ಟಿ20 ವಿಶ್ವಕಪ್‌ |  ಟೀಮ್‌ ಇಂಡಿಯಾ ಹೊರಬಿದ್ದ ಬೆನ್ನಲ್ಲೇ ಧೋನಿಯನ್ನು ನೆನೆಯುತ್ತಿರುವ ನೆಟ್ಟಿಗರು!

  • 9 ಐಸಿಸಿ ಫೈನಲ್‌, 3 ಬಾರಿ ಚಾಂಪಿಯನ್‌
  • ಧೋನಿ ನಿರ್ಗಮನದ ಬಳಿಕ ಸರಣಿ ಸೋಲು

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ, ಟೀಮ್‌ ಇಂಡಿಯಾದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದ ಬಟ್ಲರ್‌-ಹೇಲ್ಸ್‌ ಜೋಡಿ, ತಂಡವನ್ನು ಭರ್ಜರಿ 10 ವಿಕೆಟ್‌ ಅಂತರದ ಗೆಲುವಿನೆಡೆಗೆ ಮುನ್ನಡೆಸಿದ್ದರು.

ತುಸು ಪೈಪೋಟಿಯನ್ನೂ ನೀಡದೆ ಶರಣಾದ ಟೀಮ್‌ ಇಂಡಿಯಾ ವಿರುದ್ಧ ಇದೀಗ ಮಾಜಿ ಆಟಗಾರರು, ಅಭಿಮಾನಿಗಳು, ಮುಖ್ಯವಾಹಿನಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ  ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದರೊಂದಿಗೆ ಟೀಮ್‌ ಇಂಡಿಯಾದ ಮಾಜಿ ನಾಯಕ ಧೋನಿ ನಾಯಕತ್ವ ತ್ಯಜಿಸಿದ ಬಳಿಕ ಟೀಮ್‌ ಇಂಡಿಯಾ ದಿಕ್ಕು ತಪ್ಪಿದೆ ಎಂದು ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ಇಂಡಿಯಾ-ಇಂಗ್ಲೆಂಡ್‌ ಸೆಮಿಫೈನಲ್‌ ಪಂದ್ಯದ ಬಳಿಕ ಎಂಎಸ್‌ ಧೋನಿ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ ಆಗಿದೆ.

Eedina App

ಎಂಎಸ್‌ ಧೋನಿ ನಾಯಕತ್ವ ತ್ಯಜಿಸಿದ ಬಳಿಕ ಟೀಮ್‌ ಇಂಡಿಯಾ ಯಾವುದೇ ಐಸಿಸಿ ಕೂಟಗಳಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. 2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ,  ಕೊನೆಯದಾಗಿ ಐಸಿಸಿ ಕೂಟದಲ್ಲಿ ಚಾಂಪಿಯನ್‌ ಆಗಿ ಮಿಂಚಿತ್ತು. ಆದರೆ ಆ ಬಳಿಕ ನಾಯಕ, ಆಟಗಾರರು, ಕೋಚ್‌ ಬದಲಾದರೂ ʻಫಲಿತಾಂಶʼದಲ್ಲೇನೂ ಸುಧಾರಣೆ ಕಂಡಿಲ್ಲ.

ಟಿ20 ವಿಶ್ವಕಪ್‌ ವಿಚಾರಕ್ಕೆ ಬರುವುದಾದರೆ, 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಟೀಮ್‌ ಇಂಡಿಯಾ, ಧೋನಿ ಸಾರಥ್ಯದಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಅತಿಹೆಚ್ಚು ಟಿ20 ಪಂದ್ಯಗಳಲ್ಲಿ ಭಾರತವನ್ನು ಗೆಲುವಿನೆಡೆಗೆ ಕೊಂಡೊಯ್ದ ದಾಖಲೆಯೂ (72 ಪಂದ್ಯ, 41 ಗೆಲುವು ) ಧೋನಿ ಹೆಸರಿನಲ್ಲಿದೆ.

