
- ಸಂಪೂರ್ಣವಾಗಿ ʻಮೆಸ್ಸಿ ಶೋʼ ಆದ ಫೈನಲಿಸಿಮಾ
- 1993ರಲ್ಲಿ ಫೈನಲಿಸಿಮಾ ಪ್ರಶಸ್ತಿ ಗೆದ್ದಿದ್ದ ಮೆರಡೋನಾ
ಚಾಂಪಿಯನ್ನರ ಕದನ ಫೈನಲಿಸಿಮಾದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವು, ಇಟಲಿ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಏಕಪಕ್ಷೀಯವಾಗಿ ಸೋಲಿಸಿದೆ.
ಲಂಡನ್ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ ಇಟಲಿ ವಿರುದ್ಧ, ಮೆಸ್ಸಿ ಮುಂದಾಳತ್ವದ ದಕ್ಷಿಣ ಅಮೆರಿಕದ ಚಾಂಪಿಯನ್ ಅರ್ಜೆಂಟೀನಾ ಸಂಪೂರ್ಣ ಮೇಲುಗೈ ಸಾಧಿಸಿ ʻಕಪ್ ಆಫ್ ಚಾಂಪಿಯನ್ಸ್ʼ ಗೆದ್ದು ಬೀಗಿದೆ. ಆ ಮೂಲಕ 11 ತಿಂಗಳ ಅವಧಿಯಲ್ಲಿ ಪುಟ್ಬಾಲ್ ದಿಗ್ಗಜ, ಅಭಿಮಾನಿಗಳ ಆರಾಧ್ಯ ದೈವ ಲಿಯೊನೆಲ್ ಮೆಸ್ಸಿ 2ನೇ ಅಂತಾರಾಷ್ಟ್ರೀಯ ಟ್ರೋಫಿ ಗೆದ್ದು ಸಂಭ್ರಮಿಸಿದ್ದಾರೆ.
ಫೈನಲಿಸಿಮಾಗೂ ಮೊದಲು ಅರ್ಜೆಂಟೀನಾ ರಾಷ್ಟ್ರೀಯ ತಂಡ ಮೆಸ್ಸಿ ನೇತೃತ್ವದಲ್ಲಿ ಪ್ರತಿಷ್ಠಿತ ಕೋಪಾ ಅಮೇರಿಕಾ ಟೂರ್ನಿಯ ಚಾಂಪಿಯನ್ ಆಗಿ ಮೆರೆದಿತ್ತು. ಮತ್ತೊಂದೆಡೆ ಕಳೆದ ವರ್ಷ ಇದೇ ಮೈದಾನದಲ್ಲಿ ಜಾರ್ಜಿಯೊ ಚಿಲ್ಲಿನಿ ಸಾರಥ್ಯದಲ್ಲಿ ಇಟಲಿ, ಇಂಗ್ಲೆಂಡ್ ತಂಡವನ್ನು ಮಣಿಸಿ ಪ್ರತಿಷ್ಠಿತ ಯೂರೋಪ್ ಪ್ರಶಸ್ತಿ ಗೆದ್ದಿತ್ತು.
✅ Copa America
— VOLE (@VOLEapp) June 2, 2022
✅ Finalissima
⏳Next Mission: World Cup pic.twitter.com/NlOvH3t2FV
ಸಂಪೂರ್ಣವಾಗಿ ʻಮೆಸ್ಸಿ ಶೋʼ ಆಗಿದ್ದ ಪಂದ್ಯದ 28ನೇ ನಿಮಿಷದಲ್ಲಿ ಲೌಟಾರೊ ಮಾರ್ಟಿನೆಝ್ ಗೋಲಿನ ಖಾತೆ ತೆರೆದರು. ಆ ಬಳಿಕ ಮೊದಲಾರ್ಧದ ಹೆಚ್ಚುವರಿ ಅವಧಿಯ (45+1) ಅಂತಿಮ ಕ್ಷಣದಲ್ಲಿ ಮಾರ್ಟಿನೆಝ್ ನೀಡಿದ ಪಾಸ್ ಪಡೆದ ಅನುಭವಿ ಆಟಗಾರ ಡಿ ಮರಿಯ, ಏಕಾಂಗಿಯಾಗಿ ಮುನ್ನುಗ್ಗಿ, ಚಿಪ್ ಮಾಡುವ ಮೂಲಕ ದ್ವಿತೀಯ ಗೋಲು ದಾಖಲಿಸಿದರು. 2-0 ಗೋಲುಗಳ ಮುನ್ನಡೆಯೊಂದಿಗೆ ದ್ವಿತೀಯಾರ್ಧದಲ್ಲಿ ಮೈದಾನಕ್ಕಿಳಿದ ಅರ್ಜೆಂಟೀನಾ, ನಂತರದಲ್ಲೂ ತನ್ನ ಚುರುಕಿನ ದಾಳಿಯನ್ನು ಮುಂದುವರಿಸಿತಾದರೂ ಗುರಿ ಕಾಣಲಿಲ್ಲ. ಪಂದ್ಯ ಇನ್ನೇನು ಮುಗಿಯಿತು ಎನ್ನುವಷ್ಟರಲ್ಲಿ ಮೆಸ್ಸಿಯ ಕಲಾತ್ಮಕ ಕಾಲ್ಚೆಳಕ ತಂಡಕ್ಕೆ ಮೂರನೇ ಗೋಲು ದಾಖಲಿಸುವಲ್ಲಿ ನೆರವಾಯಿತು. ಗೊಲು ಬಲೆಯ ಸಮೀಪದಲ್ಲಿ ಮೆಸ್ಸಿಯಿಂದ ಪಾಸ್ ಪಡೆದ ಬದಲಿ ಆಟಗಾರ ಪೌಲೊ ಡೈಬಾಲ ಚೆಂಡನ್ನು ಸುಲಭವಾಗಿ ಗುರಿ ಮುಟ್ಟಿಸಿದರು.
