ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

Cricket
  • 23 ವರ್ಷಗಳ ಸುಧೀರ್ಘ ಕ್ರಿಕೆಟ್ ಪ್ರಯಾಣಕ್ಕೆ ತೆರೆ
  • ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ, ಹಿರಿಯ ಆಟಗಾರ್ತಿ ಮಿಥಾಲಿ ರಾಜ್, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಆವೃತ್ತಿಗಳಿಗೂ ನಿವೃತ್ತಿ ಘೋಷಿಸಿದ್ದಾರೆ.

1999 ರಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ ಮಿಥಾಲಿ, ದೇಶದಲ್ಲಿ ಮಹಿಳಾ ಕ್ರಿಕೆಟ್‌ಅನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ್ತಿಯಾಗಿದ್ದಾರೆ. 

Eedina App

37 ವರ್ಷ ವಯಸ್ಸಿನ ದಿಗ್ಗಜ ಆಟಗಾರ್ತಿ, 23 ವರ್ಷಗಳ ತಮ್ಮ ಸುಧೀರ್ಘ ಕ್ರಿಕೆಟ್ ಪ್ರಯಾಣಕ್ಕೆ ತೆರೆ ಎಳೆದಿದ್ದಾರೆ. ಟೆಸ್ಟ್-ಏಕದಿನ-ಟಿ-20 ಆವೃತ್ತಿಗಳಿಂದ ನಿವೃತ್ತಿಯಾಗುತ್ತಿರುವುದಾಗಿ ಮಿಥಾಲಿ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. 

"ತಂಡವು ಕೆಲವು ಪ್ರತಿಭಾವಂತ ಯುವ ಆಟಗಾರರ ಕೈಯಲ್ಲಿದೆ ಮತ್ತು ಭಾರತೀಯ ಕ್ರಿಕೆಟ್‌ನ ಭವಿಷ್ಯವು ಉಜ್ವಲವಾಗಿರುವುದರಿಂದ ನನ್ನ ಆಟದ ವೃತ್ತಿಜೀವನಕ್ಕೆ ತೆರೆ ಎಳೆಯಲು ಇದು ಸೂಕ್ತ ಸಮಯ ಎಂದು ಭಾವಿಸುತ್ತೇನೆ. ಎಲ್ಲಾ ಪ್ರಯಾಣಗಳಂತೆ, ಇದು ಕೂಡ ಕೊನೆಗೊಳ್ಳುತ್ತಿದೆ. ಇಂದು ಅಂತರರಾಷ್ಟ್ರೀಯ ಕ್ರಿಕೆಟ್ ಎಲ್ಲಾ ಮಾದರಿಗಳಿಂದಲೂ ನಾನು ನಿವೃತ್ತಿಯಾಗುವ ದಿನ. ಪ್ರತಿ ಬಾರಿ ನಾನು ಮೈದಾನಕ್ಕೆ ಕಾಲಿಟ್ಟಾಗ, ಭಾರತವನ್ನು ಗೆಲ್ಲಿಸಲು ನನ್ನ ಸಾಮರ್ಥ್ಯ ಮೀರಿ ಪ್ರಯತ್ನಿಸಿದ್ದೇನೆ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಮತ್ತು ನಾಯಕಿಯಾಗಿ ಮುನ್ನಡೆಸುವ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತ ಬಿಸಿಸಿಐ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಪ್ರತಿಯೊಬ್ಬ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆʼʼ  ಎಂದು  ಎಂದು ಮಿಥಾಲಿ ಪೋಸ್ಟ್ ಮಾಡಿದ್ದಾರೆ.

AV Eye Hospital ad

ಮಾರ್ಚ್‌ನಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್‌ನಲ್ಲಿ ಮಿಥಾಲಿ ಕೊನೆಯದಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ನಾಕೌಟ್ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದ್ದ ಭಾರತ, ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು. 

ಮಹಿಳಾ ಕ್ರಿಕೆಟ್‌ನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಿಥಾಲಿ ಹೆಸರಿನಲ್ಲಿದೆ. 1999ರಲ್ಲಿ ಮಿಲ್ಟನ್ ಕೇನ್ಸ್‌ನಲ್ಲಿ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಮಿಥಾಲಿ, ಒಟ್ಟು 232 ಪಂದ್ಯಗಳನ್ನಾಡಿದ್ದು,  50.68 ರ ಸರಾಸರಿಯಲ್ಲಿ 7,805 ರನ್ ಗಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app