- ಪ್ಯಾರಾ ಝಿವಾ ಎಂದು ಬರೆದು ಮೆಸ್ಸಿ ಹಸ್ತಾಕ್ಷರ
- 36 ವರ್ಷಗಳ ಬಳಿಕ ಅರ್ಜೆಂಟಿನಾ ಚಾಂಪಿಯನ್
ಕತಾರ್ನಲ್ಲಿ ಕೊನೆಗೊಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ಸಾರಥ್ಯದ ಅರ್ಜೆಂಟಿನಾ, 36 ವರ್ಷಗಳ ಬಳಿಕ ಒಟ್ಟಾರೆ 3ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತ್ತು. ಭಾರತ ತಂಡ ಈ ಮಹಾಕೂಟಕ್ಕೆ ಅರ್ಹತೆ ಪಡೆಯದೇ ಇದ್ದರೂ ಸಹ, ಅಭಿಮಾನಕ್ಕೇನೂ ಕೊರತೆ ಇರಲಿಲ್ಲ.
ಅರ್ಜೆಂಟಿನಾದ ನಾಯಕ ಲಿಯೋನೆಲ್ ಮೆಸ್ಸಿ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇರಳದ ಬಹುತೇಕ ಕಡೆ, ಕರ್ನಾಟಕದ ಕೆಲವೆಡೆ ಸೇರಿದಂತೆ ದೇಶದ ವಿವಿಧೆಡೆ ಮೆಸ್ಸಿಯ ಕಟೌಟ್ಗಳು, ಬ್ಯಾನರ್ಗಳು ವಿಶ್ವಕಪ್ ವೇಳೆ ರಾರಾಜಿಸಿದ್ದವು. ವಿಶ್ವಕಪ್ ಗೆದ್ದು ಅರ್ಜೆಂಟಿನಾಗೆ ಮರಳಿದ್ದ ಮೆಸ್ಸಿ ಮತ್ತು ಸಂಗಡಿಗರನ್ನು ಸ್ವಾಗತಿಸಲು 50 ಲಕ್ಷಕ್ಕೂ ಅಧಿಕ ಮಂದಿ ರಾಜಧಾನಿ ಬ್ಯೂನಸ್ ಐರಿಸ್ನಲ್ಲಿ ಜಮಾಯಿಸಿದ್ದು ಹೊಸ ದಾಖಲೆ ಬರೆದಿತ್ತು.
ಪ್ಯಾರಿಸ್ ಸೈಂಟ್ ಜರ್ಮನ್ ಕ್ಲಬ್ಗೆ ಜನವರಿಯಲ್ಲಿ ಮರಳಲಿರುವ ಮೆಸ್ಸಿ ಇದೀಗ ವಿಶ್ರಾಂತಿಯಲ್ಲಿದ್ದಾರೆ. ಈ ನಡುವೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಮಗಳು ಝಿವಾ ಧೋನಿಗೆ, ಲಿಯೋನೆಲ್ ಮೆಸ್ಸಿ, ಪ್ಯಾರಾ ಝಿವಾ ಎಂದು ಬರೆದು ಹಸ್ತಾಕ್ಷರದೊಂದಿಗೆ ಆಕಾಶ ನೀಲಿ- ಬಿಳಿ ಬಣ್ಣದ ಅರ್ಜೆಂಟಿನಾ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ.
ಈ ಜೆರ್ಸಿಯನ್ನು ಧರಿಸಿ, ಮೆಸ್ಸಿ ಹಸ್ತಾಕ್ಷರವನ್ನು ತೋರಿಸುತ್ತಿರುವ ಚಿತ್ರವನ್ನು ಝಿವಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೂಲ್ ಕ್ಯಾಪ್ಟನ್ ಧೋನಿ ಕೂಡ ಮೆಸ್ಸಿ ಮತ್ತು ಅರ್ಜೆಂಟಿನಾ ತಂಡದ ಅಭಿಮಾನಿ.
ಭಾರತದಲ್ಲಿ ವೀಕ್ಷಕರ ಸಂಖ್ಯೆಯಲ್ಲೂ ಕತಾರ್ ವಿಶ್ವಕಪ್ ಹೊಸ ದಾಖಲೆ ಬರೆದಿತ್ತು. 8 ಮೈದಾನಗಳಲ್ಲಿ 29 ದಿನಗಳ ಕಾಲ ನಡೆದ 64 ಪಂದ್ಯಗಳನ್ನು ಭಾರತದಲ್ಲಿ ಜಿಯೋ ಸಿನಿಮಾ ಆ್ಯಪ್ ಮೂಲಕ 10 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದರು. ಅರ್ಜೆಂಟಿನಾ- ಫ್ರಾನ್ಸ್ ನಡುವಿನ ಪ್ರಶಸ್ತಿ ಸುತ್ತಿನ ಹೋರಾಟವನ್ನು ಜಿಯೋ ಸಿನಿಮಾದಲ್ಲಿ 3.2 ಕೋಟಿ ಭಾರತೀಯರು ವೀಕ್ಷಿಸಿದ್ದರು.