ರಾಷ್ಟ್ರೀಯ ತಂಡದ ಪರ 161ನೇ ಪಂದ್ಯವನ್ನಾಡಿದ 34 ವರ್ಷದ ಫುಟ್ಬಾಲ್ ಮಾಂತ್ರಿಕ ಮೆಸ್ಸಿ, 45ನೇ ಫೈನಲ್ ಪಂದ್ಯದಲ್ಲಿ 46 ಗೋಲಿನ ಕಾಣಿಕೆ ನೀಡಿದ್ದಾರೆ. 1993ರಲ್ಲಿ ದಿಗ್ಗಜ ಆಟಗಾರ ಮೆರಡೋನಾ ನಾಯಕತ್ವದಲ್ಲಿ ಅರ್ಜೆಂಟೀನಾ, ಕೊನೆಯದಾಗಿ ಫೈನಲಿಸಿಮಾ ಪ್ರಶಸ್ತಿ ಗೆದ್ದಿತ್ತು. ಅದಾದ ಬಳಿಕ ಮೆಸ್ಸಿ ನಾಯಕತ್ವದಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಪಂದ್ಯದಲ್ಲಿ ಇವರಿಬ್ಬರ ಜೆರ್ಸಿ ಸಂಖ್ಯೆ 10 ಆಗಿತ್ತು ಎನ್ನುವುದು ಕೂಡ ವಿಶೇಷ.
ಕಳೆದ ಜುಲೈನಲ್ಲಿ ಮೆಸ್ಸಿ ಸಾರಥ್ಯದಲ್ಲಿ ಅರ್ಜೆಂಟೀನಾ, ದಾಖಲೆಯ 15ನೇ ಕೋಪಾ ಅಮೇರಿಕಾ ಟೂರ್ನಿಯ ಚಾಂಪಿಯನ್ ಆಗಿತ್ತು.
Things you love to see! 🤍💙🐐#Finalissima #LionelMessi #Argentina pic.twitter.com/QWrUxJyLuY
— Sportskeeda (@Sportskeeda) June 1, 2022
ಮತ್ತೊಂದೆಡೆ ವೃತ್ತಿ ಜೀವನದ ಅಂತಿಮ ಪಂದ್ಯವನ್ನಾಡಿದ ಇಟಲಿ ತಂಡದ ನಾಯಕ, ಹಿರಿಯ ಆಟಗಾರ ಜಾರ್ಜಿಯೊ ಚಿಲ್ಲಿನಿ ಪಾಲಿಗೆ ಸ್ಮರಣೀಯ ವಿದಾಯ ದೊರಕಲಿಲ್ಲ. 18 ವರ್ಷಗಳಿಂದ ಇಟಲಿಯ ರಾಷ್ಟ್ರೀಯ ತಂಡದ ಭಾಗವಾಗಿರುವ 37 ವರ್ಷದ ಚಿಲ್ಲಿನಿ, 117 ಪಂದ್ಯಗಳಲ್ಲಿ ನೀಲಿಪಡೆಯನ್ನು ಮುನ್ನಡೆಸಿದ್ದಾರೆ. ಈ ವರ್ಷಾಂತ್ಯದಲ್ಲಿ ಖತಾರ್ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿಯೂ ಇಟಲಿ ವಿಫಲವಾಗಿತ್ತು.
ಅರ್ಜೆಂಟೀನಾ ಮತ್ತು ಇಟಲಿ ತಂಡಗಳು ಇದುವರೆಗೂ ಒಟ್ಟು 16 ಬಾರಿ ಮುಖಾಮುಖಿಯಾಗಿದ್ದು, ಬುಧವಾರದ ಪಂದ್ಯದ ಬಳಿಕ ಉಭಯ ತಂಡಗಳು ತಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದಂತಾಗಿದೆ.