ಜಿಂಬಾಬ್ವೆ ಪ್ರವಾಸಕ್ಕೆ ಕನ್ನಡಿಗ ರಾಹುಲ್‌ ಸಾರಥ್ಯ

  • ಆಗಸ್ಟ್‌ 18ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭ
  • ರಾಹುಲ್‌ ಆಗಮನದ ಹಿನ್ನೆಲೆಯಲ್ಲಿ ಧವನ್‌ ಉಪನಾಯಕ

ಐಪಿಎಲ್‌ ಟೂರ್ನಿಯ ಬಳಿಕ ಗಾಯದ ಕಾರಣದಿಂದ ಟೀಮ್‌ ಇಂಡಿಯಾದಿಂದ ಹೊರಗುಳಿದಿರುವ ಕನ್ನಡಿಗ ಕೆಎಲ್‌ ರಾಹುಲ್‌, ಇದೀಗ ಸಂಪೂರ್ಣ ಫಿಟ್‌ ಆಗಿದ್ದು ತಂಡಕ್ಕೆ ಮರಳಿದ್ದಾರೆ.

ಜಿಂಬಾಬ್ವೆ ವಿರುದ್ಧ ಆಗಸ್ಟ್‌ 18ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರಾಹುಲ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇದಕ್ಕೂ ಮೊದಲು ಜಿಂಬಾಬ್ವೆ ವಿರುದ್ಧದ ಸರಣಿಗೆ ಪ್ರಕಟಿಸಲಾಗಿದ್ದ ತಂಡಕ್ಕೆ ಹಿರಿಯ ಆಟಗಾರ, ಎಡಗೈ ಬ್ಯಾಟ್ಸ್‌ಮನ್‌  ಶಿಖರ್‌ ಧವನ್‌ ಅವರನ್ನು ನಾಯಕನಾಗಿ ನೇಮಿಸಲಾಗಿತ್ತು. ಇದೀಗ ಧವನ್‌ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ರಾಹುಲ್‌, ಫಿಟ್ನೆಸ್‌ ಟೆಸ್ಟ್‌ ಪಾಸ್‌ ಆಗಿರುವ ಕುರಿತು ವೈದ್ಯಕೀಯ ತಂಡ ನೀಡಿರುವ ವರದಿ ಆಧರಿಸಿ ಬಿಸಿಸಿಐ, ನಾಯಕತ್ವ ಬದಲಾವಣೆಗೆ ಮುಂದಾಗಿದೆ.

ದಕ್ಷಿಣ ಆಫ್ರಿಕ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಕೆ.ಎಲ್‌ ರಾಹುಲ್‌ ಮುನ್ನಡೆಸಬೇಕಿತ್ತು. ಆದರೆ, ಈ ವೇಳೆ ಗಾಯಕ್ಕೆ ತುತ್ತಾಗಿದ್ದರಿಂದ ಟಿ20 ಸರಣಿಯಿಂದ ಹೊರ ಬಿದ್ದಿದ್ದರು. ಆ ಬಳಿಕ  ವಿದೇಶದಲ್ಲಿ ಅಂಡವಾಯು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಬೆಂಗಳೂರಿನ ನ್ಯಾಷ್‌ನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಕೆ ಎಲ್ ರಾಹುಲ್‌ ಸಂಪೂರ್ಣ ಚೇತರಿಸಿಕೊಂಡಿದ್ದರು. ಇನ್ನೇನು ವೆಸ್ಟ್‌ ಇಂಡೀಸ್ ಪ್ರವಾಸ ಕೈಗೊಳ್ಳಬೇಕು ಎನ್ನುವಷ್ಟರಲ್ಲಿ ರಾಹುಲ್‌ಗೆ ಕೋವಿಡ್-19 ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆರಿಬಿಯನ್‌ ಪ್ರವಾಸಕ್ಕೆ ಲಭ್ಯರಾಗಿರಲಿಲ್ಲ. ಇದೀಗ ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿರುವ ಕನ್ನಡಿಗ ರಾಹುಲ್‌, ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಪಾಕಿಸ್ತಾನದ ಇಬ್ಬರು ಬಾಕ್ಸರ್‌ಗಳು ನಾಪತ್ತೆ !

ನಿಯಮಿತ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಸೇರಿದಂತೆ ಅನುಭವಿ ಆಟಗಾರರಿಗೆ ಜಿಂಬಾಬ್ವೆ ವಿರುದ್ಧದ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್.

ನಿಮಗೆ ಏನು ಅನ್ನಿಸ್ತು?
0 ವೋಟ್