ಏಷ್ಯಾ ಕಪ್‌ | ಚಾಂಪಿಯನ್‌ ಪಟ್ಟಕ್ಕಾಗಿ ಪಾಕಿಸ್ತಾನ- ಶ್ರೀಲಂಕಾ ಮುಖಾಮುಖಿ

  • ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರಶಸ್ತಿ ಹಣಾಹಣಿ
  • ಸೂಪರ್‌ 4 ಹಂತದ ಮೂರೂ ಪಂದ್ಯಗಳಲ್ಲೂ ಶ್ರೀಲಂಕಾಗೆ ಗೆಲುವು

ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಏಷ್ಯಾದ ಕ್ರಿಕೆಟ್‌ ಚಾಂಪಿಯನ್‌ ಯಾರು ಎಂಬುದು ಭಾನುವಾರ ನಿರ್ಧಾರವಾಗಲಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರಶಸ್ತಿ ಹಣಾಹಣಿ ನಡೆಯಲಿದ್ದು, ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ. ಫೈನಲ್‌ಗೆ ಪೂರ್ವಭಾವಿ ಎಂಬಂತೆ ಶುಕ್ರವಾರ ನಡೆದಿದ್ದ ಸೂಪರ್‌ 4 ಹಂತದ ತಮ್ಮ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ, ಪಾಕಿಸ್ತಾನವನ್ನು ಐದು ವಿಕೆಟ್‌ಗಳ ಅಂತರದಲ್ಲಿ ಮಣಿಸಿತ್ತು. ಆ ಮೂಲಕ ಫೈನಲ್‌ ಪಂದ್ಯಕ್ಕೆ ಆತ್ಮವಿಶ್ವಾಸದಿಂದಲೇ ಸಜ್ಜಾಗಿದೆ.

Eedina App

ಮೇಲ್ನೋಟಕ್ಕೆ ಪಾಕಿಸ್ತಾನ ಬಲಿಷ್ಠ ತಂಡವಾಗಿ ಕಂಡರೂ ಸಹ, ʻಮಿನಿ ಫೈನಲ್‌ನಲ್ಲಿ ಎದುರಾಗಿರುವ ಸೋಲು ತಂಡಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನಾಯಕ ಬಾಬರ್‌ ಅಝಂ ಬ್ಯಾಟಿಂಗ್‌ ವೈಫಲ್ಯ ತಂಡದ ಚಿಂತೆಗೆ ಕಾರಣವಾಗಿದೆ. ಆದರೆ ಪಾಕ್‌ ತಂಡದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ. ಶಾಹೀನ್‌ ಆಫ್ರೀದಿ ತಂಡದಿಂದ ಹೊರಗುಳಿದಿದ್ದರೂ ಸಹ, ನಸೀಮ್‌ ಶಾ, ಹಾರಿಸ್‌ ರೌಫ್‌ ಮತ್ತು ಮುಹಮ್ಮದ್‌ ಹಸ್ನೈನ್‌ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಡುರಾಂಡ್‌ ಕಪ್ | 120ನೇ ನಿಮಿಷದಲ್ಲಿ ಗೋಲು ದಾಖಲಿಸಿ ಸೆಮಿಫೈನಲ್‌ ಪ್ರವೇಶಿಸಿದ ಬೆಂಗಳೂರು ಎಫ್‌ಸಿ

ಮತ್ತೊಂದೆಡೆ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ ವಿರುದ್ಧ ಸೋಲಿನ ಆರಂಭ ಕಂಡರೂ ಆ ಬಳಿಕ ಆಮೋಘ ಆಟದ ಪ್ರದರ್ಶನ ನೀಡಿದೆ. ಸೂಪರ್‌4 ಹಂತದ ಮೂರೂ ಪಂದ್ಯಗಳಲ್ಲೂ ಗೆಲುವನ್ನು ತನ್ನದಾಗಿಸಿಕೊಂಡಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾ, ಪ್ರಮುಖ ಟೂರ್ನಿಯೊಂದರ ಫೈನಲ್‌ ಪ್ರವೇಶಿಸಿದೆ.‌ ದಾಸುನ್‌ ಶನಕ ಮತ್ತು ಸಂಗಡಿಗರು ಏಷ್ಯಾ ಕಪ್‌ ಗೆಲುವಿನ ಮೂಲಕ ರಾಜಕೀಯ ಬಿಕ್ಕಟ್ಟು ಮತ್ತು ಆರ್ಥಿಕ ಸಂಕಷ್ಟದಿಂದ ನಲುಗಿರುವ ದ್ವೀಪ ರಾಷ್ಟ್ರದ ಜನರ ನೋವನ್ನು ಸ್ವಲ್ಪ ಮಟ್ಟಿಗೆ ಮರೆಸುವ ನಿರೀಕ್ಷೆಯಲ್ಲಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಈವರೆಗೂ 22 ಬಾರಿ ಮುಖಾಮುಖಿಯಾಗಿದ್ದು, 13 ಬಾರಿ ಪಾಕಿಸ್ತಾನ ಗೆಲುವಿನ ನಗೆ ಬೀರಿದ್ದರೆ, 9 ಬಾರಿ ಶ್ರೀಲಂಕಾ ಮೇಲುಗೈ ಸಾಧಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app