ಐಪಿಎಲ್‌| ಸಿಎಸ್‌ಕೆ ತಂಡದಿಂದ ಹೊರನಡೆದ ಮಾಜಿ ನಾಯಕ?

  • ರವೀಂದ್ರ ಜಡೇಜಾ ಚೆನ್ನೈ ತಂಡವನ್ನು ತೊರೆಯುವುದು ಬಹುತೇಕ ಖಚಿತ
  • ತಂಡದ ಆಡಳಿತ ಮಂಡಳಿಯ ವಿರುದ್ಧ ಜಡೇಜಾ ತೀವ್ರ ಅಸಮಾಧಾನ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ, ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು ತೊರೆಯುವುದು ಬಹುತೇಕ ಖಚಿತಗೊಂಡಿದೆ. ಐಪಿಎಲ್‌ನ 15ನೇ ಆವೃತ್ತಿಯ ಆರಂಭದಲ್ಲಿ ಸಿಎಸ್​ಕೆ ಫ್ರಾಂಚೈಸಿ, ಜಡೇಜಾರನ್ನು ನಾಯಕನಾಗಿ ನೇಮಿಸಿತ್ತು. ಆದರೆ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ತಂಡವು ಸತತ ಸೋಲು ಕಂಡ ಪರಿಣಾಮ ಜಡೇಜಾರನ್ನು ಕೆಳಗಿಸಿಳಿ, ಮತ್ತೆ ಎಂಎಸ್ ಧೋನಿಗೆ ನಾಯಕನ ಪಟ್ಟ ಕಟ್ಟಲಾಗಿತ್ತು.

ಚೆನ್ನೈ ತಂಡದ ಆಡಳಿತ ಮಂಡಳಿಯ ನಿರ್ಧಾರದಿಂದಾಗಿ ಜಡೇಜಾ ತೀವ್ರ ಅಸಮಾಧಾನಗೊಂಡಿದ್ದರು. ನಾಯಕತ್ವ ತೊರೆಯುತ್ತಲೇ ಗಾಯದ ಕಾರಣ ನೀಡಿ ಜಡೇಜಾ, ತಂಡದಿಂದ ಹೊರಗುಳಿದಿದ್ದರು. ಆದರೆ ಈ ಬಾರಿಯ ಐಪಿಎಲ್‌ ಮುಕ್ತಾಯಗೊಂಡ ಬಳಿಕ ಸಿಎಸ್‌ಕೆ ಆಡಳಿತ ಮಂಡಳಿಯ ಜೊತೆ ರವೀಂದ್ರ ಜಡೇಜಾ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿದ್ದ ಸಿಎಸ್​ಕೆ ತಂಡಕ್ಕೆ ಸಂಬಂಧಿಸಿದ ಎಲ್ಲ ಪೋಸ್ಟ್​ಗಳನ್ನು ಜಡೇಜಾ ಡಿಲೀಟ್ ಮಾಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಜಡೇಜಾ, ಚೆನ್ನೈ ತಂಡವನ್ನು ತೊರೆಯುವುದು ಬಹುತೇಕ ಖಚಿತವಾಗಿದೆ.

2012ರಲ್ಲಿ ಜಡೇಜಾ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸೇರಿಕೊಂಡಿದ್ದರು. ಐಪಿಎಲ್ 2022ರ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ, ಗರಿಷ್ಠ 16 ಕೋಟಿ ರೂಪಾಯಿಗೆ ಜಡೇಜಾರನ್ನು ಉಳಿಸಿಕೊಂಡಿತ್ತು. ಜಡೇಜಾಗೆ ಮೊದಲ ಪ್ರಾಶಸ್ತ್ಯ ನೀಡಿ, ನಾಯಕತ್ವ ಸ್ಥಾನ ನೀಡುವಂತೆ ಎಂಎಸ್‌ ಧೋನಿ ಸಲಹೆ ನೀಡಿದ್ದರು ಎನ್ನಲಾಗಿತ್ತು. ಆದರೆ ಟೂರ್ನಿಯ ಆರಂಭದಲ್ಲೇ ಸಿಎಸ್‌ಕೆ ಯೋಜನೆಗಳು ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ ಜಡೇಜಾ ಬದಲಾವಣೆಗೆ ಫ್ರಾಂಚೈಸಿ ಮುಂದಾಗಿತ್ತು.

ಆದರೆ ಈ ಕುರಿತ ಸ್ಪಷ್ಟ ಚಿತ್ರಣ ಸಿಗಲು, ಮುಂದಿನ ಐಪಿಎಲ್‌ ಟ್ರಾನ್ಸ್‌ಫರ್‌ ವಿಂಡೋ ತೆರೆದುಕೊಳ್ಳುವವರೆಗೂ ಕಾಯಬೇಕಿದೆ. ಜಡೇಜಾ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಉಳಿದ ಫ್ರಾಂಚೈಸಿಗಳು ಕುತೂಹಲದಿಂದ ಗಮನಿಸುತ್ತಿವೆ. ಜಡೇಜಾ ಸಿಎಸ್‌ಕೆಯಿಂದ ಹೊರ ಬಂದರೆ, ಉಳಿದ 9 ಫ್ರಾಂಚೈಸಿಗಳು ಜಡೇಜಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಭರ್ಜರಿ ಪೈಪೋಟಿ ನಡೆಸುವುದು ನಿಶ್ಚಿತ.

ಈ ಸುದ್ದಿ ಓದಿದ್ದೀರಾ ? : ಟೀಮ್‌ ಇಂಡಿಯಾ ಆಟಗಾರರಿಗೆ 'ಬೇಗ ಬೇಗ ಸ್ನಾನ ಮಾಡಿ' ಎಂದ ಬಿಸಿಸಿಐ!

ಐಪಿಎಲ್​ನಲ್ಲಿ ಇದುವರೆಗೆ 210 ಪಂದ್ಯಗಳನ್ನು ಆಡಿರುವ ಜಡೇಜಾ 132 ವಿಕೆಟ್ ಪಡೆದಿದ್ದಾರೆ. 16 ರನ್‌ ನೀಡಿ 5 ವಿಕೆಟ್ ಪಡೆದಿರುವುದು ವೈಯಕ್ತಿಕ ಅತ್ಯುತ್ತಮ ಪ್ರದರ್ಶನವಾಗಿದೆ. ಬ್ಯಾಟಿಂಗ್‌ನಲ್ಲಿ 2 ಅರ್ಧಶತಕ ಒಳಗೊಂಡಂತೆ 2502 ರನ್ ಕಲೆ ಹಾಕಿದ್ದಾರೆ. 100ಕ್ಕೂ ಅಧಿಕ ವಿಕೆಟ್ ಹಾಗೂ 2 ಸಾವಿರಕ್ಕೂ ಅಧಿಕ ರನ್​ ಕಲೆಹಾಕುವ ಮೂಲಕ ರವೀಂದ್ರ ಜಡೇಜಾ ಐಪಿಎಲ್​ನಲ್ಲಿ ಪರಿಪೂರ್ಣ ಆಲ್​ರೌಂಡರ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಸಿಎಸ್​ಕೆ ತಂಡದಿಂದ ಜಡೇಜಾ ಹೊರಬಂದರೆ ಖರೀದಿಸಲು ವಿವಿಧ ತಂಡಗಳು ಪೈಪೋಟಿ ನಡೆಸಲಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್