ಸುತ್ತಲೂ ಜನರಿದ್ದರೂ ಒಂಟಿತನ ಕಾಡುತ್ತಿತ್ತು ಎಂದ ವಿರಾಟ್‌ ಕೊಹ್ಲಿ!

  • ಸಾಕಷ್ಟು ಬಾರಿ ಒಂಟಿತನ ಕಾಡುತ್ತಿತ್ತು ಎಂದ ಟೀಮ್ ಇಂಡಿಯಾ ಆಟಗಾರ
  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ವರ್ಷಗಳನ್ನು ಪೂರೈಸಿದ ವಿರಾಟ್ ಕೊಹ್ಲಿ 

ಟೀಮ್‌ ಇಂಡಿಯಾದ ಪರವಾಗಿ ಆಡುವ ವೇಳೆ ಸಾಕಷ್ಟು ಬಾರಿ ಒಂಟಿತನ ಕಾಡುತ್ತಿತ್ತು ಎಂದು ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಪ್ರಮುಖ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ವೃತ್ತಜೀವನದ ಅಪರೂಪದ ಘಟನೆಗಳನ್ನು ಮೆಲುಕು ಹಾಕಿರುವ ಕೊಹ್ಲಿ, ‘ನನ್ನನ್ನು ಬೆಂಬಲಿಸುವ ಜನರು ಸುತ್ತಲು ಇದ್ದರೂ, ಒಂಟಿತನದ ಅನುಭವ ಉಂಟಾಗಿತ್ತು’ ಎಂದು ಹೇಳಿದ್ದಾರೆ.

ವೃತ್ತಿಜೀವನದಲ್ಲಿ ತಾವು ಎದುರಿಸಿದ ಒತ್ತಡ ಮತ್ತು ಅದರಿಂದ ಮಾನಸಿಕ ಆರೋಗ್ಯದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆಯೂ ಕೊಹ್ಲಿ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಕ್ರೀಡಾಪಟುಗಳಿಗೆ ಎದುರಾಗುವ ನಿರಂತರ ಒತ್ತಡ, ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಖಂಡಿತವಾಗಿಯೂ ಇದೊಂದು ಗಂಭೀರ ಸಮಸ್ಯೆ. ಎಲ್ಲ ಸಂದರ್ಭಗಳಲ್ಲೂ ನಾವು ಬಲಶಾಲಿಯಾಗಿ ನಿಲ್ಲಬೇಕೆಂದು ಬಯಸಿದರೂ, ಒತ್ತಡವು ನಿಮಗೆ ಹಿನ್ನಡೆ ಉಂಟು ಮಾಡಬಲ್ಲದು’ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ವರ್ಷ

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ವರ್ಷಗಳನ್ನು ಪೂರೈಸಿದ್ದಾರೆ. 2008ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ರನ್‌ ಮೆಷೀನ್‌, ಸದ್ಯ ಟೀಮ್‌ ಇಂಡಿಯಾದಲ್ಲಿ ಎಲ್ಲ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅತಿ ವೇಗವಾಗಿ 70 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ವಿಶ್ವ ದಾಖಲೆಯೂ ಅವರ ಹೆಸರಲ್ಲಿದೆ. ಈ ವಿಶೇಷ ಸಂದರ್ಭದಲ್ಲಿ ವಿರಾಟ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಏಷ್ಯಾ ಕಪ್‌ ಅರ್ಹತಾ ಪಂದ್ಯ | ಯುಎಇ ತಂಡಕ್ಕೆ ಕೇರಳದ ರಿಝ್ವಾನ್‌ ರೌಫ್‌ ನಾಯಕ

ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ 102 ಟೆಸ್ಟ್‌ ಪಂದ್ಯಗಳನ್ನು ಆಡಿರುವ ವಿರಾಟ್‌ ಕೊಹ್ಲಿ, 49.53ರ ಸರಾಸರಿಯಲ್ಲಿ 8074 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 262 ಪಂದ್ಯಗಳಲ್ಲೇ 12,344 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 43 ಶತಕಗಳು ಸೇರಿವೆ ಎಂಬುದು ವಿಶೇಷ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ವಿಶ್ವದಲ್ಲಿ ಮೂರನೇ ಅತ್ಯಧಿಕ ರನ್‌ ಸ್ಕೋರರ್‌ ಆಗಿರುವ ವಿರಾಟ್‌, 99 ಪಂದ್ಯಗಳಿಂದ 3308 ರನ್‌ಗಳನ್ನು ಬಾರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್