ಟಿ20 ವಿಶ್ವಕಪ್‌ | ಸೆಮಿಫೈನಲ್‌ ಸೋಲಿನ ಬೆನ್ನಲ್ಲೇ ಟೀಮ್‌ ಇಂಡಿಯಾದ ಪ್ರಮುಖರ ತಲೆದಂಡ?

  • ಹಲವರ ನಿವೃತ್ತಿ ಸಾಧ್ಯತೆ ಎಂದು ಘೋಷಿಸಿದ ಗವಾಸ್ಕರ್‌
  • ದಿನೇಶ್‌ ಕಾರ್ತಿಕ್‌ ಮತ್ತು ಆರ್‌ ಅಶ್ವಿನ್‌ ʻವಿದಾಯ ಪಂದ್ಯʼ!

ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಟೀಮ್‌ ಇಂಡಿಯಾದ ಅಭಿಯಾನ ಕೊನೆಗೊಂಡಿದೆ. ಇಂಗ್ಲೆಂಡ್‌ ಕೈಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆಯ ಪರ್ವ ಆರಂಭವಾಗುವ ಲಕ್ಷಣಗಳು ಕಾಣಿಸತೊಡಗಿದೆ.

ಐಪಿಎಲ್‌ನಲ್ಲಿ ತೋರಿದ ಪ್ರದರ್ಶನದ ಬಲದಲ್ಲಿ ಟಿ20 ವಿಶ್ವಕಪ್‌ಗೆ ಪ್ರಕಟಿಸಲಾದ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ದಿನೇಶ್‌ ಕಾರ್ತಿಕ್‌, ಆರ್‌ ಅಶ್ವಿನ್‌ ಹಾಗೂ ಮುಹಮ್ಮದ್‌ ಶಮಿ ಮುಂದಿನ ದಿನಗಳಲ್ಲಿ ಟೀಮ್‌ ಇಂಡಿಯಾದ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಯಾವುದೇ ಸಾಧ್ಯತೆಗಳಿಲ್ಲ. ಹೀಗಾಗಿ ಇಂಗ್ಲಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯ ಈ ಮೂವರು ಆಟಗಾರರ ಪಾಲಿಗೆ ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿತ್ತು ಎಂಬುದು ಬಹುತೇಕ ಸ್ಪಷ್ಟ.

Eedina App

ಮತ್ತೊಂದೆಡೆ ಟಿ20 ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾದ ಸ್ವರೂಪ ಬದಲಾವಣೆಗೆ ಬಿಸಿಸಿಐ ಮುಂದಾಗಿದ್ದು, ನಾಯಕ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಮುಂದಿನ ದಿನಗಳಲ್ಲಿ ಟಿ20 ಮಾದರಿಯಲ್ಲಿ ಆಡಬೇಕೆ– ಬೇಡವೇ ಎಂಬುದನ್ನು ಅವರೇ ನಿರ್ಧರಿಸಲಿ ಎಂದು ಹೇಳಿದೆ.  

ಈ ಸುದ್ದಿಯನ್ನು ಓದಿದ್ದೀರಾ ? :ಟಿ20 ವಿಶ್ವಕಪ್‌ ಸೆಮಿಫೈನಲ್‌ | ಒಂದೇ ಪಂದ್ಯ ಹಲವು ದಾಖಲೆ! ಗಿನ್ನಿಸ್‌ ಟ್ವೀಟ್‌ ಹೇಳಿದ್ದೇನು?

ಇಂಗ್ಲೆಂಡ್‌ ವಿರುದ್ಧದ ಹೀನಾಯ ಸೋಲಿನ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, "ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಟೀಮ್‌ ಇಂಡಿಯಾದ ಕೆಲ ಕ್ರಿಕೆಟಿಗರು ನಿವೃತ್ತಿ ಹೊಂದಲಿದ್ದು, ತಂಡದಲ್ಲಿ ಶೀಘ್ರವೇ ಮಹತ್ವದ ಬದಲಾವಣೆಗಳಾಗಲಿವೆ" ಎಂದು ಹೇಳಿದ್ದಾರೆ.

30 ವರ್ಷ ಮೇಲ್ಪಟ್ಟ ಹಲವರು ಮುಂದಿನ ದಿನಗಳಲ್ಲಿ ನಿವೃತ್ತಿ ಘೋಷಿಸುವ  ಕುರಿತು ಯೋಚಿಸುತ್ತಿರಬಹುದು. ನಾಯಕ ರೋಹಿತ್ ಶರ್ಮಾ, ಅಶ್ವಿನ್, ಭುವನೇಶ್ವರ್ ಕುಮಾರ್, ಕೆ ಎಲ್ ರಾಹುಲ್ ಯಾವುದೇ ರೀತಿಯಲ್ಲೂ ತಂಡಕ್ಕೆ ನೆರವಾಗುತ್ತಿಲ್ಲ. ಈ ಆಟಗಾರರ ಪ್ರದರ್ಶನದ ಕುರಿತು ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಚುಟುಕು ಮಾದರಿಯಲ್ಲಿ ಆಡುವ ತಂಡದಲ್ಲಿ ಹೊಸಬರಿಗೆ ಅವಕಾಶ ನೀಡಬೇಕಾಗಿದೆ" ಎಂದು ಗವಾಸ್ಕರ್‌ ಹೇಳಿದ್ದಾರೆ.

"ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮುಂದಿನ ನಾಯಕನಾಗಲಿದ್ದಾರೆ. ಐಪಿಎಲ್‍ನಲ್ಲಿ ಗುಜರಾತ್‌ ಟೈಟಾನ್ಸ್ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ನಾಯಕನಾದ ಮೊದಲ ಆವೃತ್ತಿಯಲ್ಲೇ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಪಾಂಡ್ಯ ಯಶಸ್ವಿಯಾಗಿದ್ದಾರೆ. ಹೀಗಾಗಿ ಭಾರತ ತಂಡವನ್ನು ಆತನೇ ಮುನ್ನೆಡೆಸಲಿದ್ದಾನೆ" ಎಂದು ಗವಾಸ್ಕರ್ ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
43 ವೋಟ್
eedina app