ಟಿ20 ಸರಣಿ| ರೋಹಿತ್‌, ಕಾರ್ತಿಕ್‌ ಅಬ್ಬರಕ್ಕೆ ವಿಂಡೀಸ್‌ ನಿರುತ್ತರ

  • ಟಿ20 ಸರಣಿಯಲ್ಲಿ ಭಾರತ ಶುಭಾರಂಭ
  • 19 ಎಸೆತಗಳಲ್ಲಿ  41 ರನ್ ಸಿಡಿಸಿದ ಕಾರ್ತಿಕ್‌

ಏಕದಿನ ಸರಣಿಯ ಕ್ಲೀನ್‌ಸ್ವೀಪ್‌ ಸಾಧನೆಯ ಬಳಿಕ, ಟಿ20 ಸರಣಿಯಲ್ಲೂ ಭಾರತ ಶುಭಾರಂಭ ಮಾಡಿದೆ. ತರೋಬದ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗ, ಆತಿಥೇಯ ವೆಸ್ಟ್‌ ಇಂಡೀಸ್‌ ತಂಡವನ್ನು 68 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿಯೇ ಮಣಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ, 6 ವಿಕೆಟ್‌ ನಷ್ಟದಲ್ಲಿ 190 ರನ್‌ ಗಳಿಸಿತ್ತು. ಸವಾಲಿನ ಗುರಿ ಹಿಂಬಾಲಿಸಿದ ವಿಂಡೀಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 122 ರನ್‌ ಗಳಿಸಲಷ್ಟೇ ಸೀಮಿತವಾಯಿತು. ಆ ಮೂಲಕ 5 ಪಂದ್ಯಗಳ  ಟಿ20 ಸರಣಿಯಲ್ಲಿ ಟೀಮ್‌ ಇಂಡಿಯಾ, 1-0 ಮುನ್ನಡೆ ಸಾಧಿಸಿದೆ.

ಜೇಸನ್‌ ಹೋಲ್ಡರ್‌ (0), ನಿಕೋಲಸ್‌ ಪೂರನ್‌ (18), ಶಿಮ್ರಾನ್‌ ಹೆಟ್ಮಾಯೆರ್‌ (14) ಕೈಲ್ ಮೇಯರ್ಸ್ (15) ಸೇರಿದಂತೆ ವೆಸ್ಟ್‌ ಇಂಡೀಸ್‌ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯ ತಂಡಕ್ಕೆ ಮುಳುವಾಯಿತು. ಶಮರ ಬ್ರೂಕ್ಸ್‌  ಗಳಿಸಿದ 20 ರನ್‌ ವೈಯಕ್ತಿಕ ಗರಿಷ್ಠ ಸ್ಕೋರ್‌ ಎನಿಸಿಕೊಂಡಿತು. ಭಾರತದ ಪರ ರವಿ ಬಿಷ್ಣೋಯ್‌, ಆರ್‌ ಅಶ್ವಿನ್‌ ಹಾಗೂ ಅರ್ಷದೀಪ್ ಸಿಂಗ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರೆ, ಭುವನೇಶ್ವರ್‌ ಕುಮಾರ್‌ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್‌ ಪಡೆದರು.  ಸರಣಿಯ ಎರಡನೇ ಪಂದ್ಯ ಆಗಸ್ಟ್‌ ಒಂದರಂದು ಬಾಸೆಟೆರೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ದಿನೇಶ್‌ ಕಾರ್ತಿಕ್‌ ಅಬ್ಬರ: ಐಪಿಎಲ್‌ ಟೂರ್ನಿಯ ಬಳಿಕ ಅಮೋಘ ಫಾರ್ಮ್‌ನಲ್ಲಿರುವ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌, ವೀಂಡೀಸ್‌ ವಿರುದ್ಧವೂ ಅಬ್ಬರಿಸಿದ್ದಾರೆ.  ಕೇವಲ 19 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 4 ಬೌಂಡರಿಯೊಂದಿಗೆ 41 ರನ್ ಸಿಡಿಸಿ ಅಜೇಯರಾಗುಳಿದರು. ಕಾರ್ತಿಕ್‌ಗೆ  ಉತ್ತಮ ಸಾಥ್‌ ನೀಡಿದ ಅಶ್ವಿನ್‌ 13 ರನ್‌ ಗಳಿಸಿ ಅಜೇಯರಾಗಿ ಉಳಿದರು. 7ನೇ ವಿಕೆಟ್‌ಗೆ ಈ ಜೋಡಿ 52 ರನ್‌ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿತು.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌| ಭಾರತದ ಎರಡನೇ ದಿನದ ಸ್ಪರ್ಧೆಗಳ ವಿವರ

ರೋಹಿತ್‌ ಶರ್ಮಾ ದಾಖಲೆ : ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಟಿ20 ಪಂದ್ಯದಲ್ಲಿ 44 ಎಸೆತಗಳಲ್ಲಿ 64 ರನ್‌ ಸಿಡಿಸಿದ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ವಿಶೇಷ ದಾಖಲೆಯನ್ನು ಬರೆದರು. ಇದು ರೋಹಿತ್‌ ಶರ್ಮಾ ವೃತ್ತಿಜೀವನದ 31ನೇ ಅರ್ಧಶತಕವಾಗಿತ್ತು. ಇದರೊಂದಿಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌  ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. ಆ ಮೂಲಕ 30 ಅರ್ಧ ಶತಕಗಳನ್ನು ಸಿಡಿಸಿದ್ದ ಸಹ ಆಟಗಾರ ವಿರಾಟ್‌ ಕೊಹ್ಲಿಯನ್ನು, ಶರ್ಮಾ ಹಿಂದಿಕ್ಕಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್