ಐಪಿಎಲ್ 2022 | ಮುಂದುವರಿದ ಮುಂಬೈ ಸೋಲಿನ ಸರಣಿ; ಬೆಂಗಳೂರು ತಂಡಕ್ಕೆ ಹ್ಯಾಟ್ರಿಕ್ ಗೆಲುವಿನ ಸಿಹಿ

IPL 2022
  • ಸತತ ನಾಲ್ಕನೇ ಪಂದ್ಯದಲ್ಲೂ ಮುಗ್ಗರಿಸಿದ ಮುಂಬೈ ಇಂಡಿಯನ್ಸ್‌
  • ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಅನುಜ್ ರಾವತ್ (66 ) ಮತ್ತು ವಿರಾಟ್ ಕೊಹ್ಲಿ(48) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. 

15ನೇ ಆವೃತ್ತಿಯ ಐಪಿಎಎಲ್ ಟೂರ್ನಿಯ 18ನೇ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, 6 ವಿಕೆಟ್ ನಷ್ಟದಲ್ಲಿ 151 ರನ್ ಕಲೆಹಾಕಿತ್ತು. ಸಾಮಾನ್ಯ ಗುರಿಯನ್ನು 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಬೆನ್ನಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಹ್ಯಾಟ್ರಿಕ್ ಗೆಲುವಿನ ಸಂಭ್ರವನ್ನಾಚರಿಸಿತು. 

ಮುಂಬೈಗೆ ಆಸರೆಯಾದ ಸೂರ್ಯಕುಮಾರ್ ಯಾದವ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ್ದ, ಮುಂಬೈ ಇಂಡಿಯನ್ಸ್ ಪಾಲಿಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ತಲಾ 26 ರನ್‌ಗಳಿಸಿ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ನಿರ್ಗಮಿಸಿದರೆ, ತಿಲಕ್ ವರ್ಮಾ, ಕೈರಾನ್ ಪೊಲಾರ್ಡ್ ಖಾತೆ ತರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು. 62 ರನ್‌ಗಳಿಸುವಷ್ಟರಲ್ಲಿ 5 ಮತ್ತು 79ಕ್ಕೆ 6 ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ಪಾಲಿಗೆ ಸೂರ್ಯಕುಮಾರ್ ಯಾದವ್ ಆಸರೆಯಾದರು.

AV Eye Hospital ad

37 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್, 6 ಭರ್ಜರಿ ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 68 ರನ್‌ ಗಳಿಸಿ ಅಜೇಯರಾಗುಳಿದರು. ಆ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯುವ ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ತಂಡವನ್ನು, ಯಾದವ್ 150ರ ಗಡಿ ದಾಟಿಸಿದರು. ಸೂರ್ಯಕುಮಾರ್ ಯಾದವ್‌ಗೆ ಸಾಥ್ ನೀಡಿದ ಜಯದೇವ್ ಉನಾದ್ಕತ್ ಅಜೇಯ 13 ರನ್ ಕಲೆಹಾಕಿದರು. ಆರ್‌ಸಿಬಿ ಪರ ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದರೆ ಆಕಾಶ್ ದೀಪ್ 1 ವಿಕೆಟ್ ಪಡೆದರು. 

ಅನುಜ್ ರಾವತ್ ಅಬ್ಬರಕ್ಕೆ ಮುಂಬೈ ನಿರುತ್ತರ

ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 152 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕ ಆಟಗಾರ ಅನುಜ್ ರಾವತ್ ಭರ್ಜರಿ ಆರಂಭ ಒದಗಿಸಿದರು. 47 ಎಸೆತಗಳ ಆಕರ್ಷಕ ಇನ್ನಿಂಗ್ಸ್ ಎದುರಿಸಿ - 6 ಸಿಕ್ಸರ್, 2 ಬೌಂಡಿರಿಗಳೊಂದಿಗೆ 66 ರನ್ ಸಿಡಿಸಿದ ಅನುಜ್ ಅವರ ಆಟವು ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ನಾಯಕ ಫಾಫ್ ಡು ಪ್ಲೆಸಿಸ್ 16 ರನ್ ಮತ್ತು ವಿರಾಟ್ ಕೊಹ್ಲಿ ಗಳಿಸಿದ 48 ರನ್‌ಗಳ ನೆರವಿನಿಂದ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿದ ಆರ್‌ಸಿಬಿ 7 ವಿಕೆಟ್‌ಗಳ ಜಯ ಸಾಧಿಸಿದೆ. 

ಇದನ್ನು ಓದಿದಿರಾ?: ಘರ್ಷಣೆ ವೇಳೆ ಮಧ್ಯಸ್ಥಿಕೆ ವಹಿಸಿದ್ದ ಕಬಡ್ಡಿ ಆಟಗಾರನ ಗುಂಡಿಟ್ಟು ಹತ್ಯೆ

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದರೆ, ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಸೋಲು ಕಂಡಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app