ಕಾಮನ್‌ವೆಲ್ತ್ ಗೇಮ್ಸ್ ಕೂಟದಿಂದ ಹಿಂದೆ ಸರಿದ ನೀರಜ್ ಚೋಪ್ರಾ

  • ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯ ತಂಡಕ್ಕೆ ತೀವ್ರ ಹಿನ್ನಡೆ
  • ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಚೋಪ್ರಾ

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ, ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿಯಲಿದ್ದಾರೆ. 

ಗುರುವಾರದಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಕ್ರೀಡಾಕೂಟದಲ್ಲಿ ಚೋಪ್ರಾ ಅನುಪಸ್ಥಿತಿಯಿಂದಾಗಿ ಭಾರತೀಯ ತಂಡ ತೀವ್ರ ಹಿನ್ನಡೆ ಅನುಭವಿಸಿದಂತಾಗಿದೆ. ಇತ್ತೀಚೆಗಷ್ಟೇ ಅಮೆರಿಕದ ಒರೆಗಾನ್‌ನಲ್ಲಿ ಮುಕ್ತಾಯವಾದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚೋಪ್ರಾ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದರು. ಅದು ಅಥ್ಲೆಟಿಕ್ಸ್‌ ಕೂಟದಲ್ಲಿ ಭಾರತ ತಂಡಕ್ಕೆ ಲಭಿಸಿದ ಏಕೈಕ ಪದಕವಾಗಿತ್ತು.

ವಿಶ್ವ ಚಾಂಪಿಯನ್‌ಷಿಪ್‌ ಕೂಟದ ವೇಳೆ ಚೋಪ್ರಾರಿಗೆ ಕಾಲಿಗೆ ಗಾಯವಾಗಿತ್ತು. ಗಾಯದ ನಡುವೆಯೂ ಸ್ಪರ್ಧೆ ಮುಂದುವರಿಸಿದ್ದ ಒಲಿಂಪಿಕ್ಸ್ ಪದಕ ವಿಜೇತ ಅಮೋಘ ಪ್ರದರ್ಶನ ನೀಡಿದ್ದರು. ಆದರೆ ಇದೀಗ ಗಾಯದ ಸಮಸ್ಯೆ ಹೆಚ್ಚಾದ ಕಾರಣ ಕಾಮನ್‌ವೆಲ್ತ್ ಕೂಟದಿಂದ ಹಿಂದೆ ಸರಿಯಲು ನೀರಜ್ ನಿರ್ಧರಿಸಿದ್ದಾರೆ. 

ಈ ಸುದ್ದಿಓದಿದ್ದೀರಾ? 17 ವರ್ಷಗಳ ಹಿಂದಿನ ಧೋನಿ ದಾಖಲೆ ಮುರಿದ ಅಕ್ಷರ್‌ ಪಟೇಲ್‌

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕಾರಣ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಬಳಿಕ ಮಾತನಾಡಿದ್ದ ನೀರಜ್ ಚೋಪ್ರಾ, ಕಾಮನ್‌ವೆಲ್ತ್‌ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದರು. ಆದರೆ ಇದೀಗ ಗಾಯದ ಕಾರಣ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಜಾವೆಲಿನ್ ಎಸೆತದಲ್ಲಿ ಭಾರತದ ಚಿನ್ನದ ಕನಸು ಕೂಡ ಬಹುತೇಕ ಕಮರಿದೆ. ಆಗಸ್ಟ್ 7ರಂದು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ  ಜಾವೆಲಿನ್ ಸ್ಪರ್ಧೆ ನಡೆಯಲಿದೆ. ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್‌ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್