ಮೊಯಿನ್‌ ಅಲಿ ಸಾರಥ್ಯದಲ್ಲಿ 17 ವರ್ಷದ ಬಳಿಕ ಇಂಗ್ಲೆಂಡ್‌ ತಂಡದ ಪಾಕ್‌ ಪ್ರವಾಸ

  • ಸೆಪ್ಟಂಬರ್‌ 20ರಿಂದ ಆರಂಭವಾಗಲಿರುವ ಟಿ20 ಸರಣಿ
  • 2005ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್‌

ಸುದೀರ್ಘ 17 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ಕ್ರಿಕೆಟ್‌ ತಂಡವನ್ನು ಹಿರಿಯ ಆಲ್‌ರೌಂಡರ್‌ ಮೊಯಿನ್‌ ಅಲಿ ಮುನ್ನಡೆಸುವ ಸಾಧ್ಯತೆಯಿದೆ. ಪೂರ್ಣಾವಧಿ ನಾಯಕ ಜಾಸ್‌ ಬಟ್ಲರ್‌ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದು, ಈ ಹಿನ್ನೆಲೆಯಲ್ಲಿ ಸೆಪ್ಟಂಬರ್‌ 20ರಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ನಾಯಕನ ಜವಾಬ್ದಾರಿ ಅಲಿ ಹೆಗಲೇರಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್‌ ಮಾರ್ಗನ್‌ ನಿವೃತ್ತಿ ಘೋಷಿಸಿದ ಬಳಿಕ, ಮೊಯಿನ್‌ ಅಲಿ ಅವರನ್ನು ಇಂಗ್ಲೆಂಡ್‌ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಈ ನಡುವೆ ನಾಲ್ಕು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅಲಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. 36 ವರ್ಷದ ಮೊಯಿನ್‌ ಅಲಿ,  ಪಾಕಿಸ್ತಾನ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ ಅನುಭವವನ್ನೂ ಹೊಂದಿದ್ದಾರೆ.

2005ರಲ್ಲಿ ಇಂಗ್ಲೆಂಡ್‌ ತಂಡ ಕೊನೇಯದಾಗಿ ಪಾಕಿಸ್ತಾನದಲ್ಲಿ ಪಂದ್ಯವನ್ನಾಡಿತ್ತು. ಆ ಬಳಿಕ ಭದ್ರತೆಯ ಕಾರಣವೊಡ್ಡಿ ಪಾಕ್‌ ಪ್ರವಾಸದಿಂದ ಆಂಗ್ಲನ್ನರು ಹಿಂದೆ ಸರಿದಿದ್ದರು. ಈ ನಡುವೆ ನಿಗದಿಯಾಗಿದ್ದ ಎಲ್ಲ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು.

ಈ ಸುದ್ದಿ ಓದಿದ್ದೀರಾ ? : ಏಷ್ಯಾ ಕಪ್‌| ಸೂಪರ್‌-4 ಹಂತಕ್ಕೇರುವ ತವಕದಲ್ಲಿ ಟೀಮ್‌ ಇಂಡಿಯಾ

ʻದಿ ಹಂಡ್ರೆಡ್‌ʼ ಟೂರ್ನಿಯಲ್ಲಿ ಮ್ಯಾಂಚೆಸ್ಟರ್‌ ಒರಿಜಿನಲ್ಸ್‌ ತಂಡದ ಪರ ಆಡುವ ವೇಳೆ ಬಟ್ಲರ್‌ ಗಾಯಕ್ಕೆ ತುತ್ತಾಗಿದ್ದರು.  ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ  ಸಂಪೂರ್ಣ ಫಿಟ್‌ ಆಗುವ ಉದ್ದೇಶದಿಂದ ಬಟ್ಲರ್‌, ಪಾಕ್‌ ಪ್ರವಾಸದಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ- ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಸೆಪ್ಟಂಬರ್‌ 8ರಂದು ಆರಂಭವಾಗಲಿದೆ. ಟೆಸ್ಟ್‌ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಮೂರನೇ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಇದಾದ ಬಳಿಕ ಸೆಪ್ಟಂಬರ್‌ 14 ರಂದು ಇಂಗ್ಲೆಂಡ್‌ ತಂಡ ಪಾಕಿಸ್ತಾನಕ್ಕೆ ತೆರಳಲಿದೆ.  ಸೆಪ್ಟಂಬರ್‌ 20ರಿಂದ 7 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಆ ಬಳಿಕ ಮೂರು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ.

Image

ಪಾಕಿಸ್ತಾನ ವಿರುದ್ಧದ ಟಿ20 ಸರಣಿಗೆ ಕೆಲ ದಿನಗಳಲ್ಲೇ  ಇಂಗ್ಲೆಂಡ್‌ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಪ್ರಮುಖ ಆಟಗಾರರಾದ ಜಾನಿ ಬೈರ್ ಸ್ಟೋ, ಬೆನ್‌ ಸ್ಟೋಕ್ಸ್‌ ಹಾಗೂ ಗಾಯದ ಕಾರಣದಿಂದ ಲಿಯಾಮ್‌ ಲಿವಿಂಗ್‌ಸ್ಟನ್‌ ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ.

ಇತ್ತೀಚಿನ ದಿನಗಳಲ್ಲಿ ಆರಂಭಿಕನಾಗಿ ವೈಫಲ್ಯ ಕಾಣುತ್ತಿರುವ ಜೇಸನ್ ರಾಯ್ ಬದಲಿಗೆ ಇತರ ಆಟಗಾರರಿಗೆ ಸ್ಥಾನ ನೀಡುವ ಕುರಿತು ಇಸಿಬಿ ಚಿಂತನೆ ನಡೆಸಿದೆ. ರಾಯ್‌ ಹೊರಗುಳಿದರೆ ಅವರ ಸ್ಥಾನಕ್ಕೆ  ಫಿಲ್ ಸಾಲ್ಟ್,  ವಿಲ್ ಸ್ಮೀಡ್, ವಿಲ್ ಜ್ಯಾಕ್ಸ್, ಅಲೆಕ್ಸ್ ಹೇಲ್ಸ್  ನಡುವೆ ಪೈಪೋಟಿ ಏರ್ಪಡಲಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್