ಐಪಿಎಲ್‌ ಬಳಿಕ ಟೀಂ ಇಂಡಿಯಾಗೆ ವಿಶ್ರಾಂತಿಯೇ ಇಲ್ಲ; ಹೀಗಿದೆ ಬಿಗು ವೇಳಾಪಟ್ಟಿಯ ವಿವರ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯೊಂದಿಗೆ ಟೀಮ್‌ ಇಂಡಿಯಾದ ಸುದೀರ್ಘ ವೇಳಾಪಟ್ಟಿ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯುವ ಟಿ- 20 ವಿಶ್ವಕಪ್‌ ಕೂಟದವರೆಗೂ, ನಿರಂತರ ಆರು ತಿಂಗಳುಗಳ ಕ್ರಿಕೆಟ್‌, ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ದೊಡ್ಡ ಸವಾಲೊಡ್ಡಲಿದೆ. 
TEAM INDIA

ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಮುಕ್ತಾಯವಾಗುತ್ತಲೇ ಆಟಗಾರರು ರಾಷ್ಟ್ರೀಯ ತಂಡಗಳ ಶಿಬಿರಗಳಿಗೆ ಹಾಜರಾಗಿದ್ದಾರೆ. ಟೀಮ್ ಇಂಡಿಯಾ ಈ ವರ್ಷಾಂತ್ಯದವರೆಗೂ ಬಿಡುವಿಲ್ಲದ ವೇಳಾಪಟ್ಟಿ ಹೊಂದಿದೆ. ಬಯೋ ಬಬಲ್ ವ್ಯವಸ್ಥೆಯಲ್ಲಿ 2 ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದ ಆಟಗಾರರಲ್ಲಿ ಹೆಚ್ಚಿನವರು ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸರಣಿಗೆ ಆಯ್ಕೆಯಾದವರು ಜೂನ್ 5ರಂದು ದೆಹಲಿಯಲ್ಲಿ ಅಭ್ಯಾಸಕ್ಕೆ ಹಾಜರಾಗಲಿದ್ದಾರೆ. 

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ಟಿ- 20 ವಿಶ್ವಕಪ್ ಸರಣಿ ಮತ್ತು ಆಗಸ್ಟ್- ಸೆಪ್ಟಂಬರ್‌ನಲ್ಲಿ ಏಷ್ಯಾ ಕಪ್ ಸರಣಿ ನಡೆಯಲಿದೆ. ಈ ನಡುವೆ ಟೀಮ್ ಇಂಡಿಯಾ 25 ಪಂದ್ಯಗಳನ್ನೊಳಗೊಂಡ ಆರು ಟಿ- 20  ಸರಣಿ, ಎರಡು ಏಕದಿನ ಸರಣಿ ಹಾಗೂ ಇಂಗ್ಲೆಂಡ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ.

ಜೂನ್ 9ರಂದು ದಕ್ಷಿಣ ಆಫ್ರಿಕ ವಿರುದ್ಧದ ಟಿ20 ಸರಣಿಯೊಂದಿಗೆ ಟೀಮ್ ಇಂಡಿಯಾದ ಸುದೀರ್ಘ ಕ್ರಿಕೆಟ್ ಪಯಣ ಆರಂಭವಾಗಲಿದೆ. ಭಾರತದಲ್ಲಿ ನಡೆಯಲಿರುವ 5 ಪಂದ್ಯಗಳ ಟಿ-  20 ಸರಣಿ ಜೂನ್ 9ರಂದು ದೆಹಲಿಯಲ್ಲಿ ಆರಂಭವಾಗಲಿದ್ದು, ಜೂನ್ 19ರಂದು ಬೆಂಗಳೂರಿನಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಈ ಸರಣಿಯಲ್ಲಿ ಕೆ ಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಬಹುತೇಕ ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. 

ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧ ಟೆಸ್ಟ್- ಏಕದಿನ ಹಾಗೂ ಟಿ- 20 ಸರಣಿಯನ್ನಾಡಲು ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಜೂನ್ 16ರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳಸಲಿದೆ. 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಕಳೆದ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ, ಕೋವಿಡ್ ಕಾರಣದಿಂದಾಗಿ ಟೂರ್ನಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತಾಯ್ನಾಡಿಗೆ ಮರಳಿತ್ತು. ಈ ವೇಳೆ ಸರಣಿಯಲ್ಲಿ 2- 1 ಮುನ್ನಡೆ ಸಾಧಿಸಿತ್ತು. ಉಳಿದಿರುವ ಒಂದು ಪಂದ್ಯ ಜುಲೈ 1ರಿಂದ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.  ಇದಕ್ಕೂ ಮೊದಲು ಮೂರು ಅಭ್ಯಾಸ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಮೈದಾನಕ್ಕಿಳಿಯಲಿದೆ.

