ಬ್ರಿಜ್‌ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಮೇರಿಕೋಮ್ ನೇತೃತ್ವದಲ್ಲಿ ತನಿಖೆ

  • ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಸಮಿತಿಗೆ ಸೂಚನೆ
  • ಫೆಡರೇಷನ್‌ನ ದೈನಂದಿನ ವ್ಯವಹಾರಗಳ ಮೇಲ್ನೋಟ

ಭಾರತ ಕುಸ್ತಿ ಫೆಡರೇಷನ್‌, ಡಬ್ಲ್ಯೂಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಕೇಂದ್ರ ಸರ್ಕಾರ ನೇಮಿಸಿರುವ ಮೇಲ್ವಿಚಾರಣಾ ಸಮಿತಿಯನ್ನು ಮಹಿಳಾ ಬಾಕ್ಸರ್‌ ಎಂ ಸಿ ಮೇರಿಕೋಮ್ ಮುನ್ನಡೆಸಲಿದ್ದಾರೆ. ಈ ಕುರಿತು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸೋಮವಾರ ಆದೇಶ ಹೊರಡಿಸಿದ್ದಾರೆ.

ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮುರ್ಗುಂಡೆ, ಟಿಒಪಿಎಸ್‌ ಮಾಜಿ ಸಿಇಒ ರಾಜಗೋಪಾಲನ್ ಹಾಗೂ ಸಾಯ್‌ನ ಮಾಜಿ ಕಾರ್ಯಕಾರಿ ನಿರ್ದೇಶಕಿ ರಾಧಿಕಾ ಶ್ರೀಮನ್ ಅವರು ಸಮಿತಿಯಲ್ಲಿದ್ದಾರೆ.

ಮುಂದಿನ ಒಂದು ತಿಂಗಳ ಅವಧಿಗೆ ಮೇರಿಕೋಮ್ ನೇತೃತ್ವದ ಮೇಲ್ವಿಚಾರಣಾ ಸಮಿತಿಯು, ಭಾರತ ಕುಸ್ತಿ ಫೆಡರೇಷನ್‌ನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ?: ಹಾಕಿ ವಿಶ್ವಕಪ್‌ | ಕ್ವಾರ್ಟರ್‌ ಫೈನಲ್‌ ಕಾಣದೆ ಹೊರನಡೆದ ಆತಿಥೇಯ ಭಾರತ !

ʻತನಿಖೆಯು ಪೂರ್ಣಗೊಳ್ಳುವವರೆಗೆ ಬ್ರಿಜ್‌ಭೂಷಣ್ ಶರಣ್ ಸಿಂಗ್, ಡಬ್ಲ್ಯೂಎಫ್‌ಐನಲ್ಲಿ ಯಾವುದೇ ಅಧಿಕಾರ ಚಲಾಯಿಸುವಂತಿಲ್ಲ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಅಧ್ಯಕ್ಷರ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಗಳ ತನಿಖೆ ಮಾಡುವುದರ ಜೊತೆಗೆ ಫೆಡರೇಶನ್‌ ದೈನಂದಿನ ಚಟುವಟಿಕೆಗಳನ್ನು ಮೇಲ್ವಿಚಾರಣಾ ಸಮಿತಿಯು ನೋಡಿಕೊಳ್ಳಲಿದೆʼ ಎಂದು ಠಾಕೂರ್‌ ಸೋಮವಾರ ತಿಳಿಸಿದ್ದಾರೆ.

ಕುಸ್ತಿಪಟುಗಳ ಆರೋಪದ ಕುರಿತು ತನಿಖೆ ನಡೆಸಲು ಭಾರತ ಒಲಿಂ‍‍‍ಪಿಕ್‌ ಸಂಸ್ಥೆ, ಐಒಎ ನೇಮಿಸಿರುವ ಏಳು ಸದಸ್ಯರ ಸಮಿತಿಯಲ್ಲೂ ಮೇರಿಕೋಮ್ ಮತ್ತು ಕುಸ್ತಿಪಟು ಯೋಗೇಶ್ವರ್ ದತ್ ಸದಸ್ಯರಾಗಿದ್ದಾರೆ.

ಬಿಜೆಪಿ ಸಂಸದ ಬ್ರಿಜ್‌ ಭೂಷಣ್, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಫೆಡರೇಷನ್‌ನಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ದೇಶದ ಖ್ಯಾತನಾಮ ಕುಸ್ತಿಪಟುಗಳು ದೆಹಲಿಯ ಜಂತರ್‌ಮಂತರ್‌ನಲ್ಲಿ ಮೂರು ದಿನಗಳ ಕಾಲ ಧರಣಿ ನಡೆಸಿದ್ದರು.

ಶುಕ್ರವಾರ ರಾತ್ರಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮತ್ತು ಭಾರತ ಒಲಿಂ‍‍‍ಪಿಕ್‌ ಸಂಸ್ಥೆ, ಒಎಐ ಅಧ್ಯಕ್ಷೆ ಪಿ ಟಿ ಉಷಾ ಅವರನ್ನು ಭೇಟಿ ಮಾಡಿದ್ದ ಕುಸ್ತಪಟುಗಳ ತಂಡ, ಬ್ರಿಜ್‌ಭೂಷಣ್‌ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಶೀಘ್ರದಲ್ಲೇ ಸಮಿತಿ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದರು. ಸೂಕ್ತ ಭರವಸೆ ದೊರೆತ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟಿದ್ದರು. ಟೋಕಿಯೊ ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗಳಾದ ರವಿ ದಹಿಯಾ, ಬಜರಂಗ್‌ ಪೂನಿಯಾ, ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ವಿಶ್ವ ಚಾಂಪಿಯನ್‌ಷಿಪ್‌ನ ಪದಕ ವಿಜೇತರಾದ ವಿನೇಶಾ ಪೋಗಟ್‌ ಮತ್ತು ದೀಪಕ್‌ ಪೂನಿಯಾ ಸೇರಿದಂತೆ ನೂರಾರು ಕುಸ್ತಿಪಟುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app