ನಿಗದಿತ ಸಮಯದಲ್ಲಿ ಆರಂಭವಾಗದ ಟಿ20 ಪಂದ್ಯ ! ಕಾರಣವೇನು ಗೊತ್ತಾ ?

  • ಎರಡು ಗಂಟೆ ತಡವಾಗಿ ಪಂದ್ಯ ಪ್ರಾರಂಭ
  • ಟ್ರಿನಿಡಾಡ್‌ನಿಂದ ತಂಡದ ಲಗೇಜ್‌ ವಿಳಂಬ

ವೆಸ್ಟ್‌ ಇಂಡೀಸ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯ ನಿಗದಿತ ಅವಧಿಗಿಂತ ಎರಡು ಗಂಟೆ ತಡವಾಗಲಿದೆ. ಸೋಮವಾರ ರಾತ್ರಿ 8ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ, ರಾತ್ರಿ 10 ಗಂಟೆಗೆ ಶುರುವಾಗಲಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟ್ವೀಟ್ ಮೂಲಕ ಮಾಹಿತಿ ನೀಡಿತ್ತು.

ಸೋಮವಾರದ ಪಂದ್ಯ ನಿಗದಿಯಾಗಿರುವ ಸೇಂಟ್ ಕಿಟ್ಸ್‌ಗೆ,  ಟ್ರಿನಿಡಾಡ್‌ನಿಂದ ಆಗಮಿಸಿದ ತಂಡದ ಲಗೇಜ್‌ ತಲುಪಲು ವಿಳಂಬವಾಗಿದೆ. ಹೀಗಾಗಿ, ರಾತ್ರಿ 8 ಗಂಟೆ ಬದಲಾಗಿ 10 ಗಂಟೆಗೆ ಪಂದ್ಯ ಶುರುವಾಗಲಿದೆ. ಅಭಿಮಾನಿಗಳು, ಪ್ರಾಯೋಜಕರು, ಪ್ರಸಾರಕರು ಹಾಗೂ ಇತರೆ ಎಲ್ಲ ಪಾಲುದಾರರಿಗೆ ಇದರಿಂದ ಅನಾನುಕೂಲತೆ ಉಂಟಾಗಿದ್ದರೆ ವಿಷಾದಿಸುತ್ತೇವೆ ವಿಂಡೀಸ್‌ ಕ್ರಿಕೆಟ್‌ ಮಂಡಳಿ ಟ್ವೀಟ್‌ನಲ್ಲಿ ತಿಳಿಸಿತ್ತು.

ಮೊದಲ ಪಂದ್ಯದಲ್ಲಿ 68 ರನ್‌ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದ್ದ ರೋಹಿತ್‌ ಶರ್ಮಾ ಬಳಗ, ಎರಡನೇ ಪಂದ್ಯದಲ್ಲಿಯೂ ಗೆಲುವಿನ ಓಟ ಮುಂದುವರೆಸುವ ತವಕದಲ್ಲಿದೆ.

ಮತ್ತೊಂದೆಡೆ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡಿದ್ದ ಆತಿಥೇಯ ವಿಂಡೀಸ್, ಟಿ20 ಸರಣಿಯನ್ನಾದರೂ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಚುಟುಕು ಕ್ರಿಕೆಟ್‌ಗೆ ಹೆಸರುವಾಸಿಯಾದ ಪ್ರಮುಖ ಆಟಗಾರರನ್ನು ಹೊಂದಿರುವ ವಿಂಡೀಸ್‌, ಎರಡನೇ ಟಿ20 ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ.

 ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಬ್ಯಾಕ್‌ ಸ್ಟ್ರೋಕ್‌ ಈಜು; ಫೈನಲ್‌ಗೆ ಕನ್ನಡಿಗ ಶ್ರೀಹರಿ

ಈ ವರ್ಷಾಂತ್ಯದಲ್ಲಿ ನಡೆಯಲಿರುವ  ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ, ಆರಂಭಿಕ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಪ್ರಯೋಗ ನಡೆಸುತ್ತಿದೆ. ಕಳೆದ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮ ಸ್ಪಿನ್ ತ್ರಿವಳಿಗಳಾದ ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್ ಮತ್ತು ರವಿ ಬಿಷ್ಣೋಯ್‌ ಅವರನ್ನು ಕಣಕ್ಕಿಳಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದರು. ಅರ್ಶ್‌ದೀಪ್ ಸಿಂಗ್, ಆಲ್‌ರೌಂಡರ್ ದೀಪಕ್ ಹೂಡಾ ಸೋಮವಾರದ ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ದಿನೇಶ್ ಕಾರ್ತಿಕ್ ಫಿನಿಶರ್ ಪಾತ್ರದಲ್ಲಿ ಮಿಂಚುತ್ತಿರುವುದು ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಐಪಿಎಲ್‌ ಟೂರ್ನಿಯ ಬಳಿಕ ಅಮೋಘ ಫಾರ್ಮ್‌ನಲ್ಲಿರುವ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌, ವಿಂಡೀಸ್‌ ವಿರುದ್ಧದ ಮೊದಲ ಟಿ20 ಅಬ್ಬರಿಸಿದ್ದರು.  ಕೇವಲ 19 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 4 ಬೌಂಡರಿಯೊಂದಿಗೆ 41 ರನ್ ಸಿಡಿಸಿ ಅಜೇಯರಾಗುಳಿದರು. 7ನೇ ವಿಕೆಟ್‌ಗೆ ಅಶ್ವಿನ್‌ ಜೊತೆ ಸೇರಿ 52 ರನ್‌ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್