ಎರಡು ದಶಕದ ಆಟಕ್ಕೆ ವಿದಾಯ ಹೇಳಿದ ಮಹಿಳಾ ಕ್ರಿಕೆಟ್‌ನ ದಂತಕಥೆ ಜೂಲನ್‌ ಗೋಸ್ವಾಮಿ

ವೇಗದ ಬೌಲರ್ ಜೂಲನ್ ಗೋಸ್ವಾಮಿ ಮಹಿಳಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿರುವ ದಾಖಲೆ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಜೂಲನ್ ಗೋಸ್ವಾಮಿ ವಿದಾಯ ಹೇಳಿದ್ದು, ಕ್ರಿಕೆಟ್‌ ಪಯಣದ ಪಕ್ಷಿ ನೋಟ ಇಲ್ಲಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ದಂತಕಥೆ ಜೂಲನ್ ಗೋಸ್ವಾಮಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದಾರೆ. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಏಕದಿನ ಪಂದ್ಯ ಜೂಲನ್ ವೃತ್ತಿಜೀವನದ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

2002ರಲ್ಲಿ ತಮ್ಮ 19ನೇ ವಯಸ್ಸಿನಲ್ಲೇ ಜೂಲನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕಳೆದ ಎರಡು ದಶಕಗಳಿಂದ ಭಾರತ ಮಹಿಳಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದ 39 ವರ್ಷದ ಜೂಲನ್‌, ಹಲವು ʻಪ್ರಥಮʼಗಳಿಗೆ ಮುನ್ನುಡಿ ಬರೆದಿದ್ದರು. ಅತಿ ಹೆಚ್ಚು ವಿಕೆಟ್ (355)​ ಪಡೆದ ವಿಶ್ವದ ಮೊದಲ ಮತ್ತು ಅತಿ ಹೆಚ್ಚು ಏಕದಿನ ಪಂದ್ಯವಾಡಿದ ವಿಶ್ವದ 2ನೇ ಮಹಿಳಾ ಕ್ರಿಕೆಟರ್​ ಎಂಬ ಶ್ರೇಯ ಜೂಲನ್‌ ಅವರದ್ದಾಗಿದೆ.

Eedina App

ವೇಗದ ಬೌಲರ್ ಆಗಿರುವ ಜೂಲನ್ ಗೋಸ್ವಾಮಿ ಮಹಿಳಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳ ಪಡೆದಿರುವ ದಾಖಲೆ  ಹೊಂದಿದ್ದಾರೆ. ವಿಶ್ವಕಪ್‌ನಲ್ಲಿ 40 ವಿಕೆಟ್ ಪಡೆದಿರುವ ಜೂಲನ್, ಆಸ್ಟ್ರೇಲಿಯಾದ ಲಿನ್ ಫುಲ್‌ಸ್ಟನ್ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಮಿಥಾಲಿ ರಾಜ್ ನಂತರ ಏಕದಿನ ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲ ಆಡಿದ ಎರಡನೇ ಮಹಿಳಾ ಆಟಗಾರ್ತಿಯಾಗಿದ್ದಾರೆ.

20 ವರ್ಷ ಮತ್ತು 75 ದಿನಗಳ ಕಾಲ ಜೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ್ದಾರೆ. ಒಟ್ಟು 6 ಏಕದಿನ ವಿಶ್ವಕಪ್‌ನಲ್ಲಿ ಜೂಲನ್‌ ಭಾರತ ತಂಡ ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್‌ವೊಂದರಲ್ಲೇ 255 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್ ಆಗಿದ್ದಾರೆ.

AV Eye Hospital ad

12 ಟೆಸ್ಟ್, 203 ಏಕದಿನ ಹಾಗೂ 68 ಟಿ-20 ಪಂದ್ಯಗಳನ್ನಾಡಿರುವ ಗೋಸ್ವಾಮಿ, ಒಟ್ಟು 353 ವಿಕೆಟ್ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 1000 ರನ್, 50 ವಿಕೆಟ್ ಹಾಗೂ 50 ಕ್ಯಾಚ್ ಪಡೆದಿರುವ ಅಪರೂಪದ ದಾಖಲೆ ಜೂಲನ್ ಹೊಂದಿದ್ದಾರೆ. ತಮ್ಮ 23ನೇ ವಯಸ್ಸಿನಲ್ಲೇ 2006ರಲ್ಲಿ ಇಂಗ್ಲೆಂಡ್ ವಿರುದ್ಧ ಟೌಂಟನ್‌ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ ಕಬಳಿಸಿದ್ದರು. ಆ ಮೂಲಕ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್‌ ಪಡೆದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ತನ್ನದಾಗಿಸಿಕೊಂಡಿದ್ದರು.

