ಶನಿವಾರದಿಂದ ಐಪಿಎಲ್ ಹಬ್ಬ | ದಾಖಲೆಗಳ ಪುಟದಲ್ಲಿ ಕೊಹ್ಲಿಯೇ ಕಿಂಗ್

ಐಪಿಎಲ್‌ನಲ್ಲಿ ಇದುವರೆಗೂ ಅತ್ಯಧಿಕ ರನ್ ಗಳಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 207 ಪಂದ್ಯಗಳನ್ನು ಆಡಿರುವ ಕೊಹ್ಲಿ, 199 ಇನ್ನಿಂಗ್ಸ್‌ಗಳಿಂದ ಸರಾಸರಿ 37.40ರಂತೆ ಒಟ್ಟು 6,283 ರನ್ ಗಳಿಸಿದ್ದಾರೆ.

ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಶನಿವಾರ ಮುಂಬೈನಲ್ಲಿ ಚಾಲನೆ ದೊರೆಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಳೆದ ಬಾರಿ ಫೈನಲ್‌ನಲ್ಲಿ ಸೋಲು ಕಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

Eedina App

ಇದೂವರೆಗೂ ನಡೆದಿರುವ ಐಪಿಎಲ್‌ನ 14 ಆವೃತ್ತಿಗಳಲ್ಲಿ  ದಾಖಲೆ ನಿರ್ಮಿಸಿರುವ ವೀರರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ:

ರನ್ ಬೇಟೆಯಲ್ಲಿ ಕೊಹ್ಲಿ ನಂ.1 
ಐಪಿಎಲ್‌ನಲ್ಲಿ ಇದುವರೆಗೂ ಅತ್ಯಧಿಕ ರನ್ ಗಳಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 207 ಪಂದ್ಯಗಳನ್ನು ಆಡಿರುವ ಕೊಹ್ಲಿ, 199 ಇನ್ನಿಂಗ್ಸ್‌ಗಳಿಂದ ಸರಾಸರಿ 37.40ರಂತೆ ಒಟ್ಟು 6283 ರನ್ ಗಳಿಸಿದ್ದಾರೆ. 31 ಬಾರಿ ನಾಟೌಟ್ ಆಗಿರುವ ಕೊಹ್ಲಿ 5 ಶತಕ ಹಾಗೂ 42 ಅರ್ಧಶತಕಗಳನ್ನು ಸಿಡಿಸಿದ್ದಾರೆ. 210 ಬೌಂಡರಿ ಹಾಗೂ 546 ಸಿಕ್ಸರ್ ಕೊಹ್ಲಿ ಬ್ಯಾಟ್‌ನಿಂದ ಸಿಡಿದಿವೆ.

AV Eye Hospital ad

5784 ರನ್ ಗಳೊಂದಿಗೆ ಶಿಖರ್ ಧವನ್ ಎರಡನೇ ಸ್ಥಾನದಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 5611 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ವಿಕೆಟ್ ವೀರರಲ್ಲಿ ಮಾಲಿಂಗರನ್ನು ಮೀರಿದವರಿಲ್ಲ !
ಬ್ಯಾಟರ್‌ಗಳ ಆಟವೆಂದೇ ಖ್ಯಾತಿ ಪಡೆದಿರುವ ಐಪಿಎಲ್‌ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌ನ ಲಸಿಂತ್ ಮಾಲಿಂಗ ಮೊದಲ ಸ್ಥಾನದಲ್ಲಿದ್ದಾರೆ. 122 ಪಂದ್ಯಗಳನ್ನು ಆಡಿರುವ ಲೆಜೆಂಡ್ ಬೌಲರ್, 170 ವಿಕೆಟ್ ಪಡೆಯುವ ಮೂಲಕ ಐಪಿಎಲ್‌ನ ಅಗ್ರ ಬೌಲರ್ ಎನಿಸಿದ್ದಾರೆ. 1 ಬಾರಿ 5 ವಿಕೆಟ್ ಹಾಗೂ 6 ಬಾರಿ 4 ವಿಕೆಟ್ ಪಡೆದು ಮಿಂಚಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಅತ್ಯಂತ ಅನುಭವಿ ಬೌಲರ್ ಡ್ವೇನ್ ಬ್ರಾವೋ 150 ಪಂದ್ಯಗಳನ್ನಾಡಿದ್ದು, 167 ವಿಕೆಟ್ ಪಡೆದಿದ್ದಾರೆ. 166 ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ 3ನೇ ಸ್ಥಾನದಲ್ಲಿದ್ದಾರೆ.  

ಸಿಕ್ಸರ್ ಪಟ್ಟಿಯಲ್ಲಿ ಕ್ರಿಸ್ ಗೇಲ್ ಬಹುದೂರ 
ಐಪಿಎಎಲ್‌ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ದೈತ್ಯ ಆಟಗಾರ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. 142 ಪಂದ್ಯಗಳನ್ನು ಆಡಿರುವ ಗೇಲ್, ಒಟ್ಟು 357 ಸಿಕ್ಸರ್‌ಗಳನ್ನು ಬಾರಿಸಿದ್ದು, ದ್ವಿತೀಯ ಸ್ಥಾನದಲ್ಲಿರುವ ಎಬಿಡಿ ವಿಲಯರ್ಸ್ (252)ಗಿಂತ ನೂರಕ್ಕೂ ಹೆಚ್ಚು ಸಿಕ್ಸರ್‌ಗಳ ಅಂತರ ಕಾಯ್ದುಕೊಂಡಿದ್ದಾರೆ.

