ಟಿ20 ವಿಶ್ವಕಪ್‌ | ಮತ್ತೊಂದು ವಿಶ್ವದಾಖಲೆ ಮಾಡಿದ ವಿರಾಟ್‌ ಕೊಹ್ಲಿ

  • 107 ಇನ್ನಿಂಗ್ಸ್‌, 36 ಅರ್ಧಶತಕ 1 ಶತಕ
  • ಟಿ20 ವಿಶ್ವಕಪ್‌ನ 6 ಪಂದ್ಯಗಳಲ್ಲಿ 326 ರನ್‌  

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4 ಸಾವಿರ ರನ್‌ ಪೂರೈಸಿದ ಮೊದಲ ಬ್ಯಾಟರ್‌ ಎಂಬ ಕೀರ್ತಿಗೆ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಕೊಹ್ಲಿ , ಈ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.

ಅಡಿಲೇಡ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲು ಬ್ಯಾಟ್‌ ಮಾಡಿದ್ದ ಟೀಮ್‌ ಇಂಡಿಯಾ 6 ವಿಕೆಟ್‌ ನಷ್ಟದಲ್ಲಿ 168 ರನ್‌ ಗಳಿಸಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕೊಹ್ಲಿ, 40 ಎಸೆತಗಳಲ್ಲಿ 50 ರನ್‌ಗಳಿಸಿ ಜೋರ್ಡಾನ್‌ಗೆ ವಿಕೆಟ್‌ ಒಪ್ಪಿಸಿದ್ದರು. ಮಹತ್ವದ ಪಂದ್ಯದಲ್ಲಿ 43 ರನ್‌ ತಲುಪುತ್ತಲೇ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡರು.

Eedina App

107 ಇನ್ನಿಂಗ್ಸ್‌ಗಳಲ್ಲಿ  (114 ಪಂದ್ಯ) 36 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 53. 34 ಸರಾಸರಿಯಲ್ಲಿ ಕೊಹ್ಲಿ 4000 ರನ್‌ ತಲುಪಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ ? : ಟಿ20 ವಿಶ್ವಕಪ್‌ ಸೆಮಿಫೈನಲ್‌ | 10 ವಿಕೆಟ್‌ ಅಂತರದಲ್ಲಿ ಭಾರತವನ್ನು ಬಗ್ಗು ಬಡಿದ ಬಟ್ಲರ್‌ ಬಳಗ

ಯುಎಇಯಲ್ಲಿ ನಡೆದ ಏಷ್ಯಾಕಪ್‌ ಮತ್ತು ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಸೆಮಿಫೈನಲ್‌ ಸೇರಿದಂತೆ ಒಟ್ಟು 6 ಪಂದ್ಯಗಳಲ್ಲಿ 4 ಅರ್ಧಶತಕಗಳ ನೆರವಿನಿಂದ 326 ರನ್‌ಗಳಿಸಿದ್ದಾರೆ.  

ಟಿ20 ವಿಶ್ವಕಪ್‌ ಕೂಟದಲ್ಲಿ ಗರಿಷ್ಠ ರನ್‌ ಸರದಾರ

ಸೂಪರ್‌ 12 ಹಂತದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ದಾಖಲಿಸಿ ಅಬ್ಬರಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಬಂದ ಕೊಹ್ಲಿ, 44 ಎಸೆತಗಳಲ್ಲಿ ಅಜೇಯ 64 ರನ್‌ ಗಳಿಸಿದ್ದರು. ಕೊಹ್ಲಿ 16 ರನ್‌ ತಲುಪಿದಾಗ, ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಅತಿಹೆಚ್ಚು ರನ್‌ ದಾಖಲಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡರು. ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳು ಕೊಹ್ಲಿ ಖಾತೆಯಲ್ಲಿವೆ.

ವೃತ್ತಿ ಜೀವನದ ತಮ್ಮ 25ನೇ ಟಿ20 ವಿಶ್ವಕಪ್‌ ಪಂದ್ಯದಲ್ಲಿ (23ನೇ ಇನ್ನಿಂಗ್ಸ್‌) ಕೊಹ್ಲಿ, 88.75ರ ಸರಾಸರಿಯಲ್ಲಿ 1,065 ರನ್ ಗಳಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ (1,016 ರನ್‌, 31 ಪಂದ್ಯ) ಸಾಧನೆಯನ್ನು ಟೀಮ್‌ ಇಂಡಿಯಾದ ಮಾಜಿ ನಾಯಕ ಹಿಂದಿಕ್ಕಿದ್ದಾರೆ. 33 ಪಂದ್ಯಗಳಲ್ಲಿ 965 ರನ್‌ ಗಳಿಸಿರುವ ಕ್ರಿಸ್ ಗೇಲ್ ಮೂರನೇ ಮತ್ತು 921 ರನ್‌ಗಳೊಂದಿಗೆ ಟೀಮ್‌ ಇಂಡಿಯಾದ ನಾಯಕ ರೋಹಿತ್ ಶರ್ಮಾ 4ನೇ ಸ್ಥಾನದಲ್ಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
12 ವೋಟ್
eedina app