AV Eye Hospital ad

1983ರಲ್ಲಿ ಐತಿಹಾಸಿಕ ಲಾರ್ಡ್ಸ್‌ನಲ್ಲಿ ಕಪಿಲ್‌ದೇವ್‌ ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಏಕದಿನ ವಿಶ್ವಕಪ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಅದಾದ ಬಳಿಕ 28 ವರ್ಷಗಳ ಬಳಿಕ ಧೋನಿ ಮುನ್ನಡೆಸಿದ್ದ ಟೀಮ್‌ ಇಂಡಿಯಾ, ತಾಯ್ನೆಲದಲ್ಲೇ 2ನೇ ಬಾರಿಗೆ ಪ್ರತಿಷ್ಠಿತ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಆ ಮೂಲಕ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ಗೆ ಸ್ಮರಣೀಯ ವಿದಾಯ ನೀಡುವಲ್ಲಿಯೂ ಧೋನಿ ಪಾತ್ರ ಪ್ರಮುಖವಾಗಿತ್ತು.

ಐಸಿಸಿ ಆಯೋಜಿಸುವ ಕೂಟಗಳಲ್ಲಿ ಧೋನಿ ನಾಯಕತ್ವದಲ್ಲಿ 12 ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದ ಭಾರತ, 9 ಬಾರಿ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. 3 ಬಾರಿ ಚಾಂಪಿಯನ್‌ ಪಟ್ಟವನ್ನೂ ಏರಿತ್ತು. ಕಪಿಲ್‌ದೇವ್‌, ಮುಹಮ್ಮದ್‌ ಅಝರುದ್ದೀನ್‌, ಸೌರವ್‌ ಗಂಗೂಲಿ, ವಿರಾಟ್‌ ಕೊಹ್ಲಿ (5 ಟೂರ್ನಿ), ರೋಹಿತ್‌ ಶರ್ಮಾ (1 ವಿಶ್ವಕಪ್‌)ಸೇರದಿಂತೆ 5 ಮಂದಿ ನಾಯಕರು 19 ಐಸಿಸಿ ಸೆಮಿಫೈನಲ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದರೂ ಸಹ ಕೇವಲ 9 ಪಂದ್ಯಗಳಲ್ಲಷ್ಟೇ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಕೇವಲ 1 ಬಾರಿ (1983 ಏಕದಿನ ವಿಶ್ವಕಪ್‌) ಮಾತ್ರ ಚಾಂಪಿಯನ್‌ ಆಗುವಲ್ಲಿ ಭಾರತ ಯಶಸ್ವಿಯಾಗಿದೆ.

ಧೋನಿ ಸಾರಥಿಯಾಗಿರುವ ವೇಳೆ ಟೀಮ್‌ ಇಂಡಿಯಾವನ್ನು ಮಣಿಸುವುದು ಎದುರಾಳಿಗಳಿಗೆ ಸುಲಭದ ಮಾತಾಗಿರಲಿಲ್ಲ. ಅಂತಿಮ ಓವರ್‌ನಲ್ಲೇ ಅದೆಷ್ಟೋ ಪಂದ್ಯಗಳಲ್ಲಿ ಅಸಾಧ್ಯವಾದ ಗುರಿಯನ್ನು ಧೋನಿ ಗಳಿಸಿದ್ದರು. ಹೀಗಾಗಿ ಮಿ.ಫಿನಿಶರ್‌ ಎಂಬ ಬಿರುದೂ ಸಹ ಧೋನಿ ಹೆಸರಿನೊಂದಿಗೆ ಸೇರಿಕೊಂಡಿತ್ತು.

ಆದರೆ ಧೋನಿ ನಿರ್ಗಮನದ ಬಳಿಕ ಐಸಿಸಿ ಟೂರ್ನಿಯ ಪ್ರಮುಖ ಘಟ್ಟದಲ್ಲಿ ಭಾರತ ಎಡವುತ್ತಿದೆ. 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021ರ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಭಾರತದ ಸೋಲಿನ ಸರಣಿ ಮುಂದುವರಿದಿದೆ.

ಹೀಗಾಗಿಯೇ ಭಾರತ ತಂಡಕ್ಕೆ ಧೋನಿ ಅಭಾವ ಬಹಳವಾಗಿ ಕಾಡುತ್ತಿದೆ ಎಂದು ಮಾಜಿ ಆಟಗಾರರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app