ದಕ್ಷಿಣ ಆಫ್ರಿಕ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೆ ಈಗಾಗಲೇ ಎರಡು ಪ್ರತ್ಯೇಕ ತಂಡಗಳನ್ನು ಬಿಸಿಸಿಐ ಪ್ರಕಟಿಸಿದೆ. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ವೇಗದ ಬೌಲರ್‌ಗಳಾದ ಜಮ್ಮು- ಕಾಶ್ಮೀರ ಮೂಲದ ಉಮ್ರಾನ್ ಮಲಿಕ್  ಮತ್ತು ಅರ್ಶ್‌ದೀಪ್‌ ಸಿಂಗ್ ಮೊದಲ ಬಾರಿಗೆ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಟೆಸ್ಟ್ ಪಂದ್ಯದ ಬಳಿಕ ಮೂರು ಪಂದ್ಯಗಳ ಟಿ- 20 ಸರಣಿ ಮತ್ತು ಜುಲೈ 12ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ನಡುವೆ ಜೂನ್ 26 ಮತ್ತು  28ರಂದು ಐರ್ಲೆಂಡ್ ವಿರುದ್ಧ ಡಬ್ಲಿನ್‌ನಲ್ಲಿ ಎರಡು ಪಂದ್ಯಗಳ ಕಿರು ಟಿ- 20 ಸರಣಿ ನಡೆಯಲಿದೆ. ಪ್ರಮುಖ ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ದಕ್ಷಿಣ ಆಫ್ರಿಕ ಸರಣಿಯಲ್ಲಿ ಆಡಿದ ತಂಡವೇ ಐರ್ಲೆಂಡ್ ವಿರುದ್ಧವೂ ಕಣಕ್ಕಿಳಿಯಲಿದೆ. ಈ ಸರಣಿಯಲ್ಲಿ ರಾಹುಲ್ ದ್ರಾವಿಡ್ ಬದಲಾಗಿ ಎನ್‌ಸಿಎ ಅಧ್ಯಕ್ಷ ವಿವಿಎಸ್ ಲಕ್ಷಣ್ ಟೀಮ್ ಇಂಡಿಯಾದ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಜುಲೈ 22ರಿಂದ ಭಾರತದ ವೆಸ್ಟ್ ಇಂಡೀಸ್ ಪ್ರವಾಸ ಆರಂಭವಾಗಲಿದ್ದು, ಆಗಸ್ಟ್ 7ಕ್ಕೆ ಕೊನೆಗೊಳ್ಳಲಿದೆ.  ಈ ಅವಧಿಯಲ್ಲಿ 5 ಪಂದ್ಯಗಳ ಟಿ- 20 ಸರಣಿ ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ನಂತರದಲ್ಲಿ ಏಷ್ಯಾ ಕಪ್ ಏಕದಿನ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ, ಶ್ರೀಲಂಕಾಗೆ ತೆರಳಲಿದೆ. ಏಷ್ಯಾ ಕಪ್ ಆರಂಭಕ್ಕೂ ಮೊದಲು ಅತಿಥೇಯ ಲಂಕಾ ವಿರುದ್ಧ ಎರಡು ಪಂದ್ಯಗಳ ಕಿರು ಟಿ- 20 ಸರಣಿಯನ್ನಾಡಲಿದೆ. ಆಗಸ್ಟ್ 7ರಂದು ಆರಂಭವಾಗಲಿರುವ ಏಷ್ಯಾ ಕಪ್ ಏಕದಿನ ಟೂರ್ನಿಯ ಫೈನಲ್ ಪಂದ್ಯ ಸೆಪ್ಟಂಬರ್ 11ರಂದು ನಡೆಯಲಿದೆ.

ಆ ಬಳಿಕ ಟೀಮ್ ಇಂಡಿಯಾ ತಾಯ್ನಾಡಿಗೆ ಮರಳಲಿದೆ. ಇದೇ ವೇಳೆಗೆ  ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, 3 ಟಿ-20 ಪಂದ್ಯಗಳ ಸರಣಿಯನ್ನಾಡಲಿದೆ. ಅಕ್ಟೋಬರ್ 16ರಿಂದ ಟಿ- 20 ವಿಶ್ವಕಪ್ ಕೂಟ ಪ್ರಾರಂಭವಾಗಲಿದ್ದು, ನವೆಂಬರ್ 13ರಂದು ಕೊನೆಗೊಳ್ಳಲಿದೆ. ಟಿ- 20 ವಿಶ್ವಕಪ್ ಸರಣಿ ಆಸ್ಟ್ರೇಲಿಯ ನೆಲದಲ್ಲಿ ನಡೆಯಲಿದ್ದು, ಇದಕ್ಕೂ ಮೊದಲು ಆಸ್ಟ್ರೇಲಿಯ ವಿರುದ್ಧವೇ ಟಿ- 20 ಪಂದ್ಯವನ್ನಾಡುವುದು ಟೀಮ್ ಇಂಡಿಯಾಗೆ ಲಾಭದಾಯಕವಾಗಲಿದೆ. ಆದರೆ ನಿರಂತರ ಕ್ರಿಕೆಟ್ ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ದೊಡ್ಡ ಸವಾಲೊಡ್ಡಲಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್