ಆಯ್ಕೆ ಸಮಿತಿ ಯೂಟರ್ನ್‌; ಟಿ20 ವಿಶ್ವಕಪ್‌ಗೆ ಮುಹಮ್ಮದ್‌ ಶಮಿಗೆ ಮಣೆ?

  • ಗಾಯಕ್ಕೆ ತುತ್ತಾಗಿರುವ ಬುಮ್ರಾ, ಹರ್ಷಲ್‌ ಪಟೇಲ್‌
  • ವಿಶ್ವಕಪ್‌ ತಂಡಕ್ಕೆ ಪರಿಗಣಿಸುವುದಿಲ್ಲ ಎಂದಿದ್ದ ಬಿಸಿಸಿಐ

ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಅನುಭವಿ ಬೌಲರ್‌ ಮುಹಮ್ಮದ್‌ ಶಮಿ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಕುರಿತು ಬಿಸಿಸಿಐ ಮೂಲಗಳು ಸೂಚನೆ ನೀಡಿವೆ.

ಪ್ರಮುಖ ಬೌಲರ್‌ಗಳಾದ ಜಸ್‌ಪ್ರೀತ್‌ ಬುಮ್ರಾ ಮತ್ತು ಹರ್ಷಲ್‌ ಪಟೇಲ್‌ ಗಾಯಕ್ಕೆ ತುತ್ತಾಗಿರುವ ಹಿನ್ನಲೆಯಲ್ಲಿ ಅನುಭವಿ ಬೌಲರ್‌ ಶಮಿಗೆ ಮಣೆ ಹಾಕಲು ಬಿಸಿಸಿಐ ಗಂಭೀರವಾದ ಚಿಂತನೆ ನಡೆಸಿದೆ. ಇದಕ್ಕೂ ಮೊದಲು ಟಿ20 ವಿಶ್ವಕಪ್‌ ತಂಡಕ್ಕೆ ನಿಮ್ಮನ್ನು ಪರಿಗಣಿಸುವುದಿಲ್ಲ ಎಂದು ಬಿಸಿಸಿಐ, ಶಮಿಗೆ ಮಾಹಿತಿ ನೀಡಿತ್ತು. ಆದರೆ ಆಯ್ಕೆ ಸಮಿತಿ ಇದೀಗ ಯೂಟರ್ನ್‌ ತೆಗೆದುಕೊಂಡಿದೆ. ಮುಂದಿನ ತಿಂಗಳು ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ವಿರುದ್ಧ ಭಾರತದಲ್ಲೇ ನಡೆಯಲಿರುವ ಟಿ20 ಸರಣಿಗೆ ಮುಹಮ್ಮದ್‌ ಶಮಿ, ಟೀಮ್‌ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಏಷ್ಯಾ ಕಪ್‌ ಮುಗಿದ ಬೆನ್ನಲ್ಲೇ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆದರೆ ಟೀಮ್‌ ಇಂಡಿಯಾದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ ಗಾಯದ ಸಮಸ್ಯೆ ಆಯ್ಕೆಗಾರರನ್ನು ಚಿಂತೆಗೀಡುಮಾಡಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ, ಇಂಗ್ಲೆಂಡ್‌ ವಿರುದ್ಧದ ಸರಣಿಯ ಬಳಿಕ ತಂಡದಿಂದ ಹೊರಗುಳಿದಿದ್ದಾರೆ. ಆಗಸ್ಟ್ 27ರಿಂದ ಯುಎಇಯಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ನಡೆಯಲಿದೆ. ಈ ಟೂರ್ನಿಗೂ ಬುಮ್ರಾ ಅಲಭ್ಯರಾಗಿದ್ದಾರೆ. ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದಲೂ ಹೊರಗುಳಿಯಬಹುದಾದ ಬುಮ್ರಾ ಸದ್ಯ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಮತ್ತೋರ್ವ ಯುವ ವೇಗಿ ಹರ್ಷಲ್‌ ಪಟೇಲ್‌ ಪಕ್ಕೆಲುಬು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ವಿದೇಶಿ ಲೀಗ್ ಪಂದ್ಯಗಳಲ್ಲಿ ಭಾಗವಹಿಸದಿರಲು ಎಂ ಎಸ್‌ ಧೋನಿಗೆ ಬಿಸಿಸಿಐ ಖಡಕ್‌ ಸೂಚನೆ

ಬುಮ್ರಾ ಮತ್ತು ಹರ್ಷಲ್‌ ಪಟೇಲ್‌ ತಂಡದಿಂದ ಹೊರಗುಳಿದರೆ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಅನುಭವಿ ಬೌಲರ್‌ಗಳ ಕೊರತೆ ಕಾಡಲಿದೆ. ಹೀಗಾಗಿಯೇ ಪ್ರಮುಖ ಟೂರ್ನಿಯಲ್ಲಿ ಅನುಭವಿ ಬೌಲರ್‌ ಶಮಿ ಸೇವೆಯನ್ನು ಬಳಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್