
- ಐಸಿಸಿ ಶ್ರೇಯಾಂಕದಲ್ಲಿ ಐದು ಸ್ಥಾನ ಜಿಗಿತ ಕಂಡ ಕೊಹ್ಲಿ
- ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್ಗೆ ಅಗ್ರಸ್ಥಾನ
ಪಾಕಿಸ್ತಾನದ ವಿರುದ್ಧ ಭಾನುವಾರ ನಡೆದ ವಿಶ್ವಕಪ್ ಟಿ20 ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದ ವಿರಾಟ್ ಕೊಹ್ಲಿ, ಬುಧವಾರ ಐಸಿಸಿ ಪ್ರಕಟಿಸಿದ ಟಿ20 ಶ್ರೇಯಾಂಕದಲ್ಲಿ ಐದು ಸ್ಥಾನ ಜಿಗಿತ ಕಾಣುವ ಮೂಲಕ 635 ಅಂಕಗಳೊಂದಿಗೆ 9ನೇ ರ್ಯಾಂಕ್ ಪಡೆದಿದ್ದಾರೆ.
ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕೊಹ್ಲಿ ಏಳನೇ ಶ್ರೇಯಾಂಕವನ್ನು ಹೊಂದಿದ್ದು, ಆ ಮೂಲಕ ಕ್ರಿಕೆಟ್ನ ಎರಡೂ ಆವೃತ್ತಿಗಳಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಬ್ಯಾಟ್ಸ್ಮನ್ ಆಗಿದ್ದಾರೆ.
ಟಿ20ಯ ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡರ್ ಶ್ರೇಯಾಂಕವನ್ನು ಐಸಿಸಿ ಬುಧವಾರ ಪ್ರಕಟಿಸಿದ್ದು, ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್ಮನ್ ಮುಹಮ್ಮದ್ ರಿಝ್ವಾನ್ 849 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.
Virat Kohli is a different gravy in T20Is, especially while chasing 🐐🫡#t20worldcup #viratkohli pic.twitter.com/E21yRaIH2M
— Sportskeeda (@Sportskeeda) October 26, 2022
ಈ ಸುದ್ದಿ ಓದಿದ್ದೀರಾ ? : ಟಿ20 ವಿಶ್ವಕಪ್ | ಅಫ್ಘಾನಿಸ್ತಾನ – ನ್ಯೂಝಿಲ್ಯಾಂಡ್ ನಡುವಿನ ಪಂದ್ಯ ರದ್ದು ; ಶುರುವಾಗಿದೆ ಅಂಕಪಟ್ಟಿ ಲೆಕ್ಕಾಚಾರ
ನ್ಯೂಝಿಲ್ಯಾಂಡ್ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ 831 ಅಂಕಗಳೊಂದಿಗೆ ಮೂರು ಸ್ಥಾನ ಜಿಗಿತ ಕಂಡು ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕಾನ್ವೆ 58 ಬಾಲ್ಗಳಲ್ಲಿ 92 ರನ್ಗಳನ್ನು ಬಾರಿಸಿದ್ದರು. ಎರಡನೇ ಸ್ಥಾನದಲ್ಲಿದ್ದ ಭಾರತದ ಸೂರ್ಯಕುಮಾರ್ ಯಾದವ್ (828 ಅಂಕ) ಮೂರನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಝಂ (799 ಅಂಕ) ಮತ್ತು ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ (762) ನಂತರದ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ಭುವನೇಶ್ವರ್ ಕುಮಾರ್ ಎರಡು ಸ್ಥಾನಗಳನ್ನು ಜಿಗಿತ ಕಂಡು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್, ಆಸ್ಟ್ರೇಲಿಯಾದ ಸೀಮರ್ ಜೋಶ್ ಹ್ಯಾಜಲ್ವುಡ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. ಅಲ್ರೌಂಡರ್ ವಿಭಾಗದಲ್ಲಿ ಭಾರತದ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನ ಪಡೆದಿದ್ದಾರೆ. ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಮೊದಲ ಮತ್ತು ಅಫ್ಘಾನಿಸ್ತಾನದ ನಾಯಕ ಮುಹಮ್ಮದ್ ನಬಿ ಎರಡನೇ ಸ್ಥಾನ ಪಡೆದಿದ್ದಾರೆ.
ಕಳಪೆ ಫಾರ್ಮ್ನಿಂದ ತೀವ್ರ ಟೀಕೆಗೆ ಒಳಗಾಗಿದ್ದ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಏಷ್ಯಾ ಕಪ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆಡಿದ 5 ಪಂದ್ಯಗಳಲ್ಲಿ 276 ರನ್ಗಳಿಸಿ, ಏಷ್ಯಾ ಕಪ್ ಕೂಟದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಅಫ್ಘಾನಿಸ್ತಾನದ ವಿರುದ್ಧದ ತಮ್ಮ ಚೊಚ್ಚಲ ಟಿ20 ಶತಕ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71ನೇ ಶತಕ ಗಳಿಸಿದ್ದರು.
ಪ್ರಸಕ್ತ ವರ್ಷ 15 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 33 ವರ್ಷದ ವಿರಾಟ್ ಕೊಹ್ಲಿ, 51.54ರ ಸರಾಸರಿಯಲ್ಲಿ 567 ರನ್ ಗಳಿಸಿದ್ದಾರೆ. ಅಕ್ಟೋಬರ್ 27ರಂದು ನಡೆಯುವ ಪಂದ್ಯದಲ್ಲಿ ಭಾರತ, ನೆದರ್ಲ್ಯಾಂಡ್ ತಂಡವನ್ನು ಎದುರಿಸಲಿದೆ.