅಗ್ರ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಲಿವೆ.