ಐಪಿಎಲ್ 2022 | ಪ್ಲೇ ಆಫ್ ಕನಸು ಜೀವಂತವಾಗಿರಿಸಿದ ಆರ್‌ಸಿಬಿ

  • ಟಾಪ್ 4ರ ಸ್ಥಾನಕ್ಕೆ ಮತ್ತೆ ಮರಳಿದ ಫಾಫ್ ಡು ಪ್ಲೆಸಿಸ್ ಬಳಗ
  • ವಿರಾಟ್ ಕೊಹ್ಲಿ ಅಬ್ಬರದ ಅರ್ಧಶತಕದ ನೆರವಿನಿಂದ ಗುಜರಾತ್ ವಿರುದ್ಧ 8 ವಿಕೆಟ್‌ ಗೆಲುವು

ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕ, ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಸಮಯೋಚಿತ ಬ್ಯಾಟಿಂಗ್‌ನ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಆ ಮೂಲಕ ಈ ಸೀಸನ್‌ನಲ್ಲಿ ಪ್ಲೇ ಆಫ್ ಹಂತಕ್ಕೇರುವ ಕನಸು ಇನ್ನೂ ಜೀವಂತವಾಗಿ ಉಳಿಸಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ 67ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು.

 

ಬಳಿಕ ಬ್ಯಾಟಿಂಗ್ ಮಾಡಿದ ಆರ್‌ಸಿಬಿ 8 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿ ಗೆಲುವು ದಾಖಲಿಸಿತು. ತಂಡದ ಪರ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 73 ರನ್, ನಾಯಕ ಫಾಫ್ ಡು ಪ್ಲೆಸ್ಸಿಸ್ 38 ಎಸೆತಗಳಲ್ಲಿ 44 ರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಜೇಯ 40 ರನ್ ಗಳಿಸಿದರು. ಇದಕ್ಕಾಗಿ 18 ಎಸೆತಗಳನ್ನಷ್ಟೇ ಎದುರಿಸಿದರು. ದಿನೇಶ್ ಕಾರ್ತಿಕ್ 2 ಎಸೆತಗಳಲ್ಲಿ 2 ರನ್ ಗಳಿಸಿ ಅಜೇಯರಾಗಿ ಉಳಿದರು. ಗುಜರಾತ್ ಪರ ರಶೀದ್ ಖಾನ್ ನಿಗದಿತ ನಾಲ್ಕು ಓವರ್ ಎಸೆದು 32 ರನ್‌ ನೀಡಿ 2 ವಿಕೆಟ್ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಗುಜರಾತ್ ತಂಡದ ಪರ ಹಾರ್ದಿಕ್ ಪಾಂಡ್ಯ ಅಜೇಯ 62 ರನ್, ಡೇವಿಡ್ ಮಿಲ್ಲರ್ 34 ರನ್, ವೃದ್ಧಿಮಾನ್ ಸಹಾ 31 ರನ್ ಹಾಗೂ ರಶೀದ್ ಖಾನ್ 19 ರನ್ ಗಳಿಸಿದ್ದರು. ಇನ್ನು ಆರ್‌ಸಿಬಿ ಪರ ಜೋಶ್ ಹ್ಯಾಝಲ್‌ವುಡ್ 2 ವಿಕೆಟ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವಾನಿಂದು ಹಸರಂಗ ತಲಾ 1 ವಿಕೆಟ್ ಗಳಿಸಿದ್ದರು.

ಪ್ಲೇ ಆಫ್ ಲೆಕ್ಕಾಚಾರ

ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಆದರೂ ಪ್ಲೇ ಆಫ್ ಲೆಕ್ಕಾಚಾರ ಕೊನೆಗೊಂಡಿಲ್ಲ.  ಮೇ 21ರ ಶನಿವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಮಣಿಸಬೇಕು. ಹೀಗಾದಲ್ಲಿ ರನ್ ರೇಟ್ ಖ್ಯಾತೆ ಇಲ್ಲದೆಯೇ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಲಿದೆ. ಮುಂಬೈ ವಿರುದ್ಧ ಡೆಲ್ಲಿ ಗೆಲುವು ಸಾಧಿಸಿದರೆ, ರನ್ ರೇಟ್ ಆಧಾರದಲ್ಲಿ ಆರ್‌ಸಿಬಿ ಅಭಿಯಾನ ಅಂತ್ಯವಾಗಲಿದೆ.

ಐಪಿಎಎಲ್‌ನ ಬಲಿಷ್ಠ ತಂಡಗಳಾದ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, 4 ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್, ಮೂರು ಬಾರಿಯ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಈಗಾಗಲೇ ಪ್ಲೇ ಆಫ್‌ನಿಂದ ಅಧಿಕೃತವಾಗಿ ಹೊರಬಿದ್ದಿವೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app