ಇನ್ನಿಂಗ್ಸ್‌ವೊಂದರಲ್ಲೇ 17 ಸಿಕ್ಸರ್ ಬಾರಿಸಿದ ದಾಖಲೆಯೂ ಗೇಲ್ ಹೆಸರಿನಲ್ಲಿದೆ. 213 ಪಂದ್ಯಗಳಲ್ಲಿ 252 ಸಿಕ್ಸರ್ ಬಾರಿಸಿರುವ ಮುಂಬೈ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. 192 ಪಂದ್ಯಗಳಿಂದ 654 ಬೌಂಡರಿ ಬಾರಿಸಿರುವ ಶಿಖರ್ ಧವನ್ ಐಪಿಎಲ್‌ನಲ್ಲಿ ಅತೀ ಹೆಚ್ಚು ಬೌಂಡರಿ ಸಿಡಿಸಿದವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.


ವೇಗದ ಶತಕ, ಅರ್ಧಶತಕ
2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಕ್ರಿಸ್ ಗೇಲ್ ಅವರು ಕೇವಲ 30 ಎಸೆತಗಳಲ್ಲಿ  ಶತಕ ಪೂರ್ತಿಗೊಳಿಸಿ ದಾಖಲೆ ಬರೆದಿದ್ದರು. ಆ ಪಂದ್ಯದಲ್ಲಿ ಒಟ್ಟು 175 ರನ್ ಗಳಿಸಿದ್ದ ಗೇಲ್, 17 ಸಿಕ್ಸರ್ ಹಾಗೂ 13 ಬೌಂಡರಿ ಬಾರಿಸಿದ್ದರು. 37 ಎಸೆತಗಳಲ್ಲಿ ಯೂಸೂಫ್ ಪಠಾಣ್ ಹಾಗೂ 38 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಡೇವಿಡ್ ಮಿಲ್ಲರ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದ್ದಾರೆ. ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕೆ.ಎಲ್. ರಾಹುಲ್ ಐಪಿಎಲ್ ಟೂರ್ನಿಯಲ್ಲಿ ದಾಖಲೆಯನ್ನು ಹೊಂದಿದ್ದಾರೆ. 15 ಎಸೆತಗಳಲ್ಲಿ ಯೂಸುಫ್ ಪಠಾಣ್ ಹಾಗೂ ಸುನಿಲ್ ನರೇನ್ ಅರ್ಧ ಶತಕಗಳನ್ನು ಪೂರ್ತಿಗೊಳಿಸಿದ್ದಾರೆ.

ವಾರ್ನರ್ ಹೆಸರಿನಲ್ಲಿದೆ 50 ಅರ್ಧಶತಕ
ಐಪಿಎಲ್‌ನಲ್ಲಿ 150 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್, 50 ಅರ್ಧಶತಕಗಳನ್ನು ಬಾರಿಸಿದ್ದಾರೆ.

44 ಅರ್ಧಶತಕಗಳೊಂದಿಗೆ ಶಿಖರ್ ಧವನ್ ಹಾಗೂ 42 ಅರ್ಧಶತಕಗಳೊಂದಿಗೆ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶತಕಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್ (6), ವಿರಾಟ್ ಕೊಹ್ಲಿ (5) ಹಾಗೂ 4 ಶತಕಗಳೊಂದಿಗೆ ಡೇವಿಡ್ ವಾರ್ನರ್ ಮೂರನೇ ಸ್ಥಾನದಲ್ಲಿದ್ದಾರೆ. 

ಆರ್‌ಸಿಬಿ ಪಾಲಿಗಿದೆ ‘ವಿಶೇಷ’ ದಾಖಲೆ
ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ (175), ಬ್ರೆಂಡನ್ ಮೆಕ್ಕಲಂ (158) ಹಾಗೂ ಮೂರನೇ ಸ್ಥಾನದಲ್ಲಿ ಎಬಿಡಿ ವಿಲಿಯರ್ಸ್ (133) ಇದ್ದಾರೆ.

ಇನ್ನಿಂಗ್ಸ್ಒಂದರಲ್ಲಿ ಅತೀ ಹೆಚ್ಚು ಮೊತ್ತ (263) ಪೇರಿಸಿದ್ದ ಆರ್‌ಬಿಸಿ ತಂಡವು ದಾಖಲೆಯನ್ನು ನಿರ್ಮಿಸಿದೆ. ಕಾಕತಾಳೀಯವೆಂದರೆ ಅತೀ ಕಡಿಮೆ ರನ್‌ಗಳನ್ನು (49) ಕಲೆಹಾಕಿದ್ದ ದಾಖಲೆಯೂ ಆರ್‌ಸಿಬಿ ಹೆಸರಿನಲ್ಲಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app