ಬಾಲಿವುಡ್‌ನಲ್ಲಿ ಜೂಲನ್ ಜೀವನಾಧರಿತ ‘ಚಕ್ಡಾ ಎಕ್ಸ್ ಪ್ರೆಸ್’ ಎಂಬ ಹೆಸರಿನ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ದಿಗ್ಗಜ ಆಟಗಾರ್ತಿಯ ಪಾತ್ರದಲ್ಲಿ ಜೂಲನ್ ಪಾತ್ರದಲ್ಲಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ.

ಇಂಗ್ಲೆಂಡ್‌ ತಂಡದಿಂದ ʻಗಾರ್ಡ್‌ ಆಫ್‌ ಹಾನರ್‌ʼ

ತಮ್ಮ ವೃತ್ತಿಜೀವನದ ಅಂತಿಮ ಪಂದ್ಯದಲ್ಲಿ ಶನಿವಾರ, 9ನೇ ಕ್ರಮಾಂಕದಲ್ಲಿ ಜೂಲನ್‌ ಮೈದಾನಕ್ಕಿಳಿದಿದ್ದರು. ಈ ವೇಳೆ, ಇಂಗ್ಲೆಂಡ್ ತಂಡದ ಆಟಗಾರ್ತಿಯರು ಇಕ್ಕೆಲಗಳಲ್ಲಿ ಸಾಲಾಗಿ ನಿಂತು (ಗಾರ್ಡ್​ ಆಫ್​ ಹಾನರ್) ಚಪ್ಪಾಳೆ ತಟ್ಟುವ ಮೂಲಕ ಹಿರಿಯ ಆಟಗಾರ್ತಿಗೆ ಗೌರವ ಸಲ್ಲಿಸಿದರು. ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತಲೇ ಗೋಸ್ವಾಮಿ ಅವರು ಆಟಗಾರರ ಮಧ್ಯೆ ಸಾಗಿದರು. ಈ ವೇಳೆ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಜೂಲನ್‌ ಸಾಧನೆಗೆ ಅಭಿನಂದಿಸಿದರು.

ಟಾಸ್‌ಗೆ ಆಗಮಿಸಲು ವಿನಂತಿಸಿದ ಕೌರ್‌

ಶನಿವಾರದ ಪಂದ್ಯ ಆರಂಭಕ್ಕೂ ಮೊದಲು ಟಾಸ್​ಗಾಗಿ ತನ್ನ ಜೊತೆ ಬರುವಂತೆ  ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಜೂಲನ್‌ ಅವರಲ್ಲಿ ವಿನಂತಿಸಿದರು. ಹೀಗಾಗಿ ಟಾಸ್‌ ಕಾರ್ಯವನ್ನು ಜೂಲನ್​ ಗೋಸ್ವಾಮಿ ನೆರವೇರಿಸಿದರು.

ಕಣ್ಣೀರಿಟ್ಟ ಸಹ ಆಟಗಾತಿಯರು !

ಪಂದ್ಯ ಆರಂಭಕ್ಕೂ ಮೊದಲು ಭಾರತ ತಂಡದ ಎಲ್ಲ ಆಟಗಾರ್ತಿಯರು ಹಿರಿಯ ಆಟಗಾತಿಗೆ ಭಾವನಾತ್ಮಕ ವಿದಾಯ ಹೇಳಿದರು. ಹಲವು ವರ್ಷಗಳಿಂದ ಸಹ ಆಟಗಾರ್ತಿಯರಾದ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಮತ್ತು ಸ್ಮೃತಿ ಮಂದಾನ  ಜೂಲನ್‌ ಅವರನ್ನು ಮೈದಾನದಲ್ಲೇ ತಬ್ಬಿಕೊಂಡು ಕಣ್ಣೀರಿಟ್ಟರು.

ಈಡನ್ ಗಾರ್ಡನ್ಸ್‌ ಸ್ಟ್ಯಾಂಡ್‌ಗೆ ಗೋಸ್ವಾಮಿ ಹೆಸರು

ಜೂಲನ್‌ ಗೋಸ್ವಾಮಿ ಅವರು ಭಾರತೀಯ ಕ್ರಿಕೆಟ್‌ಗೆ ಸಲ್ಲಿಸಿರುವ ಸೇವೆಗೆ ಗೌರವ ಸಲ್ಲಿಸುವ ಸಲುವಾಗಿ, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿರುವ ಸ್ಟ್ಯಾಂಡ್‌ ಒಂದಕ್ಕೆ ಜೂಲನ್ ಗೋಸ್ವಾಮಿ ಹೆಸರಡಿಲಾಗುತ್ತಿದೆ. ಈ ವಿಷಯವನ್ನು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಸ್ಪಷ್ಟಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app